ನವದೆಹಲಿ: ಸಂಜಯ್ ಲೀಲಾ ಬನ್ಸಾಲಿ ಬಹುನಿರೀಕ್ಷೆಯ ಪದ್ಮಾವತಿ ಸಿನಿಮಾದ ಸುತ್ತ ವಿವಾದ ಹೆಚ್ಚತೊಡಗಿದ್ದು, ಸಿನಿಮಾ ಇತಿಹಾಸವನ್ನು ತಿರುಚಿ ಪದ್ಮಾವತಿ ಸಿನಿಮಾ ನಿರ್ಮಾಣ ಮಾಡಲಾಗಿದೆ ಎಂದು ಗುಜರಾತ್ ಬಿಜೆಪಿ ಗಂಭೀರವಾಗಿ ಆರೋಪಿಸಿದೆ.
ಇತಿಹಾಸ ತಿರುಚಿರುವ ಪದ್ಮಾವತಿ ಸಿನಿಮಾ ಬಿಡುಗಡೆಗೆ ತಡೆಕೋರಿ ಚುನಾವಣಾ ಆಯೋಗಕ್ಕೆ ಬಿಜೆಪಿ ಪತ್ರ ಬರೆಯಲಿದೆ ಎಂದು ಗುಜರಾತ್ ಬಿಜೆಪಿ ವಕ್ತಾರ ಐಕೆ ಜಡೇಜಾ ಘೋಷಿಸಿದ್ದು, ಸಿನಿಮಾದ ಬಗ್ಗೆ ಮರುಪರಿಶೀಲನೆ ನಡೆಸಬೇಕೆಂದು ಸೆನ್ಸಾರ್ ಮಂಡಳಿಗೂ ಪತ್ರ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
ಬನ್ಸಾಲಿ ಅವರ ಸಿನಿಮಾದಲ್ಲಿ ಐತಿಹಾಸಿಕ ಸತ್ಯವನ್ನು ತಿರುಚಲಾಗಿದೆ ಎಂದು ಕ್ಷತ್ರೀಯ ಸಮುದಾಯದ ಪ್ರತಿನಿಧಿಗಳಿಂದ ಹಲವು ದೂರುಗಳನ್ನು ಸ್ವೀಕರಿಸಿರುವುದಾಗಿ ಜಡೇಜಾ ಹೇಳಿದರು. ಮುಂಬರುವ ಗುಜರಾತ್ ಚುನಾವಣಾ ದೃಷ್ಟಿಯ ಹಿನ್ನೆಲೆಯಲ್ಲಿ ಅನಗತ್ಯ ಗೊಂದಲ ತಪ್ಪಿಸುವ ನಿಟ್ಟಿನಲ್ಲಿ ಪದ್ಮಾವತಿ ಸಿನಿಮಾ ಬಿಡುಗಡೆಗೂ ಮುನ್ನ ಚುನಾವಣಾ ಆಯೋಗ ಸಿನಿಮಾದ ಪೂರ್ವ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಪದ್ಮಾವತಿ ಮತ್ತು ಅಲ್ಲಾವುದ್ದೀನ್ ಖಿಲ್ಜಿ ನಿಜ ಜೀವನದಲ್ಲಿ ಯಾವತ್ತೂ ಭೇಟಿ ಆಗಿಲ್ಲ ಎಂದು ಬಿಜೆಪಿ ಮುಖಂಡ ಜಡೇಜಾ ಆರೋಪಿಸಿದ್ದಾರೆ. ಪದ್ಮಾವತಿ ಸಿನಿಮಾ ರಜಪೂತ್ ಸಮುದಾಯದವರ ಭಾವನೆಗಳಿಗೆ ಧಕ್ಕೆ ತರುವಂತಿದೆ. ಹೀಗಾಗಿ ಸಿನಿಮಾವ ಪ್ರದರ್ಶನಕ್ಕೆ ನಿಷೇಧ ಹೇರಬೇಕೆಂದು ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಜಯ್ ಕುಮಾರ್ ರಾವಾಲ್ ಆಗ್ರಹಿಸಿದ್ದಾರೆ.
ಐತಿಹಾಸಿಕ ನಾಟಕ ರಾಣಿ ಪದ್ಮಾವತಿ ಮತ್ತು ದೆಹಲಿ ಸುಲ್ತಾನ್ ಅಲ್ಲಾವುದ್ದೀನ್ ಖಿಲ್ಜಿ ಕಥಾವಸ್ತುವನ್ನೊಳಗೊಂಡ ಪದ್ಮಾವತಿ ಸಿನಿಮಾವನ್ನು ಬನ್ಸಾಲಿ ನಿರ್ದೇಶಿಸಿದ್ದು, ಡಿಸೆಂಬರ್ 1ರಂದು ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದಲ್ಲಿ ಪದ್ಮಾವತಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ, ರತನ್ ಸಿಂಗ್ ಆಗಿ ಶಾಹಿದ್ ಕಪೂರ್ ನಟಿಸಿದ್ದಾರೆ.