Advertisement

ಜಲರಾಶಿಯ ನಡುವೆ ನೆಲೆಸಿಹಳು ಪದ್ಮಾವತಿ ದೇವಿ

11:11 PM Dec 07, 2020 | Karthik A |

ಸೆಮಿಸ್ಟರ್‌ ಪರೀಕ್ಷೆ ಮುಗಿದು ಒಂದು ತಿಂಗಳ ಕಾಲ ರಜೆಯಿತ್ತು. ಹೀಗಾಗಿ ಈ ರಜೆಯಲ್ಲಿ ಎಲ್ಲಾದರು ಪ್ರವಾಸ ಹೋಗಬೇಕೆಂದು ನಿರ್ಧರಿಸಿದ್ದೆ.

Advertisement

ನನ್ನ ಈ ನಿರ್ಧಾರಕ್ಕೆ ಸಹಮತಿ ನೀಡಿದವರು ಮನೆಮಂದಿ. ಅನಂತರ ಎಲ್ಲಿಗೆ ಹೋಗೋಣವೆಂದು ಆಲೋಚಿಸುತ್ತಿದ್ದಾಗ ನೆನಪಿಗೆ ಬಂದದ್ದು ಕಾರ್ಕಳದ ಸಮೀಪದಲ್ಲಿರುವ ವರಂಗ ಜೈನ ಬಸದಿ.

ಅದರಂತೆ ಮುಂಜಾನೆ ಸುಮಾರು 6.30ರ ಹೊತ್ತಿಗೆ ಉಪ್ಪಿನಂಗಡಿಯಿಂದ ವರಂಗ ಬಸದಿಯತ್ತ ಹೊರಟೆವು. ಆಗಷ್ಟೇ ಸೂರ್ಯ ಚಳಿಯಲ್ಲಿ ಮೈ ಬಿಸಿ ಮಾಡಿಸುತ್ತಾ ಬೆಳಕ ಪಸರಿಸುವ ಕೆಲಸ ಮಾಡುತ್ತಿದ್ದ. ಮಂಜಿನ ಹನಿಗಳು ಬಂದು ತಲೆಯ ಮೇಲೆ ಕುಳಿತುಕೊಳ್ಳುತ್ತಿದ್ದವು. ಈ ಸಮಯದಲ್ಲಿ ಮನೆಮಂದಿಯೆಲ್ಲಾ ಹರಟುತ್ತಾ ಮುಂದೆ ಸಾಗಿದೆವು.

ಬಜಗೋಳಿ ತಲುಪುತ್ತಿದ್ದಂತೆ ಹೊಟ್ಟೆ ಹಸಿವಾಗಲು ಶುರುವಾಯಿತು. ಅಲ್ಲೇ ಇದ್ದ ಹೊಟೇಲೊಂದರಲ್ಲಿ ಬೆಳಗ್ಗಿನ ಉಪಾಹಾರ ಸೇವಿಸಿ ಮತ್ತೆ ನಮ್ಮ ಸವಾರಿ ಮುಂದುವರೆಸಿದೆವು. ದಾರಿ ಸಾಗುತ್ತಿದ್ದಂತೆ ಪ್ರಕೃತಿಯ ಸೊಬಗು ನಮ್ಮನ್ನು ಸ್ವಾಗತಿಸುವಂತೆ ಭಾಸವಾಗುತ್ತಿತ್ತು. ತಿರುವು ಮುರುವು ರಸ್ತೆಯಲ್ಲಿ ಸಂಚರಿಸುತ್ತಾ ಆಕಾಶದೆತ್ತರಕ್ಕೆ ತಲೆಬಾಗಿ ನಿಂತಿರುವ ಮರಗಳನ್ನು ಬೆರಗುಗಣ್ಣಿನಿಂದ ನೋಡಿಕೊಂಡು ಮುಂದೆ ಸಾಗಿದೆವು.

ಸುತ್ತಲೂ ಪ್ರಶಾಂತವಾದ ವಾತಾವರಣ. ಮುಗಿಲಿಗೆ ಮುತ್ತಿಡುತ್ತಾ, ಹಸಿರನ್ನೇ ಹೊದ್ದು ಮಲಗಿದ ಬೆಟ್ಟದ ಸಾಲು. ಇನ್ನೊಂದೆಡೆ ವಿಶಾಲವಾಗಿ ಹರಡಿಕೊಂಡಿರುವ ಭತ್ತದ ಗದ್ದೆಗಳು. ವರ್ಷವಿಡೀ ನೀರಿನಿಂದ ತುಂಬಿ ತುಳುಕುವ ಕೆರೆ. ಇದರ ಮಧ್ಯೆ ತೇಲುವ ಮಂಜುಗಡ್ಡೆಯಂತಿರುವ ಜೈನ ಬಸದಿ. ಇದುವೇ ಜೈನರ ಪವಿತ್ರ ಪದ್ಮಾವತಿ ದೇವಿ ಬಸದಿ.

Advertisement

ಅತ್ಯಂತ ವಿಶಿಷ್ಟ ಎನ್ನಬಹುದಾದಂತಹ ಈ ಬಸದಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಸಮೀಪದಲ್ಲಿ ಸಿಗುವ ವರಂಗ ಎಂಬ ಪುಟ್ಟ ಹಳ್ಳಿಯಲ್ಲಿದೆ. ನಿಶ್ಯಬ್ಧವಾದ ಇಲ್ಲಿನ ವಾತಾವರಣ ಪ್ರಕೃತಿ ಪ್ರಿಯರ ಮನಸ್ಸನ್ನು ಸೆಳೆದು ಬಿಡುತ್ತದೆ. ಸುಮಾರು ಹದಿನಾಲ್ಕು ಎಕರೆ ವಿಸ್ತಾರವಾಗಿ ಸದಾ ಮೂರು ಋತುಗಳಲ್ಲಿಯೂ ತುಂಬಿರುವ ಕೆರೆಯ ನಡುವೆ ನಕ್ಷತ್ರಾಕೃತಿಯಲ್ಲಿ ಬಸದಿ ಇದೆ.

ಕೆರೆಯ ನಡುವಿನಲ್ಲಿರುವ ಬಸದಿಯನ್ನು ತಲುಪಲು ಇರುವ ಏಕೈಕ ಮಾರ್ಗ ದೋಣಿ. ನೀರಿನ ದಾರಿಯುದ್ದಕ್ಕೂ ನಲಿದಾಡುವ ಕಮಲದ ಹೂವುಗಳ ಬಿನ್ನಾಣ. ಅವುಗಳನ್ನು ಸೀಳಿಕೊಂಡು ಸುಮಾರು ನೂರೈವತ್ತು ಮೀಟರ್‌ ದೂರ ದೋಣಿಯಲ್ಲಿ ಕುಳಿತು ಅತ್ತಿತ್ತ ವಾಲುತ್ತಾ ಬಸದಿಯೆಡೆಗೆ ಸಾಗುವುದೇ ರೋಮಾಂಚಕ ಅನುಭವ. ಬಸದಿಯ ಕಟ್ಟೆಯನ್ನು ಹತ್ತಿ ಬಂದ ದಾರಿಯತ್ತ ಕಣ್ಣು ಹಾಯಿಸಿದಾಗ ಕಾಣುವುದು ತಾವರೆಯ ಹೂವುಗಳ ಚೆಲುವು ಮತ್ತು ಜಲರಾಶಿ. ಅಂದಹಾಗೆ ದೋಣಿಯಲ್ಲಿ ಸಾಗಲು 10 ರೂ.ಗಳನ್ನು ನಿಗದಿ ಪಡಿಸಲಾಗಿದೆ. ಈಜುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಬಸದಿಯಲ್ಲಿ ಪ್ರತೀದಿನ ಮೂರು ಹೊತ್ತು ಪೂಜೆ ನಡೆಯುತ್ತದೆ.  ವಿಶಾಲವಾದ ವಾರಿಧಿಯ ಮಧ್ಯೆ ನೆಲೆಸಿರುವ ಪದ್ಮಾವತಿ ದೇವಿಯು ಭಕ್ತರ ಇಷ್ಟಗಳನ್ನು ಪೂರೈಸುತ್ತಾಳೆ ಎನ್ನುವ ನಂಬಿಕೆಯಿದೆ. ಕೆರೆಯ ಮಧ್ಯದ‌ಲ್ಲಿ ಬಸದಿ ಇರುವುದರಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಪ್ರತಿನಿತ್ಯ ಸಾಕಷ್ಟು ಮಂದಿ ಪ್ರವಾಸಿಗರು ಇಲ್ಲಿಗೆ ಬಂದು ಹೋಗುತ್ತಾರೆ.

ವರಂಗ ಜೈನ ಬಸದಿ ಯಾತ್ರಾರ್ಥಿಗಳಿಗೆ ಪಾಲಿಗಂತೂ ನೆಚ್ಚಿನ ಕ್ಷೇತ್ರ. ಉತ್ತರ ಭಾರತದ ಭಕ್ತರು ಅಧಿಕ ಸಂಖ್ಯೆಯಲ್ಲಿ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಮನೆಮಂದಿಯೆಲ್ಲಾ ವರಂಗ ಬಸದಿಯ ವಿಶೇಷತೆಗಳನ್ನು ಕಂಡು ಖುಷಿ ಪಟ್ಟೆವು. ಫೋಟೋ, ಸೆಲ್ಫಿಗಳನ್ನು ಕ್ಲಿಕ್ಕಿಸುತ್ತಾ ನೆನಪುಗಳನ್ನು ಕೂಡಿಡುವ ಕೆಲಸ ಮಾಡತೊಡಗಿದೆವು. ಇದರ ನಡುವೆ ನಾವು ಹಿಂತಿರುಗುವ ಸಮಯ ಬಂದಿತ್ತು. ಕತ್ತಲು ಸರಿಯುತ್ತಿದ್ದಂತೆ ಮನೆ ಸೇರುವ ತವಕದೊಂದಿಗೆ ವರಂಗದ ನೆನಪುಗಳನ್ನು ಮೆಲುಕು ಹಾಕುತ್ತಾ ಹಿಂತಿರುಗಿದೆವು.

ವರಂಗ ಬಸದಿಯ ಪ್ರದೇಶದಲ್ಲಿ ಯಾವುದೇ ಅಂಗಡಿಗಳಾಗಲಿ, ಹೊಟೇಲುಗಳಾಗಲಿ ಇಲ್ಲ. ಹೀಗಿರುವಾಗ ಹೊರಗಿನಿಂದಲೇ ಆಹಾರ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬೇಕು. ಆದರೆ ಬಸದಿಯ ಸ್ವತ್ಛತೆಯನ್ನು ಕಾಪಾಡುವುದು ಪ್ರತೀಯೊಬ್ಬ ಪ್ರವಾಸಿಗನ ಕರ್ತವ್ಯ.

ಎಷ್ಟು ದೂರ?
ಮಂಗಳೂರಿನಿಂದ 76 ಕಿ.ಮೀ, ಉಡುಪಿಯಿಂದ 36 ಕಿ.ಮೀ, ಕಾರ್ಕಳದಿಂದ 26 ಕಿ.ಮೀ ಹಾಗೂ ಹೆಬ್ರಿಯಿಂದ 9 ಕಿ.ಮೀ ದೂರವಿದೆ. ಕಾರ್ಕಳ ಅಥವಾ ಹೆಬ್ರಿಗೆ ಬಂದರೆ ಖಾಸಗಿ ಬಸ್‌ಗಳ ಮೂಲಕ ವರಂಗ ಬಸದಿಯನ್ನು ತಲುಪಬಹುದು. ಅಥವಾ ಸ್ವಂತ ವಾಹನದ ಮೂಲಕವಾಗಿಯೂ ಸಂದರ್ಶಿಸಬಹುದು.

ಬಸದಿಯ ವಿಶೇಷತೆ
ಜಲರಾಶಿಯ ಮಧ್ಯದಲ್ಲಿ ವಿಶಿಷ್ಟವಾಗಿ ನಿರ್ಮಾಣವಾಗಿರುವ ಬಸದಿಯು ತನ್ನ ಒಡಲಾಳದಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಜೈನಧರ್ಮದ ತೀರ್ಥಂಕರರಾದ ಪಾರ್ಶ್ವನಾಥ, ನೇಮಿನಾಥ, ಶಾಂತಿನಾಥ ಮತ್ತು ಅನಂತನಾಥರ ವಿಗ್ರಹಗಳನ್ನು ಕರಿಶಿಲೆಯಲ್ಲಿ ಖಡ್ಗಾಸನ ಭಂಗಿಯಲ್ಲಿ ಕೆತ್ತಿರುವುದು ಇಲ್ಲಿನ ವಿಶೇಷತೆ. ಈ ಕ್ಷೇತ್ರವು ಹೊಯ್ಸಳ ಮತ್ತು ಚಾಲುಕ್ಯರ ಶಿಲ್ಪಕಲಾ ಶೈಲಿಯ ಸಮ್ಮಿಶ್ರಣವಾಗಿದ್ದು, ವಿಗ್ರಹಗಳ ಎರಡೂ ಬದಿಯಲ್ಲಿ ಯಕ್ಷ-ಯಕ್ಷಿಯರ ಬಿಂಬಗಳಿವೆ.

ಪೂರ್ವದಲ್ಲಿ ಪಾರ್ಶ್ವನಾಥ ಸ್ವಾಮಿಯ ವಿಗ್ರಹದ ಪಕ್ಕದಲ್ಲಿ ಪದ್ಮಾವತಿ ದೇವಿಯ ವಿಗ್ರಹವಿದೆ. ಅವಳೇ ಇಲ್ಲಿನ ಪ್ರಧಾನ ದೇವತೆ. ಬಸದಿಯ ನಾಲ್ಕು ದಿಕ್ಕಿನಿಂದಲೂ ಏಕರೂಪವಾದ ಪ್ರವೇಶದ್ವಾರವಿದ್ದು, ಪ್ರತಿಯೊಂದು ದಿಕ್ಕಿಗೂ ಒಂದೇ ಅಳತೆಯ ಮುಖ ಮಂಟಪಗಳಿವೆ. ಪ್ರವೇಶ ದ್ವಾರದ ಹೊರಭಾಗದಲ್ಲಿ ಪ್ರದಕ್ಷಿಣೆ ಹಾಕಲು ಅನುಕೂಲವಾಗುವಂತೆ ಪ್ರದಕ್ಷಿಣಾ ಪಥವಿದೆ.

ಇದನ್ನು ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಿಸಿರುವುದು ವಿಶೇಷತೆ. ಹೊರಾಂಗಣದಲ್ಲಿ ಬಾವಿಯಿದೆ. ಬಸದಿಯನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next