Advertisement

ಪದ್ಮಾವತ್‌ಗೆ ನಿರಾತಂಕ

06:40 AM Jan 24, 2018 | Team Udayavani |

ನವದೆಹಲಿ: ವಿವಾದಾತ್ಮಕ ಪದ್ಮಾವತ್‌ ಸಿನಿಮಾ ಬಿಡುಗಡೆಗೆ ಅವಕಾಶ ನೀಡಿ ಹೊರಡಿಸಿದ್ದ ತೀರ್ಪನ್ನು ಮರುಪರಿಶೀಲಿಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದ್ದು, ಮಧ್ಯಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳಿಗೆ ತೀವ್ರ ಮುಖಭಂಗವಾಗಿದೆ. ತೀರ್ಪಿಗೆ ತಿದ್ದುಪಡಿ ತರುವಂತೆ ಕೋರಿ ಎರಡೂ ರಾಜ್ಯ ಸರ್ಕಾರಗಳು ಸೋಮವಾರ ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದರು.

Advertisement

ಮಂಗಳವಾರ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ಪೀಠ, “ಯಾವ ಕಾರಣಕ್ಕೂ ತೀರ್ಪಿಗೆ ತಿದ್ದುಪಡಿ ತರುವುದಿಲ್ಲ. ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದ ಮೇಲೆ ಅದನ್ನು ಪಾಲಿಸಲೇಬೇಕು. ಜ.25ರಂದು ಸಿನಿಮಾ ಬಿಡುಗಡೆಯಾಗಲಿ. ಅದಕ್ಕೆ ತಡೆಯೊಡ್ಡಬಾರದು’ ಎಂದಿತು. ಜತೆಗೆ, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವುದು ಆಯಾ ಸರ್ಕಾರಗಳ ಜವಾಬ್ದಾರಿ. ಒಂದು ವೇಳೆ ಪರಿಸ್ಥಿತಿ ಕೈಮೀರಿದರೆ ಆಗ ಬೇಕಿದ್ದರೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಎಂದೂ ಹೇಳಿದ ನ್ಯಾಯಪೀಠ, ಎರಡೂ ರಾಜ್ಯಗಳ ಅರ್ಜಿಯನ್ನು ವಜಾ ಮಾಡಿತು. ಇದೇ ವೇಳೆ, ಕರ್ಣಿ ಸೇವಾ ಸಲ್ಲಿಸಿದ್ದ ಅರ್ಜಿಯನ್ನೂ ವಜಾ ಮಾಡಲಾಯಿತು. ಇದರ ಬೆನ್ನಲ್ಲೇ, ರಾಜಸ್ಥಾನದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಈ ನಡುವೆ, ನಟಿ ದೀಪಿಕಾ ಪಡುಕೋಣೆ ಮಂಗಳವಾರ ಮುಂಬೈನ ಸಿದ್ಧಿವಿನಾಯಕ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಗುರುವಾರ ಪದ್ಮಾವತ್‌  ತೆರೆಕಾಣಲಿದೆ.

ಚಿತ್ರಮಂದಿರಗಳಿಗೆ ಬಾಂಬ್‌: ಸುಪ್ರೀಂ ಆದೇಶದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಉತ್ತರಪ್ರದೇಶದ ಅಖೀಲ ಭಾರತೀಯ ಕ್ಷತ್ರಿಯ ಮಹಾಸಭಾದ ಸದಸ್ಯರೊಬ್ಬರು, “ಸಿನಿಮಾ ಪ್ರದರ್ಶನ ಮಾಡುವ ಚಿತ್ರಮಂದಿರಗಳಲ್ಲಿ ಬಾಂಬ್‌ ಸ್ಫೋಟಿಸುತ್ತೇವೆ’ ಎಂದು ಬೆದರಿಕೆ ಹಾಕಿದ್ದಾರೆ. ಇನ್ನೊಂದೆಡೆ, ಕರ್ಣಿ ಸೇನಾ ಕೂಡ ಪ್ರತಿಕ್ರಿಯಿಸಿದ್ದು, ದೇಶಾದ್ಯಂತ ಸಿನಿಮಾ ಮಂದಿರಗಳಲ್ಲಿ ಜನರ ಕರ್ಫ್ಯೂ ಇರಲಿದೆ. ಪ್ರದರ್ಶನವನ್ನು ಜನರೇ ಸ್ಥಗಿತಗೊಳಿಸಲಿದ್ದಾರೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next