Advertisement

ಗಮಕ ಗಂಧರ್ವ, ಪದ್ಮಶ್ರೀ ಪುರಸ್ಕೃತ ಎಚ್.ಆರ್.ಕೇಶವಮೂರ್ತಿ ವಿಧಿವಶ

06:04 PM Dec 21, 2022 | Team Udayavani |

ಶಿವಮೊಗ್ಗ: ಗಮಕ ಕಲೆಯಿಂದಲೇ ದೇಶದಲ್ಲೇ ಪ್ರಸಿದ್ಧಿ ಪಡೆದಿದ್ದ ಎಚ್.ಆರ್.ಕೇಶವಮೂರ್ತಿ ಅವರು (88) ಬುಧವಾರ ನಿಧನರಾದರು.

Advertisement

ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದರು.

1934ರ ಫೆ.22 ರಂದು ಹೊಸಹಳ್ಳಿ ರಾಮಸ್ವಾಮಿ ಶಾಸ್ತ್ರಿ ಮತ್ತು ಲಕ್ಷ್ಮೀದೇವಮ್ಮ ದಂಪತಿಯ ಪುತ್ರರಾಗಿ ಜನಿಸಿದ ಇವರು ಬಾಲ್ಯದಿಂದಲೇ ಗಮಕ ಕಲೆ ಕರಗತ ಮಾಡಿಕೊಂಡಿದ್ದರು. ತಂದೆ-ತಾಯಿ ರಾಗವಾಗಿ ಹಾಡುತ್ತಿದ್ದ ಪುರಾಣಗಳಿಂದ ಉತ್ತೇಜಿತರಾಗಿ, 16 ನೇ ವಯಸ್ಸಿನಿಂದ ಗ್ರಾಮದ ವೆಂಕಟೇಶಯ್ಯ ಅವರ ಬಳಿ ಗಮಕ ವಾಚನ ಅಧ್ಯಯನ ಆರಂಭಿಸಿದ್ದರು. ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿ ವಾಚನ ಮಾಢುವುದನ್ನು ರೂಢಿಸಿಕೊಂಡ ಅವರು, 100 ಕ್ಕೂ ಅಧಿಕ ವಿಭಿನ್ನ ರಾಗಗಳಲ್ಲಿ ವಾಚನ ಮಾಡುವ ಮೂಲಕ “ಶತರಾಗಿ” ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಶಾಂತಲನಾಟ್ಯಶ್ರೀ ಪ್ರಶಸ್ತಿ, ಕುಮಾರವ್ಯಾಸ ಪ್ರಶಸ್ತಿ ಸೇರಿದಂತೆ 2022 ರಲ್ಲಿ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು.

ಹೊಸಹಳ್ಳಿಯ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾಗಿ ಗಮಕ ತರಗತಿಗಳನ್ನು ನಡೆಸಿ, ಮತ್ತೂರು ಶಿವಮೊಗ್ಗ ಮುಂತಾದೆಡೆ ನೂರಾರು ವಿದ್ಯಾರ್ಥಿಗಳಿಗೆ ಗಮಕ ಶಿಕ್ಷಣ ನೀಡಿದ ಹಿರಿಮೆ ಕೇಶವಮೂರ್ತಿ ಅವರದ್ದು. ಡಾ. ಮತ್ತೂರು ಕೃಷ್ಣಮೂರ್ತಿ ಮತ್ತು ಕೇಶವಮೂರ್ತಿಗಳ ಜೋಡಿ ಜಗತ್ಪ್ರಸಿದ್ಧವಾಗಿದೆ. ಇವರಿಬ್ಬರ ವಾಚನ ವ್ಯಾಖ್ಯಾನದಲ್ಲಿ ಕುಮಾರವ್ಯಾಸ ಭಾರತದ 200 ಕ್ಯಾಸೆಟ್ಟುಗಳು ಬಿಡುಗಡೆಯಾಗಿವೆ.

ಸಂತಾಪ
ರಾಜ್ಯದ ಮೂಲೆ ಮೂಲೆಗೂ ಗಮಕ ಕಲೆಯ ಘಮವನ್ನು ಬೀರಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹೊಸಹಳ್ಳಿಯ ಎಚ್.ಆರ್.ಕೇಶವಮೂರ್ತಿಯವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದು, ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಸಂಸದರಾದ ಬಿ.ವೈ.ರಾಘವೇಂದ್ರ ಇವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 89 ವರ್ಷದ ಕೇಶವಮೂರ್ತಿಗಳು ಗಮಕ ಕ್ಷೇತ್ರದಲ್ಲಿ ಪರಿಣಿತರಾಗಿದ್ದು ತಮ್ಮ ಜೀವನವನ್ನು ಗಮಕ ಕಲೆಗಾಗಿಯೇ ಮುಡಿಪಾಗಿರಿಸಿದ್ದರು. ಶ್ರೀಯುತರ ಅಗಲಿಕೆಯು ತೀವ್ರ ನೋವನ್ನು ತಂದಿದ್ದು, ಭಗವಂತ ಕುಟುಂಬ ಮತ್ತು ಸಮಾಜಕ್ಕೆ ಈ ನೋವು ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

Advertisement

ಇದನ್ನೂ ಓದಿ: ಫುಟ್ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಬಳಿ ಇವೆ ದುಬಾರಿ ಕಾರುಗಳು… ಬೆಲೆ ಎಷ್ಟು ಗೊತ್ತಾ

Advertisement

Udayavani is now on Telegram. Click here to join our channel and stay updated with the latest news.

Next