ಉಳ್ಳಾಲ : ಕೇಂದ್ರ ಸರಕಾರ 2020ರ ಸಾಲಿನಲ್ಲಿ ಪ್ರಕಟಿಸಿದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ನ.8ರಂದು ದೆಹಲಿಗೆ ಆಗಮಿಸುವಂತೆ ಅಕ್ಷರ ಸಂತ ಮಂಗಳೂರಿನ ಹರೇಕಳ ಹಾಜಬ್ಬ ಅವರಿಗೆ ಕೇಂದ್ರ ಗೃಹಸಚಿವಾಲಯದಿಂದ ಬುಧವಾರ ಅಧಿಕೃತ ಅಹ್ವಾನ ಬಂದಿದೆ.
ಶೈಕ್ಷಣಿಕ ಕ್ಷೇತ್ರದ ಅಸಾಮಾನ್ಯ ಸಾಧನೆಗೆ ಕಿತ್ತಳೆ ಹಣ್ಣು ವ್ಯಾಪಾರಿ ಹಾಜಬ್ಬ ಅವರಿಗೆ ಈ ಪ್ರಶಸ್ತಿ ಸಲ್ಲಲಿದೆ. ಮಂಗಳೂರು ಬೀದಿಯಲ್ಲಿ ಬುಟ್ಟಿಯಲ್ಲಿ ಕಿತ್ತಾಳೆ ಹಣ್ಣು ವ್ಯಾಪಾರ ಮಾಡುತ್ತ ಗ್ರಾಮೀಣ ಪ್ರದೇಶವಾದ ಹರೇಕಳ ನ್ಯೂಪಡ್ಪುವಿನಲ್ಲಿ ಸರಕಾರಿ ಶಾಲೆ ಆರಂಭಿಸಲು ಶ್ರಮವಹಿಸಿ ಕಿತ್ತಾಳೆ ಹಣ್ಣಿನಲ್ಲಿ ಬಂದ ಲಾಭದ ಹಣವನ್ನು ಶಾಲೆಯ ಅಭಿವೃದ್ಧಿಗೆ ತೊಡಗಿಸುವುದರೊಂದಿಗೆ ಶಾಲೆಗೆ ದಾನಿಗಳಿಂದ ಅನುದಾನ ಪಡೆಯುವಲ್ಲಿ ಮತ್ತು ಸರಕಾರಿ ಮಟ್ಟದಲ್ಲಿ ಅನುದಾನ ತರುವಲ್ಲಿ ಶ್ರಮಿಸಿದ್ದರು.
ಶಿಕ್ಷಣ ಅಭಿವೃದ್ಧಿಗೆ ಶ್ರಮಿಸಿದ ಅವರಿಗೆ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿಗಳು ಸಂದಿದ್ದು ಪ್ರಶಸ್ತಿಗೆ ಸಂದ ನಗದು ಮೊತ್ತವನ್ನು ಶಾಲೆಯ ಅಭಿವೃದ್ಧಿಗೆ ವಿನಿಯೋಗಿಸಿ ಅಕ್ಷರ ಸಂತ ಎಂದೇ ಪ್ರಸಿದ್ಧಿಯನ್ನು ಪಡೆದಿದ್ದರು.
ಶೈಕ್ಷಣಿಕ ಸಾಧನೆಗಾಗಿ ಹಾಜಬ್ಬ ಅವರಿಗೆ 2020ರ ಜನವರಿ 25ರಂದು ಪ್ರಶಸ್ತಿ ಪ್ರಕಟಿಸಲಾಗಿತ್ತು. ಕೋವಿಡ್ ಕಾರಣ ಇಲ್ಲಿಯವರೆಗೆ ಪ್ರಶಸ್ತಿ ಪ್ರದಾನ ನಡೆದಿರಲ್ಲಿಲ್ಲ. ನ. 8ರಂದು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಹಿನ್ನಲೆಯಲ್ಲಿ ಹಾಜಬ್ಬ ಅವರು ನ. 7ರಂದು ದೆಹಲಿಗೆ ತೆರಳಲಿದ್ದಾರೆ. ಪದ್ಮಶ್ರೀ ಪ್ರಶಸ್ತಿ ಸಮಾರಂಭಕ್ಕೆ ಆಗಮಿಸುವಂತೆ ಗೃಹ ಸಚಿವಾಲಯದಿಂದ ಅಧಿಕೃತ ಇಮೇಲ್ ಸಂದೇಶ ಬಂದಿರುವುದನ್ನು ಹಾಜಬ್ಬ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ, ಉದ್ಯೋಗಗಳ ಸೃಷ್ಟಿ: ನಿರಾಣಿ ವಿಶ್ವಾಸ