Advertisement

ಸಮಾಜದ ಯುವ ಸದಸ್ಯರು ಸಂಘದೊಂದಿಗೆ ಕೈಜೋಡಿಸಲಿ: ಉತ್ತಮ್‌ ಎ. ಶೆಟ್ಟಿಗಾರ್

10:59 AM Mar 30, 2021 | Team Udayavani |

ಮುಂಬಯಿ: ಪದ್ಮಶಾಲಿ ಸಮಾಜ ಸೇವಾ ಸಂಘ ಮುಂಬಯಿ ಇದರ 84ನೇ ವಾರ್ಷಿಕ ಮಹಾಸಭೆ ಹಾಗೂ ಅಂಗಸಂಸ್ಥೆಗಳಾದ ಪದ್ಮಶಾಲಿ ಎಜುಕೇಶನ್‌ ಸೊಸೈಟಿಯ 45ನೇ ಹಾಗೂ ಮಹಿಳಾ ಬಳಗದ 32ನೇ ವಾರ್ಷಿಕ ಮಹಾಸಭೆ ಯುಟ್ಯೂಬ್‌ನಲ್ಲಿ ನೇರ ಪ್ರಸಾರ ಮೂಲಕ ಮಾ. 21ರಂದು ವಾಗಿºಲ್‌ ನಾಕಾ, ಘೋಡ್‌ಬಂದರ್‌ ಮಾರ್ಗ, ಥಾಣೆಯಲ್ಲಿರುವ ಪದ್ಮಶಾಲಿ ಕಲಾಭವನದಲ್ಲಿ  ನೇರವೇರಿತು.

Advertisement

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಉತ್ತಮ್‌ ಎ. ಶೆಟ್ಟಿಗಾರ್‌ ಮಾತನಾಡಿ, ಪ್ರತೀವರ್ಷ ನಡೆಯುವ ಶಾಲಾ, ಕಾಲೇಜುಗಳ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ, ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಮ್ಮಾನಿಸುವ ಕಾರ್ಯಕ್ರಮಗಳನ್ನು ಈ ಬಾರಿ ಕೋವಿಡ್‌ನಿಂದಾಗಿ ನಡೆಸಲು ಸಾಧ್ಯವಾಗಿಲ್ಲ ಎಂದು ತಿಳಿಸಿ, ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ತುತ್ತಾದ ಕುಟುಂಬಗಳಿಗೆ ಧನ ಸಹಾಯ, ಪದ್ಮವಿಕಾಸ ಮಾಸ ಪತ್ರಿಕೆಯ ಬಿಡುಗಡೆ ಹಾಗೂ ಇನ್ನಿತರ ಕಾರ್ಯಕ್ರಮಗಳ ಬಗ್ಗೆ  ಮಾಹಿತಿ ನೀಡಿದರು. ಯುವ ಸದಸ್ಯರು ತಮ್ಮ ಆದಾಯದ ಕನಿಷ್ಠ ಶೇ. 1ರಷ್ಟು ಮೊತ್ತವನ್ನು ಸಂಘಕ್ಕೆ ದಾನ ಮಾಡಿದರೆ ಸಂಘವು ಇನ್ನಷ್ಟು ಸೇವಾ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಿದೆ ಎಂದರು.

ಸಂಘದ ಕಾರ್ಯದರ್ಶಿ ಲೀಲಾಧರ ಬಿ. ಶೆಟ್ಟಿಗಾರ್‌ ಸ್ವಾಗತಿಸಿದರು. ದೀಪ ಪ್ರಜ್ವಲನೆಯೊಂದಿಗೆ ಗುರುಸ್ತೋತ್ರ ಮತ್ತು ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಸಂಘದ ಜತೆ ಕಾರ್ಯದರ್ಶಿ ಕೇಶವ ವಿ. ಶೆಟ್ಟಿಗಾರ್‌ ಮಹಾಸಭೆಗೆ ಶುಭ ಹಾರೈಸಿ, ಬಂದ ಸಂದೇಶಗಳನ್ನು ವಾಚಿಸಿದರು. ಬಳಿಕ ಸಂಘದ ಮಾಜಿ ಅಧ್ಯಕ್ಷರಾದ ಮಿಜಾರು ವಾಮನ ಶೆಟ್ಟಿಗಾರ್‌, ಕೇಶವ ಕೆ. ಶೆಟ್ಟಿಗಾರ್‌, ಶಿವರಾಮ್‌ ವಿ. ಶೆಟ್ಟಿಗಾರ್‌, ದಯಾನಂದ ಡಿ. ಶೆಟ್ಟಿಗಾರ್‌, ಸರೋಜಿನಿ ಎಚ್‌. ಶೆಟ್ಟಿಗಾರ್‌ ಅವರನ್ನು ಪದ್ಮಸಾರಥಿ ಬಿರುದನ್ನು ನೀಡಿ ಸಮ್ಮಾನಿಸಲಾಯಿತು. ಸಮ್ಮಾನಿತರು ಸಂಘವು ಇನ್ನು ಮುಂದಕ್ಕೂ ಹೆಚ್ಚಿನ ಯಶಸ್ಸನ್ನು ಸಾಧಿಸಲಿ ಎಂದು ಹಾರೈಸಿದರು.

ಸಂಘ ಹಾಗೂ ಸೊಸೈಟಿಗಳ 2019-20ರ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರಗಳನ್ನು ಸಭೆಯಲ್ಲಿ  ಮಂಡಿಸಿ ಅನುಮೋದನೆ ಪಡೆಯಲಾಯಿತು. ಪ್ರಸ್ತುತ ವರ್ಷದಲ್ಲಿ ಅತೀ ಹೆಚ್ಚಿನ ಸದಸ್ಯರನ್ನು ನೋಂದಾಯಿಸಿದ ಇಂದಿರಾ ವಿ. ಶೆಟ್ಟಿಗಾರ್‌ ಹಾಗೂ ಎಸ್‌. ವಿ. ಗೋಪಾಲಕೃಷ್ಣ ಅವರನ್ನು ಸಮ್ಮಾನಿಸಲಾಯಿತು. ಅತ್ಯುತ್ತಮ ಕಾರ್ಯಕರ್ತ ಪ್ರಶಸ್ತಿಯನ್ನು ಎಸ್‌. ವಿ. ಗೋಪಾಲಕೃಷ್ಣ ಅವರಿಗೆ ಪ್ರದಾನ ಮಾಡಲಾಯಿತು.

ಪದ್ಮಶಾಲಿ ಕಲಾಭವನದ ಅಧ್ಯಕ್ಷ ಕೃಷ್ಣಾನಂದ ಎಂ. ಶೆಟ್ಟಿಗಾರರು ಮಾತನಾಡಿ, ಸಮಾಜದ ಸದಸ್ಯರು ಕಲಾಭವನದ ಸದುಪಯೋಗವನ್ನು ಪಡೆದುಕೊಂಡರೆ ಸಂಘಕ್ಕೆ ಉತ್ತಮ ಆದಾಯ ತರುವ ಅವಕಾಶವಿದೆ. ನಾವೆಲ್ಲರೂ ಒಂದಾಗಿ ಸಮಾಜ ಸೇವೆಯಲ್ಲಿ ನಿರತರಾಗಬೇಕು ಎಂದು ತಿಳಿಸಿದರು.

Advertisement

ಸಮಿತಿ ಸದಸ್ಯರಾದ ಶಿವಾನಂದ ಆರ್‌. ಶೆಟ್ಟಿಗಾರ್‌ ಅವರು ಕಲಾಭವನ ಸಮಿತಿಯ ಅಧ್ಯಕ್ಷರನ್ನು ಅಭಿನಂದಿಸಿ, ಅವರ ಪ್ರಯತ್ನ ದಿಂದಾಗಿ ಕಲಾಭವನವು ಜನ್ಮತಾಳಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸಮಾಜದ ಸದಸ್ಯರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತೆ ವಿನಂತಿಸಿದರು.

ಸರೋಜಿನಿ ಎಚ್‌. ಶೆಟ್ಟಿಗಾರ್‌ ಸಂಘವು ತನ್ನನ್ನು ಸಮ್ಮಾನಿಸಿದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ರಾಮಚಂದ್ರ ಶೆಟ್ಟಿಗಾರ್‌ ಮಾತನಾಡಿ, ಕೋವಿಡ್‌ ಕಾರಣದಿಂದ

ಹೆಚ್ಚಿನ ಕಾರ್ಯಗಳನ್ನು ಸಾಧಿಸಲಿಕ್ಕಾಗಲಿಲ್ಲ ಎಂದು ವಿಷಾದಿಸಿದರು. ಯುವ ಸಂಘಟನೆಯ ನೇತಾರ ಜಯೇಶ್‌ ಎ. ಶೆಟ್ಟಿಗಾರರು ಸಂಘದ ಅಭಿವೃದ್ಧಿಗೆ ಸಹಕರಿಸುವ ಭರವಸೆ ನೀಡಿದರು.

ಸೊಸೈಟಿಯ ಸಭಾಪತಿ ಬಿ. ರಾಮಚಂದ್ರ ಶೆಟ್ಟಿಗಾರ್‌, ಸೊಸೈಟಿಯ ಕಾರ್ಯದರ್ಶಿ ರಮೇಶ್‌ ಪಿ. ಶೆಟ್ಟಿಗಾರ್‌ ಉಪಸ್ಥಿತರಿದ್ದರು.

ಮಹಾಸಭೆಯ ಕಾರ್ಯಕ್ರಮಗಳು ಸುಸೂತ್ರವಾಗಿ ನೆರವೇರಿಸಲು ಕಾರಣರಾದ ಎಲ್ಲರಿಗೂ ಸಂಘದ ಸಹಕಾರ್ಯದರ್ಶಿ ಧನ್ಯವಾದ ಸಮರ್ಪಿಸಿದರು. ಶಾಂತಿಪಾಠ ಹಾಗೂ ರಾಷ್ಟ್ರಗೀತೆಯೊಂದಿಗೆ ಸಭೆ ಮುಕ್ತಾಯವಾಯಿತು. ಹರ್ಷ ಫೌಂಡೇಶನ್‌ ವತಿಯಿಂದ ಉಪಾಹಾರ ಹಾಗೂ ಭೊಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next