Advertisement
ಅವನ್ಯಾರೋ ಅರುಣಾಚಲಂ ಅಂತೆ. ಕೊಯಮತ್ತೂರಿನವನಂತೆ. ಹೈಸ್ಕೂಲಿಗೇ ಓದು ನಿಲ್ಲಿಸಿದವನಂತೆ. ಅಂಥವನು ತುಂಬಾ ಕಡಿಮೆ ಬೆಲೆಯ, ಅತ್ಯುತ್ತಮ ಗುಣಮಟ್ಟದ ಸ್ಯಾನಿಟರಿ ಪ್ಯಾಡ್ ತಯಾರಿಸಿದ್ದಾನಂತೆ…ಹೀಗೊಂದು ಸುದ್ದಿ ಐದು ವರ್ಷಗಳ ಹಿಂದೆ ಎಲ್ಲ ಪತ್ರಿಕೆಗಳ ಹೆಡ್‌ಲೈನ್ ಆಗಿತ್ತು. ಅವತ್ತು ಅರುಣಾಚಲಂನನ್ನು ಈ ಲೋಕ, ಕುತೂಹಲ ಮತ್ತು ಬೆರಗಿನಿಂದ ನೋಡಿತ್ತು. ಇದೀಗ, ಅರುಣಾಚಲಂನ ಹೆಸರು ಮತ್ತೆ ಚರ್ಚೆಗೆ ಬಂದಿದೆ. ಈತನ ಯಶೋಗಾಥೆ Padman ಹೆಸರಿನಲ್ಲಿ ಸಿನಿಮಾವೂ ಆಗುತ್ತಿದೆ. ಅರುಣಾಚಲಂನ ಪಾತ್ರವನ್ನು ನಟ ಅಕ್ಷಯ್‌ಕುಮಾರ್ ನಿರ್ವಹಿಸಲಿದ್ದಾರೆ. ಸಹಜವಾಗಿಯೇ ಈ ಸಿನಿಮಾದ ಕುರಿತು ಕುತೂಹಲ ಮತ್ತು ನಿರೀಕ್ಷೆ ಹೆಚ್ಚಾಗಿದೆ. ಪ್ಯಾಡ್‌ನ ವಿಸ್ತಾರ ಮತ್ತು ವಿನ್ಯಾಸ ಹೇಗಿರಬೇಕು? ಅದನ್ನು ಧರಿಸುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ ಎಂದು ತಿಳಿಯಲು, ಅರುಣಾಚಲಂ ತಾನೇ ಪ್ಯಾಡ್ ಧರಿಸಿಕೊಂಡು ಓಡಾಡಿದ್ದನಂತೆ ಎಂದ ಸುದ್ದಿ ತಿಳಿದಾಗಲಂತೂ- “ಇಶ್ಶೀ.. ಹೀಗೂ ಉಂಟೇನ್ರೀ…’ ಎಂದು ಹಲವರು ಮುಖ ಕಿವುಚಿದ್ದರು. ಪ್ಯಾಡ್ ಧರಿಸಿ ಓಡಾಡಿದ್ದನೆಂಬ ಕಾರಣಕ್ಕೇ, ಅರುಣಾಚಲಂನನ್ನು “ಪ್ಯಾಡ್‌ಮ್ಯಾನ್’ ಎಂದು ಕರೆದಿದ್ದರು. ನಂತರದ ದಿನಗಳಲ್ಲಿ ಪ್ಯಾಡ್ ಸಂಶೋಧನೆಯ ಕಾರಣಕ್ಕೆ “ಪದ್ಮಶ್ರೀ’ ಪ್ರಶಸ್ತಿಯೂ ಅರುಣಾಚಲಂನನ್ನು ಹುಡುಕಿಕೊಂಡು ಬಂತು. ಅರುಣಾಚಲಂನ ಯಶೋಗಾಥೆ, ದೇಶ-ವಿದೇಶದ ವಿದ್ಯಾರ್ಥಿಗಳಿಗೆ ಪಠ್ಯವೂ ಆಯಿತು. 1998ರಲ್ಲಿ ಅರುಣಾಚಲಂಗೆ ಮದುವೆಯಾಯಿತು. ಈತನ ಪತ್ನಿಯಾಗಿ ಬಂದಾಕೆ ಶಾಂತಿ. ಆ ದಿನಗಳನ್ನು ನೆನಪಿಸಿಕೊಂಡು ಅರುಣಾಚಲಂ ಹೇಳುತ್ತಾರೆ: ” ನನಗೆ ಆಗಷ್ಟೇ ಮದುವೆಯಾಗಿತ್ತು. ಅಂದಮೇಲೆ ಕೇಳಬೇಕೆ? ಸದಾ ಹೆಂಡತಿಯ ಜೊತೆಯೇ ಇರಬೇಕು. ಅವಳನ್ನು ಮತ್ತೆ ಮತ್ತೆ ಇಂಪ್ರಸ್ ಮಾಡಬೇಕು. ಅವಳಿಗೆ ಅಂಟಿಕೊಂಡೇ ಕೂತಿರಬೇಕು ಎಂದೆಲ್ಲಾ ಆಸೆಯಾಗುತ್ತಿತ್ತು. ಅವತ್ತೂಂದು ದಿನ, ನನ್ನ ಹೆಂಡತಿ ಅದೇನನ್ನೋ ಅಡಗಿಸಿಕೊಂಡು ಹೊರಗೆ ಹೋಗುತ್ತಿದ್ದಾಳೆ ಅನ್ನಿಸಿತು. ನನ್ನಿಂದ ಗುಟ್ಟು ಮಾಡುವಂಥ ವಿಚಾರ ಏನಿರಬಹುದು ಎಂಬ ಕುತೂಹಲದಿಂದಲೇ, ಚೂರೂ ಸುಳಿವು ಕೊಡದೆ ಅವಳನ್ನು ಸಮೀಪಿಸಿ ಅವಳ ಬಳಿಯಿದ್ದ ವಸ್ತುವನ್ನು ಕಿತ್ತುಕೊಂಡೆ. ಮೆತ್ತಗಿದ್ದ ಆ ವಸ್ತುವಿನಿಂದ ಸಹಿಸಲಾಗದಂಥ ಗಬ್ಬು ವಾಸನೆ ಬಂತು. ನೋಡುತ್ತೇನೆ: ಅದು ಮುಟ್ಟಲೂ ಯೋಗ್ಯವಲ್ಲದ ಕೊಳೆಬಟ್ಟೆಯಾಗಿತ್ತು. ಅಲ್ಲಲ್ಲಿ ಹರಿದಿತ್ತು. ಸ್ಕೂಟರ್ ಒರೆಸಲೂ ಯೋಗ್ಯವಲ್ಲದ ಬಟ್ಟೆಯದು. ನಾನು ಇನ್ನೇನೋ ಯೋಚಿಸುವ ಮೊದಲೇ, -“ಪೀರಿಯೆಡ್ಸ್ ಆಗಿದೆ ಕಣ್ರೀ. ಈ ಬಟ್ಟೇನ ನೀವು ಮುಟ್ಟಬಾರ್ಧು. ಅದನ್ನಿಲ್ಲಿ ಕೊಡಿ’ ಎಂದು ಹೆಂಡತಿ ರೇಗಿದಳು. “ಅಂಥಾ ಕೊಳಕು ಬಟ್ಟೇನ ಬಳಸೋದಾ? ಬೆಸ್ಟ್ ಕ್ವಾಲಿಟಿಯ ಬಟ್ಟೆ ಬಳಸಬಾರದಾ?’ ಎಂದೆ. “ನಾಳೆ ಮೆಡಿಕಲ್ ಶಾಪ್‌ಗೆ ಹೋಗಿ ತಂದುಕೊಡಿ’ ಅಂದಳು.
Related Articles
Advertisement
ಹೆಣ್ಣು ಅನ್ನಿಸಿಕೊಂಡ ಜೀವ, ಪೀರಿಯೆಡ್ಸ್‌ನ ಬಾಧೆಯಿಂದ ಪಾರಾಗಲು ಸಾಧ್ಯವೇ ಇಲ್ಲ. ಪ್ಯಾಡ್‌ನಲ್ಲಿ ಹತ್ತಿಯಂಥ ಮೆತ್ತಗಿನ ಬಟ್ಟೆ ಇರುತ್ತದೆ ಎಂದು ಹೆಂಡತಿಯೇ ಹೇಳಿದ್ದಳು. ಹಳೇ ಬಟ್ಟೆಗೆ ಹತ್ತಿಯನ್ನು ತುಂಬಿ ಅದನ್ನೇ ಪ್ಯಾಡ್ ಥರಾ ಬಳಸಿದರೆ ಹೇಗೆ ಅನ್ನಿಸಿತು. ಇದೊಂದು ಪ್ರಯೋಗ ಯಶಸ್ವಿಯಾದರೆ ಪ್ರತಿ ಮನೆಯ ಹೆಂಗಸರೂ ತಾವೇ ಪ್ಯಾಡ್‌ಗಳನ್ನು ತಯಾರಿಸಿಕೊಳ್ಳಬಹುದಲ್ಲವೆ ಅನ್ನಿಸಿತು. ಅದನ್ನೇ ಹೆಂಡತಿಗೂ ಹೇಳಿದೆ. ಹಳೇಬಟ್ಟೆಗೆ ಹತ್ತಿಯನ್ನು ತುಂಬಿ, “ಮೊದಲಿಗೆ ನೀನೇ ಇದನ್ನು ಬಳಸಿನೋಡು. ಇದರಲ್ಲಿ ಏನಾದ್ರೂ ತೊಂದರೆ ಇದೆ ಅನ್ನಿಸಿದ್ರೂ ತಿಳಿಸು’ ಅಂದೆ. “ನನ್ನ ಪೀರಿಯೆಡ್ಸ್ ಟೈಂ ಮುಗೀತು. ಇನ್ನೇನಿದ್ರೂ ಮುಂದಿನ ತಿಂಗಳೇ…!’ ಅಂದಳು ಹೆಂಡತಿ. ಅರ್ಜೆಂಟಾಗಿ ಹೊಸದೊಂದು ಸಂಶೋಧನೆ ಮಾಡಬೇಕೆಂಬ ಹುಮ್ಮಸ್ಸಿನಲ್ಲಿದ್ದ ನನಗೆ ಹೆಂಡತಿಯ ಮಾತಿಂದ ನಿರಾಸೆಯಾಯಿತು. ತಕ್ಷಣವೇ ತಂಗಿಯರ ಎದುರು ನಿಂತು ಮನವಿ ಮಾಡಿಕೊಂಡೆ : “ಪೀರಿಯೆಡ್ಸ್ ಟೈಂನಲ್ಲಿ ಬಳಸುವ ಪ್ಯಾಡ್‌ಗೆ 50 ರೂಪಾಯಿ ಕೊಡುವ ಬದಲು, ಫ್ರೀಯಾಗಿ ಸಿಗುವುದನ್ನೇ ಬಳಸಿ’ ಎಂದೆ. ಈ ಮಾತು ಕೇಳಿ ತಂಗಿಯರಿಬ್ಬರೂ ಹೌಹಾರಿದರು. ಇಂಥಾ ಸಂಶೋಧನೆಗೆ ಬೆಂಕಿ ಬೀಳಲಿ. ಇಂಥದ್ದನ್ನೆಲ್ಲ ಮಾಡಲು ಹೋಗ್ಬೇಡ ಎಂದು ಬುದ್ಧಿ ಹೇಳಿದರು.
ಈ ಹೊತ್ತಿಗೆ, ಏನಾದರೂ ಸರಿ; ಕಡಿಮೆ ಬೆಲೆಯ ನ್ಯಾಪ್‌ಕಿನ್‌ಗಳನ್ನು ತಯಾರಿಸಲೇಬೇಕು ಎಂಬ ಹಠ ಬಂದುಬಿಟ್ಟಿತ್ತು. ಆದರೆ, ಪ್ಯಾಡ್‌ನೊಳಗೆ ಏನಿರುತ್ತದೆ? ಆ ಕಚ್ಚಾವಸ್ತು ಎಲ್ಲಿಂದ ಸಿಗುತ್ತದೆ ಎಂಬುದನ್ನು ತಿಳಿಯಬೇಕಿತ್ತು. ಹಾಗೆಯೇ, ಪ್ಯಾಡ್ ಧರಿಸಿದಾಗ ಎಂಥಾ ಫೀಲ್ ಆಗುತ್ತದೆ ಎಂಬುದನ್ನೂ ತಿಳಿಯಬೇಕಿತ್ತು. ನಾನು ತಯಾರಿಸಿದ ವಸ್ತುವನ್ನು ಧರಿಸಲು ಯಾರೂ ಒಪ್ಪದಿದ್ದಾಗ ನನ್ನ ಮೇಲೆಯೇ ಒಂದು ಪ್ರಯೋಗ ಮಾಡಿಕೊಳ್ಳಲು ಸಿದ್ಧನಾದೆ. ಫುಟ್‌ಬಾಲ್ ಬ್ಲಾಡರ್‌ಗೆ ಅಲ್ಲಲ್ಲಿ ತೂತು ಮಾಡಿ ಅದಕ್ಕೆ ಮೇಕೆಯ ರಕ್ತ ತುಂಬಿದೆ. ಅದನ್ನು ಬಟ್ಟೆಯಿಂದ ಸುತ್ತಿ, ಅದನ್ನೇ ಐದು ದಿನಗಳ ಕಾಲ ಧರಿಸಿಕೊಂಡು ಬದುಕಿದೆ. ಸ್ಯಾನಿಟರಿ ಪ್ಯಾಡ್ ಹಾಕಿಕೊಂಡು ಕುಳಿತಾಗ, ನಿಂತಾಗ, ಓಡಿದಾಗ, ಮಲಗಿದಾಗ ಬ್ಲೀಡಿಂಗ್ ಆದಾಗ ಆಗುವ ಸಂಕಟ ಹೇಗಿರುತ್ತೆ ಎಂಬುದು ನನಗೂ ಸ್ವಲ್ಪ ಅರ್ಥವಾಗಿದ್ದೇ ಆಗ. ನನ್ನ ಈ ವರ್ತನೆ ಕಂಡು ಹೆಂಡತಿ ಗಾಬರಿಯಾದಳು. ಇವನಿಗೆಲ್ಲೋ ಹುಚ್ಚು ಹಿಡಿದಿದೆ ಅಥವಾ ಇನ್ನೊಂದು ಮದುವೆಯಾಗುವ ಹುಕಿ ಬಂದಿದೆ. ಹಾಗಾಗಿಯೇ ಯಾವ್ಯಾವುದೋ ನೆಪ ಮಾಡಿಕೊಂಡು ಕಂಡಕಂಡ ಹೆಂಗಸರ ಎದುರು ನಿಲ್ಲುತ್ತಾನೆ ಅಂದುಕೊಂಡಳು. ಅಷ್ಟೇ ಅಲ್ಲ, ಇದೇ ಕಾರಣ ಮುಂದಿಟ್ಟು ಜಗಳ ಮಾಡಿ, ಡೈವೋರ್ಸ್‌ಗೆ ಒತ್ತಾಯಿಸಿ, ತವರಿಗೂ ಹೋಗಿಬಿಟ್ಟಳು.
ಈ ವೇಳೆಗೆ, ಪ್ಯಾಡ್ ಧರಿಸುವುದರಿಂದ ಆಗುವ ಸಂಕಟವೇನು ಎಂದು ಅರ್ಥವಾಗಿತ್ತು. ಆದರೆ, ಪ್ಯಾಡ್‌ನ ಒಳಭಾಗದಲ್ಲಿರುವ ಮೆತ್ತಗಿನ ವಸ್ತು ಯಾವುದು? ರಕ್ತವನ್ನು ಹೀರಿಕೊಂಡ ನಂತರ ಅದು ಹೇಗಿರುತ್ತದೆ ಎಂಬುದೇ ಅರ್ಥವಾಗಿರಲಿಲ್ಲ. ನಾನಾಗ ನೇರವಾಗಿ ಮೆಡಿಕಲ್ ವಿದ್ಯಾರ್ಥಿನಿಯರ ಮುಂದೆ ನಿಂತೆ. ನನ್ನ ಉದ್ದೇಶ ವಿವರಿಸಿದೆ. “ನಿಮಗೊಂದು ಬಾಕ್ಸ್ ಕೊಡುತ್ತೇನೆ. ನೀವು ಬಳಸಿದ ಪ್ಯಾಡ್‌ಗಳನ್ನು ಅದರಲ್ಲಿ ಹಾಕಿಡಿ. ನಾನು ಅದನ್ನು ತಗೊಂಡು ಹೋಗ್ತೀನೆ’ ಎಂದೆ. ಅವರು ಒಪ್ಪಿದರು. ಕಡೆಗೊಂದು ದಿನ, ಆ ಬಾಕ್ಸ್‌ನ್ನು ಮನೆಗೆ ತಂದು, ಒಂದೊಂದೇ ಪ್ಯಾಡ್‌ಗಳನ್ನು ಬಿಚ್ಚಿ ನೋಡುತ್ತಿದ್ದೆ. ಅದನ್ನೆಲ್ಲ ಅಮ್ಮ ನೋಡಿಬಿಟ್ಟಳು. ಮಗ, ವಾಮಾಚಾರದ ಹಿಂದೆ ಬಿದ್ದಿದ್ದಾನೆ. ಈ ಕಾರಣದಿಂದಲೇ ಹೆಂಗಸರ ಒಳಉಡುಪುಗಳ ಸಂಗ್ರಹಕ್ಕೆ ನಿಂತಿದ್ದಾನೆ ಎಂಬುದು ಅವಳ ನಂಬಿಕೆಯಾಗಿತ್ತು. ಅಮ್ಮ ಅವತ್ತು ರಂಪ ಮಾಡಿದಳು. ಊರವರನ್ನೆಲ್ಲ ಕರೆಸಿ ಪಂಚಾಯ್ತಿ ಮಾಡಿಸಿದಳು. ನಾನಂತೂ ನಿನ್ನ ಜೊತೆ ಇರೋದಿಲ್ಲ ಎಂದು ಘೋಷಿಸಿ ತಂಗಿಯರ ಮನೆಗೆ ಹೋಗಿಬಿಟ್ಟಳು. ಇದಾಗಿ ಕೆಲವೇ ಸಮಯದ ನಂತರ, ಊರಿನ ಜನರೂ ನನಗೆ ಸಾಮೂಹಿಕ ಬಹಿಷ್ಕಾರ ಹಾಕಿದರು.
ಅತ್ಯಂತ ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್‌ಗಳನ್ನು ತಯಾರಿಸಬೇಕು. ಆ ಮೂಲಕ ಎಲ್ಲ ಮಹಿಳೆಯರ ಕಷ್ಟವನ್ನೂ ಕಡಿಮೆ ಮಾಡಬೇಕು ಎಂಬುದಷ್ಟೇ ನನ್ನ ಮಹದಾಸೆಯಾಗಿತ್ತು. ಆದರೆ ಅದನ್ನು ನನ್ನ ಹೆಂಡತಿ, ತಾಯಿ, ಸೋದರಿಯರು, ಊರಿನ ಜನ…ಈ ಯಾರೊಬ್ಬರೂ ಅರ್ಥ ಮಾಡಿಕೊಳ್ಳಲಿಲ್ಲ. ಇದಕ್ಕಾಗಿ ಚಿಂತಿಸುವ ಬದಲು, ನನ್ನ ಸಂಶೋಧನೆಯನ್ನು ಮುಂದುವರಿಸಲೇಬೇಕು ಅನ್ನಿಸಿತು. ಈ ವೇಳೆಗೆ, ಸ್ಯಾನಿಟರಿ ಪ್ಯಾಡ್‌ನ ಒಳಗೆ ಮೆತ್ತಗಿರುವುದು ಹತ್ತಿಯಲ್ಲ. ಬಗೆಬಗೆಯ ನಾರುಗಳಿಂದ ತಯಾರಾದ ಸಮ್ಮಿಶ್ರ ಉತ್ಪನ್ನ. ಅದು ತೀರಾ ಕಡಿಮೆ ಬೆಲೆಗೇ ಸಿಗುತ್ತದೆ ಎಂಬ ಸಂಗತಿಯೂ ನನಗೆ ಅರ್ಥವಾಗಿತ್ತು. ಮೊದಲಿಗೆ ನಾರಿನಂಥ ಕಚ್ಚಾ ವಸ್ತುಗಳನ್ನು ಮಿಕ್ಸ್ ಮಾಡಿ, ಅದನ್ನು ಪ್ಯಾಡ್‌ನ ಆಕಾರಕ್ಕೆ ತಂದು, ಅದರ ಮೇಲೆ ಮೆತ್ತಗಿನ ಉದ್ದದ ಬಟ್ಟೆಯನ್ನು ಎರಡೂ ಬದಿಗೆ ಹಾಕಿ ಪ್ಯಾಡ್ ತಯಾರಿಸಬೇಕು ಎಂಬುದೂ ಗೊತ್ತಾಗಿತ್ತು. ಆದರೆ, ಈ ಕೆಲಸಕ್ಕೆ ಮಲ್ಟಿನ್ಯಾಷನಲ್ ಕಂಪನಿಗಳು ಬಳಸುತ್ತಿದ್ದ ಮೆಶಿನ್‌ನ ಬೆಲೆ ಕೋಟಿಗಳ ಲೆಕ್ಕದಲ್ಲಿತ್ತು. ಮೂರು ಹೊತ್ತಿನ ಊಟಕ್ಕೇ ಚಡಪಡಿಸುತ್ತಿದ್ದ ನಾನು ಅಷ್ಟು ಹಣ ಹೊಂದಿಸಲು ಸಾಧ್ಯವೇ ಇರಲಿಲ್ಲ. ಆಗಲೇ, ನನ್ನ ತಂದೆಯೂ ಸೇರಿದಂತೆ ಹಿರಿಯರು ಮಾಡುತ್ತಿದ್ದ ನೇಕಾರಿಕೆಯ ಯಂತ್ರಗಳು ನೆನಪಿಗೆ ಬಂದವು. ದೇಶೀ ಯಂತ್ರ ಬಳಸಿ, ನೂರು ನೂಲುಗಳನ್ನು ಸೇರಿಸಿಕೊಂಡು ಒಂದು ಸೀರೆ ತಯಾರಿಸಲು ಸಾಧ್ಯವಾಗುವುದಾದರೆ, ಅದೇ ಮಾದರಿಯಲ್ಲಿ ಪ್ಯಾಡ್‌ನ ಒಳಭಾಗದಲ್ಲಿ ಬಳಕೆಯಾಗುವ ನಾರುಗಳ ಮಿಶ್ರಣದ ವಸ್ತುವನ್ನೂ ತಯಾರಿಸಬಹುದಲ್ಲವೆ ಅನ್ನಿಸಿತು. ಈ ಸಂದರ್ಭದಲ್ಲಿ ಕೆಲವು ಉದ್ಯಮಿಗಳು ನನ್ನ ನೆರವಿಗೆ ಬಂದರು. ಪರಿಣಾಮ, ಹೋಲ್‌ಸೇಲ್ ದರದಲ್ಲಿ ಕಚ್ಚಾ ವಸ್ತುಗಳೂ ದೊರೆತವು. ನೋಡ ನೋಡುತ್ತಿದ್ದಂತೆಯೇ ದೇಸೀ ಯಂತ್ರಗಳನ್ನು ಬಳಸಿಯೇ ಸ್ಯಾನಿಟರಿ ಪ್ಯಾಡ್‌ಗಳನ್ನೂ ತಯಾರಿಸಿದ್ದಾಯಿತು.’ ಬ್ರ್ಯಾಂಡೆಡ್ ಕಂಪನಿಗಳು, ಒಂದು ಪ್ಯಾಡ್‌ಗೆ 10 ರೂಪಾಯಿ ಬೆಲೆ ಇಟ್ಟರೆ, ಅದೇ ಉತ್ಪನ್ನವನ್ನು ಕೇವಲ 2 ರೂಪಾಯಿಗೆ ಮಾರಲು ಸಾಧ್ಯ ಎಂದೂ ಅರುಣಾಚಲಂ ಸಾಧಿಸಿ ತೋರಿಸಿಬಿಟ್ಟರು.
ಆನಂತರ ನಡೆದಿದ್ದಲ್ಲ ಪವಾಡವೇ. ಐಐಟಿಯವರು ನಡೆಸಿದ ವರ್ಷದ ಶ್ರೇಷ್ಠ ಸಂಶೋಧನೆ ಸ್ಪರ್ಧೆಯಲ್ಲಿ ಅರುಣಾಚಲಂ ತಯಾರಿಸಿದ ಸ್ಯಾನಿಟರಿ ಪ್ಯಾಡ್ ಉತ್ಪಾದನಾ ಯಂತ್ರಕ್ಕೆ ಮೊದಲ ಬಹುಮಾನ ಬಂತು. ಮರುಕ್ಷಣದಿಂದಲೇ ಈ ಹೈಸ್ಕೂಲ್ ಡ್ರಾಪ್ ಔಟ್ ಮನುಷ್ಯನ ಖ್ಯಾತಿ ಜಗತ್ತಿನ ಮೂಲೆ ಮೂಲೆಗೂ ಹಬ್ಬಿತು. ರಾಷ್ಟ್ರಪತಿಗಳಿಂದ, ಪ್ರಶಂಸೆಯೊಂದಿಗೆ ಪದ್ಮಶ್ರೀ ಪ್ರಶಸ್ತಿಯೂ ಸಿಕ್ಕಿತು. ಎಲ್ಲಕ್ಕಿಂತ ಮಿಗಿಲಾಗಿ, ಬಿಟ್ಟು ಹೋಗಿದ್ದ ತಾಯಿ ಮತ್ತು ಮಡದಿ ವಾಪಸ್ ಬಂದರು. ಬಹಿಷ್ಕಾರ ಹಾಕಿದ್ದ ಊರಮಂದಿ ಮೆರವಣಿಗೆ ಮಾಡಿ ಸನ್ಮಾನಿಸಿದರು.
ಈಗ, ತಾಯಿ, ಹೆಂಡತಿ ಹಾಗೂ ಮಗಳೊಂದಿಗೆ ಸುಖೀಜೀವನ ನಡೆಸುತ್ತಿದ್ದಾರೆ ಅರುಣಾಚಲಂ. ಕೊಯಮತ್ತೂರಿನಲ್ಲಿ ಅವರ ಮಾಲೀಕತ್ವದ ಜಯಶ್ರೀ ಇಂಡಸ್ಟ್ರೀಸ್ ಹೆಸರಿನ ಸ್ಯಾನಿಟರಿ ಪ್ಯಾಡ್ ಉತ್ಪಾದಿಸುವ ಫ್ಯಾಕ್ಟರಿಯಿದೆ. ದೇಶದ 24ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಾತ್ರವಲ್ಲ, ಕೀನ್ಯಾ, ನೈಜೀರಿಯಾ, ಬಾಂಗ್ಲಾದೇಶ, ಶ್ರೀಲಂಕಾಗಳಲ್ಲಿ ಕೂಡ ಅರುಣಾಚಲಂ ಅವರ ಟೆಕ್ನಾಲಜಿಯನ್ನು ಆಧರಿಸಿಯೇ ಸ್ಯಾನಿಟರಿ ಪ್ಯಾಡ್‌ಗಳನ್ನೂ ತಯಾರಿಸಲಾಗುತ್ತಿದೆ.
ಬೀ ಕೂಲ್, ರಿಲ್ಯಾಕ್ಸ್, ಟಚ್ ಫ್ರೀ..ಇವು ಅರುಣಾಚಲಂ ಅವರ ಜಯಶ್ರೀ ಇಂಡಸ್ಟ್ರೀಸ್‌ನಲ್ಲಿ ತಯಾರಾಗುತ್ತಿರುವ ಸ್ಯಾನಿಟರಿ ಪ್ಯಾಡ್‌ನ ಹೆಸರುಗಳು. ಪ್ರತಿಯೊಂದು ಪ್ಯಾಡ್, ಕೇವಲ 2 ರೂಪಾಯಿಗೆ ಸಿಗುತ್ತದೆ. ಈ ಅತ್ಯಲ್ಪ ಬೆಲೆಯ ಪ್ಯಾಡ್‌ಗಳನ್ನು ಉತ್ಪಾದಿಸುತ್ತಲೇ ದೇಶಾದ್ಯಂತ 30,000ಕ್ಕೂ ಹೆಚ್ಚು ಮಹಿಳೆಯರು ಉದ್ಯೋಗ ಕಂಡುಕೊಂಡಿದ್ದಾರೆ! ಇವರ ಪ್ರಯೋಗ ಕಂಡವರು “ಇಶ್ಶೀ.. ಹೀಗೂ ಉಂಟೇನ್ರೀ…’ ಎಂದು ಮುಖ ಕಿವುಚಿದ್ದರು
ಕಡಿಮೆ ಬೆಲೆಯ ಸ್ಯಾನಿಟರಿ ಪ್ಯಾಡ್ ತಯಾರಿಸಬೇಕೆಂಬುದೇ ಇವರ ಗುರಿಯಾಯಿತು
ಮಗ ವಾಮಾಚಾರದ ಹಿಂದೆ ಬಿದ್ದಿದ್ದಾನೆ ಎಂದುಕೊಂಡಳು ಅಮ್ಮ – ಎ.ಆರ್.ಮಣಿಕಾಂತ್