Advertisement

ಒಂದು ಗಿಫ್ಟ್ ನ ಹಿಂದೆ ಪದ್ಮಜಾ ರಾವ್‌

10:55 AM Apr 27, 2020 | Suhan S |

ತಾಯಿ ಪಾತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕನ್ನಡದ ನಟಿ ಪದ್ಮಜಾ ರಾವ್‌. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಪದ್ಮಜಾ ರಾವ್‌ ಅವರಿಗೆ ಸಿನಿಮಾ ನಿರ್ದೇಶನ ಮಾಡಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು. ಈಗ ಅದರ ಮೊದಲ ಹಂತವಾಗಿ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ.

Advertisement

ಅದು ಲಾಕ್‌ ಡೌನ್‌ ಮಧ್ಯೆಯೇ ಎಂಬುದು ವಿಶೇಷ. ಅವರು ಈ ಕಿರುಚಿತ್ರಕ್ಕೆ ಇಟ್ಟ ಹೆಸರು ಒಂದು ಗಿಫ್ಟ್ ನ ಕಥೆ.30 ನಿಮಿಷದ ಈ ಕಿರುಚಿತ್ರದಲ್ಲಿ ಹಲವು ವಿಶೇಷತೆಗಳಿವೆ. ಮುಖ್ಯವಾಗಿ ಇದು ಹಲವು ದೇಶಗಳಲ್ಲಿ ಚಿತ್ರೀಕರಣವಾಗಿದೆ. ಅಮೆರಿಕಾ, ಕೆನಡಾ ಹಾಗೂ ಬೆಂಗಳೂರಿನ ಪ್ರಮುಖ ಏಳು ಜಾಗಗಳಲ್ಲಿ ಈ ಕಿರುಚಿತ್ರವನ್ನು ಚಿತ್ರೀಕರಿಸಲಾಗಿದೆ. ಈ ಕಿರುಚಿತ್ರದಲ್ಲಿ 11 ಪಾತ್ರಗಳಿದ್ದು, ಹತ್ತು ಮಂದಿ ಛಾಯಾಗ್ರಾಹಕರು ಈ ಕಿರುಚಿತ್ರಕ್ಕೆ ಕೆಲಸ ಮಾಡಿದ್ದಾರಂತೆ. ಒಂದು ಗಿಫ್ಟ್ ನ ಕಥೆಯಲ್ಲಿ ಹಾಸ್ಯ ಸನ್ನಿವೇಶಗಳನ್ನಿಟ್ಟುಕೊಂಡು ಮಾಡಲಾಗಿದೆಯಂತೆ. ವಿಶೇಷವೆಂದರೆ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರು ತಮ್ಮ ಮೊಬೈಲ್‌ ಮೂಲಕ ಅವರವರ ಭಾಗದ ಚಿತ್ರೀಕರಣ ಮಾಡಿದ್ದಾರೆ. ಅಷ್ಟಕ್ಕೂ ಈ ಕಿರುಚಿತ್ರ ಮಾಡಲು ಕಾರಣವೇನೆಂದು ನೀವು ಕೇಳಬಹುದು. ಅದಕ್ಕೆ ಉತ್ತರ ಜನರ ಮೊಗದಲ್ಲಿ ನಗು ಮೂಡಿಸೋದು.

ಸದ್ಯ ಜನ ಕೋವಿಡ್ 19  ಮಹಾಮಾರಿಯಿಂದ ಬೇಸತ್ತಿದ್ದಾರೆ. ಇಂತಹ ಹೊತ್ತಲ್ಲಿ ಅವರ ಮೊಗದಲ್ಲಿ ನಗು ಮೂಡಿಸುವ ಉದ್ದೇಶದಿಂದ ಈ ಕಿರುಚಿತ್ರ ಮಾಡಲಾಗಿದೆಯಂತೆ. ಈ ಕಿರುಚಿತ್ರದಲ್ಲಿ ಸುಧಾ ಬೆಳವಾಡಿ, ಸುನೇತ್ರಾ, ರಮೇಶ್‌ ಪಂಡಿತ್‌ ಹಾಗೂ ಹೊರದೇಶದ ಅವರ ಸ್ನೇಹಿತರು ಕೂಡಾ ಕಾಣಿಸಿಕೊಂಡಿದ್ದಾರಂತೆ. ಈ ಹಿಂದೆ ಭಾರತೀಯ ಚಿತ್ರರಂಗದ ತಾರೆಯರು ಸೇರಿ ಫ್ಯಾಮಿಲಿ ಎಂಬ ಕಿರುಚಿತ್ರ ಮಾಡಿದ್ದರು. ಆದರೆ, ಪದ್ಮಜಾ ರಾವ್‌ ಅವರು ಫ್ಯಾಮಿಲಿ ಬಿಡುಗಡೆಯಾಗುವ ಮೊದಲೇ ಈ ಕಿರುಚಿತ್ರದ ತಯಾರಿ ಮಾಡಿಕೊಂಡಿದ್ದರಂತೆ. ಲಾಕ್‌ ಡೌನ್‌ ಮಧ್ಯೆ ಅನೇಕ ಸಿನಿಮಾ ಮಂದಿ ಕಿರುಚಿತ್ರಗಳ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುತ್ತಿದ್ದಾರೆ. ಈಗಾಗಲೇ ಸಂಡೆ, ಪಕೋಡ ಸೇರಿದಂತೆ ಹಲವು ಕಿರುಚಿತ್ರಗಳು ಬಂದಿವೆ. ಈಗ ಪದ್ಮಜಾ ರಾವ್‌ ಅವರ ಕಿರುಚಿತ್ರ ಹೊಸ ಸೇರ್ಪಡೆ.

Advertisement

Udayavani is now on Telegram. Click here to join our channel and stay updated with the latest news.

Next