ನವದೆಹಲಿ: ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಜನತಾ ಪಕ್ಷ ಭರ್ಜರಿ ಜಯಗಳಿಸಿದ ಬೆನ್ನಲ್ಲೇ ಶಿವಸೇನಾ ಮುಖಂಡ, ಸಂಸದ ಸಂಜಯ್ ರಾವತ್, ಬಹುಜನ್ ಸಮಾಜ್ ಪಕ್ಷದ ಮುಖ್ಯಸ್ಥೆ ಮಾಯಾವತಿ ಹಾಗೂ ಎಐಎಂಐಎಂ ವರಿಷ್ಠ ಅಸಾದುದ್ದೀನ್ ಒವೈಸಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಉತ್ತರಪ್ರದೇಶದಲ್ಲಿ ಬಿಜೆಪಿ ಜಯಗಳಿಸಲು ಕೊಡುಗೆ ನೀಡಿದ ಮಾಯಾವತಿ ಮತ್ತು ಒವೈಸಿಗೆ ಪದ್ಮ ವಿಭೂಷಣ ಅಥವಾ ಭಾರತ್ ರತ್ನ ಪ್ರಶಸ್ತಿ ನೀಡಬೇಕು ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಮೋದಿ ಚಿತ್ತ ಗುಜರಾತ್ ನತ್ತ; ಅಹಮದಾಬಾದ್ ನಲ್ಲಿ ಪ್ರಧಾನಿ ಮೋದಿ ಮೆಗಾ ರೋಡ್ ಶೋ
ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ದೊಡ್ಡ ಜಯಗಳಿಸಿದೆ. ಆದರೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಈ ಬಾರಿ ಮೂರು ಪಟ್ಟು ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಿದೆ. 2017ರಲ್ಲಿ 42 ಸ್ಥಾನಗಳಿಸಿದ್ದ ಸಮಾಜವಾದಿ ಪಕ್ಷ 2022ರಲ್ಲಿ 125 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಬಿಜೆಪಿ ಗೆಲುವಿಗೆ ಮಾಯಾವತಿ ಮತ್ತು ಒವೈಸಿ ಕೊಡುಗೆ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಪದ್ಮವಿಭೂಷಣ ಅಥವಾ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ.
ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೂ ಕೂಡಾ ಉತ್ತರಾಖಂಡ್ ನಲ್ಲಿ ಬಿಜೆಪಿ ಮುಖ್ಯಮಂತ್ರಿ ಪುಷ್ಕರ್ ಸೋಲನ್ನನುಭವಿಸಿದ್ದಾರೆ. ಗೋವಾದಲ್ಲಿ ಇಬ್ಬರು ಡಿಸಿಎಂಗಳು ಪರಾಜಯಗೊಂಡಿದ್ದು, ಪಂಜಾಬ್ ಜನತೆ ಬಿಜೆಪಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ ಎಂದು ರಾವತ್ ಆರೋಪಿಸಿದರು.
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ, ಗೃಹ ಸಚಿವರು, ರಕ್ಷಣಾ ಸಚಿವರು ಸೇರಿದಂತೆ ಎಲ್ಲರೂ ಭರ್ಜರಿ ಪ್ರಚಾರ ಕೈಗೊಂಡಿದ್ದರೂ ಕೂಡಾ ಬಿಜೆಪಿ ಸೋತಿದ್ದು ಹೇಗೆ ಎಂದು ರಾವತ್ ಪ್ರಶ್ನಿಸಿದ್ದಾರೆ. ಉತ್ತರಾಖಂಡ್, ಗೋವಾದಲ್ಲಿ ನಿಮ್ಮದೇ ಸರ್ಕಾರವಿತ್ತು, ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದೀರಿ. ಆದರೆ ಪಂಜಾಬ್ ನಲ್ಲಿ ನೀವು (ಬಿಜೆಪಿ) ಹೆಚ್ಚಿನ ಮತ ಕಳೆದುಕೊಂಡಿದ್ದೀರಿ ಎಂದು ರಾವತ್ ಹೇಳಿದರು.