ಬೆಂಗಳೂರು: ವೈದ್ಯಕೀಯ ನೆರವಿನ ಅವಶ್ಯಕತೆ ಇರುವ ವಿಪ್ರ ಸಮುದಾಯದ ಅಶಕ್ತರಿಗೆ ನೆರವಾಗುವ ದೃಷ್ಟಿಯಿಂದ ಮೆಡಿಕಲ್ ಹೆಲ್ಪ್ ಲೈನ್ ಆರಂಭಿಸುವ ಕುರಿತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚಿಂತನೆ ನಡೆಸಿದ್ದು ಶೀಘ್ರವೇ ಅದರ ರೂಪುರೇಷೆ ಗಳನ್ನು ಸಿದ್ಧಪಡಿಸಲಾಗುವುದು ಎಂದು ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ತಿಳಿಸಿದ್ದಾರೆ.
ಬನಶಂಕರಿ 2ನೆ ಹಂತದ ಬಿನ್ಎಂ ತಾಂತ್ರಿಕ ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆದ ಸಮಾಂರಂಭದಲ್ಲಿ ಮಹಾಸಭಾದ ವೈದ್ಯಕೀಯ ಕೋಶವನ್ನು ಉದ್ಘಾಟಿಸಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಿರಿಯ ತಜ್ಞ ವೈದ್ಯ ಡಾ. ಬಿ.ಎನ್. ಗಂಗಾಧರ್ ಅವರಿಗೆ ವೈದ್ಯ ವಿಪ್ರ ಸೇವಾರತ್ನ ಪ್ರಶಸ್ತಿ ಹಾಗೂವೈದ್ಯಕೀಯ ಕ್ಷೆತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಡಾ.ಶ್ರೀನಿವಾಸ ಬನ್ನಿಗೋಲ, ಡಾ. ಶ್ರೀಮತಿ ಜಯಂತಿ, ಹಾಗೂ ಡಾ. ರವಿಕುಮಾರ್ ಅವರಿಗೆ ವಿಪ್ರ ವೈದ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಾಸಭಾದ ಸದಸ್ಯರಿಗೆ ರಿಯಾಯ್ತಿ ದರದಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ತಮ್ಮ ಯೋಜನೆಗೆ ಉತ್ತೇಜನದಾಯಕ ಪ್ರತಿಕ್ರಿಯೆ ದೊರೆತಿದ್ದು ಬೆಂಗಳೂರಿನ ಹಲವು ಆಸ್ಪತ್ರೆಗಳು ಮಹಾಸಭಾದ ಜತೆ ಕೈಜೋಡಿಸಲು ಮುಂದೆ ಬಂದಿವೆ.ಈಗಾಗಲೇ 10 ಪ್ರತಿಷ್ಠಿತ ಆಸ್ಪತ್ರೆಗಳ ಜತೆ ಈ ಕುರಿತು ಒಪ್ಪಂದವೂ ಆಗಿದೆ ಎಂದೂ ತಿಳಿಸಿದರು.
ವೈದ್ಯ ವೃತ್ತಿ ಅತ್ಯಂತ ಪವಿತ್ರವಾದುದಾಗಿದೆ. ಇಂತಹ ಸನ್ನಿವೇಶದಲ್ಲಿ ಸಮುದಾಯದ ವೈದ್ಯರಿಗಾಗೇ ಪ್ರತ್ಯೇಕ ಸಂಘಟನೆ ಅವಶ್ಯಕತೆ ಇದೆಯೆ ಎಂಬ ಪ್ರಶ್ನೆಗಳು ಮುಡುವುದ ಸಹಜ . ಆದರೆ ಇಡೀ ಸಮಾಜ ಜಾತಿ ವ್ಯಸ್ಥೆಯ ಬುನಾದಿಯ ಮೇಲೆಯೆ ನಿಂತಿರುವುದರಿಂದ ವೈದ್ಯರೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಒಂದೇ ವೇದಿಕೆಯಡಿ ಸಂಘಟಿಸಿ ಸಮುದಾಯದ ಬಡವರಿಗೆ ಅಗತ್ಯ ನೆರವು ಕಲ್ಪಿಸುವುದು ಸಂಘಟನೆಯ ಮುಖ್ಯ ಉದ್ದೇಶವಾಗಿದೆ ಈ ಹಿನ್ನಲೆಯಿಂದ ನೋಡುವುದಾದರೆ ಇಂತಹ ಸಂಘಟನೆಗಳ ರಚನೆ ಅಸ್ತಿತ್ವ ಸಮುದಾಯಕ್ಕೆ ಅಗತ್ಯವಾಗಿದೆ ಎಂದರು.
Related Articles
ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವ ಬ್ರಾಹ್ಮಣ ಸಮುದಾಯದ ಅಸಂಖ್ಯ ಜನರ ಆರ್ಥಿಕವಾಗಿ ಕಷ್ಟದಲ್ಲಿದ್ದಾರೆ. ಅಂತಹವರನ್ನು ಗುರುತಿಸಿ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡುವುದು ಮಹಾಸಭೆ ಉದ್ದೇಶಗಳಲ್ಲಿ ಒಂದಾಗಿದೆ ಎಂದರು.
ಸಮಾಜದಲ್ಲಿ ಇತರ ಸಮುದಾಯಗಳ ಸಂಘಟನೆಗಳ ಮಟ್ಟಕ್ಕೆ ಬ್ರಾಹ್ಮಣ ಮಹಾಸಭಾದ ಸಂಘಟನೆ ಬೆಳೆದು ನಿಲ್ಲಬೇಕು ಎಂದ ಅವರು,ಜಗತ್ತಿನ ಎಲ್ಲ ಜನರೂ ಸುಖ, ಶಾಂತಿ. ನೆಮ್ಮದಿಯಿಂದ ಬದುಕಬೇಕೆಂಬ ಮೂಲ ಮಂತ್ರವೇ ಮಹಾಸಭಾದ ಕಾರ್ಯ ಸೂಚಿಯೂ ಆಗಿದೆ. ಇದೇ ವೇಳೆ ಒಂದು ಸಮುದಾಯವಾಗಿ ಬ್ರಾಹ್ಮಣ ಸಮಾಜದ ಸಂಘಟನೆ ಬಲಗೊಳ್ಳುವ ಅವಶ್ಯಕತೆಯೂ ಇದೆ ಎಂದೂ ಹೇಳಿದರು.
ಸಮುದಾಯದಲ್ಲಿರುವ ಲೆಕ್ಕ ಪರಿಶೋಧಕರನ್ನು ಗುರುತಿಸಿ ಅವರದ್ದೇ ಆದ ಒಂದು ಪ್ರತ್ಯೇಕ ಘಟಕವನ್ನು ಮಹಾಸಭಾದ ಸಂಘಟನೆ ಅಡಿಯಲ್ಲಿ ಪ್ರಾರಂಭಿಸಲು ಉದ್ದೇಶಿಸಿದ್ದು ಇದರಿಂದ ವಿಪ್ರ ಸಮುದಾಯದ ಬಂಧುಗಳಿಗೆ ಅನುಕೂಲ ಆಗಲಿದೆ ಎಂದರಲ್ಲದೇ ಸಮಾರಂಭದಲ್ಲಿ ಸನ್ಮಾನಿತರಾದ ವೈದ್ಯಕೀಯ ಕ್ಷೇತ್ರದ ಗಣ್ಯರನ್ನು ಅಭಿನಂದಿಸಿದರು.
ಸಮಾರಂಭದಲ್ಲಿ ಪ್ರಾಸ್ತಾವಿಕ ಭಾಷಣ ಮಾಡಿದ ವೈದ್ಯ ಕೋಶದ ಸಂಚಾಲಕ ಡಾ. ಸಿ.ಎ.ಕಿಶೋರ್ ವಿಪ್ರ ಸಮುದಾಯಕ್ಕೆ ತುರ್ತು ವೈದ್ಯಕೀಯ ನೆರವು ಕಲ್ಪಿಸುವ ಉದ್ದೇಶದಿಂದ ಮಹಾಸಭಾದ ಅಡಿಯಲ್ಲಿ ವೈದ್ಯಕೀಯ ಕೋಶ ಅಸ್ತಿತ್ವಕ್ಕೆ ಬಂದಿದ್ದು ವಿಪ್ರ ಸಮುದಾಯದ ವೈದ್ಯರುಗಳನ್ನು ಸಂಘಟಿಸುವ ಮೂಲಕ ಅಗತ್ಯ ಇರುವ ಸಮಾಜದ ಬಂಧುಗಳಿಗೆ ವೈದ್ಯಕೀಯ ನೆರವು ಒದಗಿಸಲು ಉದ್ದೇಶಿಲಾಗಿದೆ. ಒಂದೇ ವೇದಿಕೆಯಡಿ ವಿವಿಧ ವೈದ್ಯ ಪರಂಪರೆಗೆ ಸೇರಿದ ತಜ್ಞ ವೈದ್ಯರು ಈ ಕೋಶದಲ್ಲಿದ್ದು ಸಮಾಜ ಬಾಂಧವರಿಗೆ ಅಗತ್ಯ ವೈದ್ಯಕೀಯ ನೆರವು ನೀಡಲಿದ್ದಾರೆ ಎಂದೂ ವಿವರಿಸಿದರು.
ಕಾರ್ಯಕ್ರಮದಲ್ಲಿ ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಹಾಜರಿದ್ದು ಶುಭ ಕೋರಿದರು. ಶ್ರೀಮತಿ ಮೇಧಿನಿ ಗರುಡಾಚಾರ್, ಚಲನ ಚಿತ್ರ ಕಲಾವಿದರಾದ ಸುಚೇಂದ್ರ ಪ್ರಸಾದ್, ಸುಂದರರಾಜ್, ಡಾ.ಎಸ್.ಜಿ.ಕುಲಕರ್ಣಿ, ಬ್ರಾಹ್ಮಣ ಮಹಾಸಭಾದ ಸಂಘಟನಾ ಕಾರ್ಯದರ್ಶಿ ಡಾ.ರಾಘವೇಂದ್ರ ಭಟ್, ಹಿರಿಯ ಪದಾಧಿಕಾರಿ ಹಿರಿಯಣ್ಣ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು. ಶ್ರೀ ಸದ್ಗುರು ವೇದ ಪಾಠ ಶಾಲೆಯ ವೇದ ಪಂಡಿತರಿಂದ ವೇಧ ಘೋಷ, ಡಾ. ಅನಘಾ ಸಂಗಡಿಗರು ಧನ್ವಂತರಿ ಸ್ತುತಿ ನಡೆಯಿತು. ಶ್ರೀಮತಿ ಬಿ.ಕೆ.ಸುಮತಿ ವಂದಿಸಿದರು. ಇದೇ ಸಂದರ್ಭದಲ್ಲಿ ಉಚಿತ ವೈದ್ಯಕೀಯ ಶಿಬಿರವೂ ನಡೆಯಿತು ಸುಮಾರು ನೂರಕ್ಕೂ ಹೆಚ್ಚುಮಂದಿ ಇದರ ಪ್ರಯೋಜನ ಪಡೆದರು.