Advertisement

ಸಿನಿಮಾ ಸಾಹಿತಿ ಎಂಬ ಪೊರೆ ಕಳಚಿತು ಪದ್ಮಶ್ರೀ: ಡಾ.ದೊಡ್ಡರಂಗೇಗೌಡ

06:10 AM Jan 29, 2018 | |

“ನನ್ನನ್ನು ಕೇವಲ ಗೀತರಚನೆಕಾರ, ಸಿನಿಮಾ ಹಾಡು ಬರೆಯೋನು ಅಂತ ನೋಡುವುದು ಸರಿಯಾದ ದೃಷ್ಟಿಕೋನ ಅಲ್ಲ. ಈ ಬಗ್ಗೆ ನನಗೆ ವಿಷಾದ ಇದ್ದೇ ಇದೆ.ಈ ಮೇರು ಪ್ರಶಸ್ತಿ ಬಂದಿದ್ದರಿಂದ ಸಿನಿಮಾ ಹಾಡುಗಳಿಗಿಂತ ಹೊರತಾಗಿ ನನ್ನನ್ನು ಜನ ಗುರುತಿಸುವಂತಾಯಿತು.’

Advertisement

 -ಇದು ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ.ದೊಡ್ಡರಂಗೇಗೌಡ ಅವರ ನುಡಿಗಳು.

“ಉದಯವಾಣಿ’ಗೆ ಭಾನುವಾರ ನೀಡಿದ ವಿಶೇಷ ಸಂದರ್ಶದಲ್ಲಿ ಅವರು ತಮ್ಮ ಬಾಲ್ಯ,ಸಾಹಿತ್ಯ, ಸಿನಿಮಾ, ನಾಟಕ… ಹೀಗೆ ತಾವು ಕೈಯಾಡಿಸಿದ ಕ್ಷೇತ್ರಗಳ ಬಗ್ಗೆ ನೆನಪುಗಳನ್ನು ಹಂಚಿಕೊಂಡರು. ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ
ಮಾಡಿದರೂ ಕೇವಲ ಸಿನಿಮಾ ಸಾಹಿತಿ ಎಂದು ಮಾತ್ರ ಸಾಹಿತ್ಯಲೋಕ ತಮ್ಮನ್ನು ನೋಡುತ್ತಿರುವ ಬಗ್ಗೆ ಮನದಾಳದ ನೋವು ಹೇಳಿಕೊಂಡರು.

ನನಗೆ ಗೊತ್ತಿಲ್ಲ, ಸಿನಿಮಾದಲ್ಲಿ ಜನಪ್ರಿಯನಾದ ತಕ್ಷಣ ಏಕೆ ಆತನನ್ನು ಬರೀ ಸಿನಿಮಾ ದೃಷ್ಟಿಯಲ್ಲಿ ನೋಡಬೇಕು? 29 ವಿಮಶಾì ಸಂಕಲನಗಳಿವೆ, ಆರು ಪ್ರವಾಸ ಕಥನಗಳಿವೆ, ಮೂರು ಜೀವನ ಚರಿತ್ರೆಗಳಿವೆ, ಎರಡು ಸಂಪುಟಗಳ ಮುಕ್ತಕ ಸಂಕಲನ, ನಾಲ್ಕು ರೂಪಕಗಳು ಪ್ರಕಟವಾಗಿವೆ. ಅನೇಕ ಪುಸ್ತಕಗಳು ಬಂದಿವೆ. ಮಾವು ಬೇವು ಸೇರಿ ಭಾವಗೀತೆಗಳ ಹಲವು ಸಿ.ಡಿ.ಗಳು ಅತ್ಯಂತ ಜನಪ್ರಿಯವಾಗಿದೆ. ಹೀಗಿರುವಾಗ ಕೇವಲ ಗೀತೆರಚನೆಕಾರ ಎಂದು ಗುರುತಿಸುವುದು ಸರಿಯಲ್ಲ ಎಂದರು.

ಐದನೇ ತರಗತಿಯಲ್ಲೇ ಪದ್ಯ: ನನ್ನ ಊರು ತುಮಕೂರು ಜಿಲ್ಲೆ ಮಧುಗಿರಿಯಿಂದ 15 ಕಿ.ಮೀ.ದೂರದಲ್ಲಿರುವ ಕುರುಬರಹಳ್ಳಿ ಎಂಬ ಪುಟ್ಟ ಹಳ್ಳಿ. ಬಾಲ್ಯದಲ್ಲಿ 30-35 ಮಂದಿಯ ದೊಡ್ಡ ಸಂಸಾರ ನಮ್ಮದು. ತಾತ ಊರಿನ ಪಟೇಲರಾಗಿದ್ದರು. ಶಿಕ್ಷಕರಾಗಿದ್ದ ತಂದೆ ಹಾರ್ಮೋನಿಯಂ ಹಿಡಿದುಕೊಂಡು ಮನೆ ಪಕ್ಕದ ಮಾರಮ್ಮನ ಗುಡಿಯಲ್ಲಿ ಕುಳಿತು ಹಾಡುತ್ತಿದ್ದರು. ಚಿಕ್ಕಪ್ಪ, ತಾಯಿ, ಅಜ್ಜಿ, ಅಕ್ಕಂದಿರು ಹಾಡುತ್ತಿದ್ದ ಜಾನಪದ ಗೀತೆಗಳನ್ನು ಕೇಳಿಕೊಂಡು ಬೆಳೆದೆ. ಜತೆಗೆ ಊರಿನ ಹಿರಿಯರು ತಮಟೆ ಬಾರಿಸಿಕೊಂಡು ಹಾಡುತ್ತಿದ್ದ ಜಾನಪದ ಗೀತೆಗಳನ್ನು ಕೇಳುತ್ತಾ ಬೆಳೆದೆ. ಇದರಿಂದಾಗಿ ನಾನೂ ಏಕೆ ಬರೆಯಬಾರದು ಎಂದು ಯೋಚಿಸಿ, ಕುವೆಂಪು ಮತ್ತು ಮಂಜೇಶ್ವರ ಗೋವಿಂದ ಪೈಗಳ ಹಾಡುಗಳಿಂದ ಪ್ರಭಾವಿತನಾಗಿ 5ನೇ ತರಗತಿಯಲ್ಲಿ ದ್ದಾಗ “ತಂಪಿನ ಮುಂಪಿನ ಕೇದಗೆ ವನವೇ, ಕಂಪಿನ ಮಾಲೆಯ ಮುಡಿದಿಹ ಮನವೇ, ಕಂಪೂ ಇಂಪೂ ಎರಡೂ ಕೂಡಿ ಮನಸನು ಕೇದಗೆ ವನವನು ಮಾಡಿ, ನೆರೆಹೊರೆಗೆಲ್ಲಾ ಪರಿಮಳ ಬೀರಿ ಬದುಕುವುದಾಗಲಿ ನಮ್ಮ ಗುರಿ’ ಎಂಬ ಪದ್ಯ ರಚಿಸಿದ್ದೆ.

Advertisement

ಮನುಜ ಎಂಬ ಕಾವ್ಯನಾಮ: ಹೈಸ್ಕೂಲ್‌ನಲ್ಲಿದ್ದಾಗ ನನ್ನ ಕವಿತೆಯನ್ನು ಮೊಟ್ಟ ಮೊದಲು ಗುರುತಿಸಿದ್ದು ಶಿಕ್ಷಕರಾಗಿದ್ದ ಎ. ರಾಮಚಂದ್ರರಾಯರು. ಪ್ರಶ್ನೋತ್ತರ ಬರೆಯುವ ಬದಲು ಪದ್ಯ ಬರೆದಾಗ ಅದನ್ನು ಓದಿಸಿ ಬೆನ್ನುತಟ್ಟಿದರು. ಹೀಗೆ ಮುಂದುವರಿದ ನನ್ನ ಕವಿತೆಯ ಪ್ರೀತಿ ಮುಂದೆ ಬೆಳೆಯಲಾರಂಭಿಸಿತು. ನನ್ನ ತಂದೆಗೆ ನಾನು ವಿಜ್ಞಾನಿಯಾಗಬೇಕೆಂಬ ಆಸೆ. ಹೀಗಾಗಿ ನನ್ನ ಬರಹ ತಂದೆಗೆ ಗೊತ್ತಾಗಬಾರದೆಂದು “ಮನುಜ’ ಎಂಬ ಕಾವ್ಯನಾಮದಲ್ಲಿ ಬರೆಯಲಾರಂಭಿಸಿದೆ. ಇದಕ್ಕೆ ಪ್ರೇರಣೆ ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆ.

ಪಿರಮಿಡ್‌ನ‌ಲ್ಲಿ ಕನ್ನಡದ ಬಗ್ಗೆ ಸಂಶೋಧಿಸಿದ್ದೆ: ಕಾಲೇಜು ನಂತರ ಅಂಚೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿದೆ. ಬೆಂಗಳೂರಿಗೆ ವರ್ಗಾವಣೆ ಮಾಡಿಸಿಕೊಂಡು ರೈಲ್ವೆ ನಿಲ್ದಾಣದಲ್ಲಿ ಬರುವ ಅಂಚೆಗಳನ್ನು ತೆಗೆದುಕೊಳ್ಳುತ್ತಾ ರಾತ್ರಿ ಪಾಳಿ ಕೆಲಸ ಮಾಡಿ ಹಗಲು ಓದುತ್ತಿದ್ದೆ. ನನ್ನ 300 ಚುಟುಕಗಳು ದಿ ಐಕಾನ್‌ ಆಫ್ ಕನ್ನಡ ಲಿಟರೇಚರ್‌ ಎಂಬ ಹೆಸರಿನಲ್ಲಿ ಆಂಗ್ಲ ಭಾಷೆಗೆ ತರ್ಜುಮೆಯಾಗಿ ಅಲ್ಲಿ ಜನಪ್ರಿಯವಾಯಿತು. ಕೆಲವು ಗೀತೆಗಳು ಗೀತವೈಭವ್‌ ಹೆಸರಿನಲ್ಲಿ ಹಿಂದಿಗೆ ಭಾಷಾಂತರಗೊಂಡಿತು. ಮಲೆಯಾಳಂ ಭಾಷೆಯಲ್ಲೂ ನನ್ನ ಕವನಗಳು ಭಾಷಾಂತರಗೊಂಡಿವೆ. ಈಜಿಪ್ಟಿನ ಪಿರಮಿಡ್‌ಗಳಲ್ಲಿ ಕನ್ನಡದ ಅಕ್ಷರಗಳಿರುವುದನ್ನು ಸಂಶೋಧನೆ ಮಾಡಿದವನು ನಾನು.

1960ರ ದಶಕದಿಂದಲೇ ನಾನು ಪದ್ಯಗಳನ್ನು ಬರೆಯುತ್ತಿದ್ದೆ. ನನ್ನ “ಕಣ್ಣು ನಾಲಗೆ ಕಳವು’ ಕವನ ಸಂಕಲನಕ್ಕೆ 1972ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು. ಆಗ ತೀರ್ಪುಗಾರರಾಗಿದ್ದವರು ಹಾ.ಮ.ನಾಯಕ್‌, ವಿ.ಕೃ.
ಗೋಕಾಕ್‌, ವಿ.ಸೀತಾರಾಮಯ್ಯ. ಉದಯವಾಣಿ ದೀಪಾವಳಿ ಸಂಚಿಕೆಯಲ್ಲಿ ನನ್ನ 27 ಕವಿತೆಗಳನ್ನು ಚಿತ್ರಸಹಿತ ಪ್ರಕಟಿಸಲಾಗಿತ್ತು. ನನ್ನ ಚುಟುಕು ಕವನಗಳು ಆಂಗ್ಲ ಮತ್ತು ಮಲೆಯಾಳಂ ಭಾಷೆಗೆ ತರ್ಜುಮೆಯಾಗಿತ್ತು. ಶಿಶುನಾಳ ಶರೀಫ‌, ಕುವೆಂಪು, ನಿಸಾರ್‌ ಅಹಮದ್‌ ಅವರ ಪದ್ಯಗಳ ಸಿ.ಡಿ. ಕನ್ನಡದ ಮೊದಲ ಮೂರು ಸಿ.ಡಿ.ಗಳಾದರೆ, ಮಾವು ಬೇವು ಎಂಬ ನನ್ನ ಭಾವಗೀತೆಗಳ ಸಿ.ಡಿ. ನಾಲ್ಕನೆಯದ್ದು. ಒಂದು ವರ್ಷದಲ್ಲಿ ಅಧಿಕೃತವಾಗಿ ಒಂದು ಸಾವಿರ ಸಿ.ಡಿ.
ಮಾರಾಟವಾದರೆ ಗೋಲ್ಡ್‌ ಡಿಸ್ಕ್ ಎಂದು ಬಿಡುಗಡೆ ಮಾಡುತ್ತಿದ್ದರು ಎಂದರು. ಪದ್ಮಶ್ರೀ ಪುರಸ್ಕೃತ ದೊಡ್ಡರಂಗೇಗೌಡರನ್ನು ಸನ್ಮಾನಿಸಲು ನಾಡಿನ ಸಂಘ-ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆ.

ಸಿನಿಮಾದಲ್ಲಿ ಜನಪ್ರಿಯನಾದ ತಕ್ಷಣ ಏಕೆ ಆತನನ್ನು ಬರೀ ಸಿನಿಮಾ ದೃಷ್ಟಿಯಲ್ಲಿ ನೋಡಬೇಕು? 29 ವಿಮಶಾì ಸಂಕಲನಗಳಿವೆ, ಆರು ಪ್ರವಾಸ ಕಥನಗಳಿವೆ, 3 ಜೀವನ ಚರಿತ್ರೆಗಳಿವೆ, 2 ಸಂಪುಟಗಳ ಮುಕ್ತಕ ಸಂಕಲನ,4 ರೂಪಕಗಳು ಪ್ರಕಟವಾಗಿವೆ. ಅನೇಕ ಪುಸ್ತಕಗಳು ಬಂದಿವೆ. ಮಾವು ಬೇವು ಸೇರಿ ಭಾವಗೀತೆಗಳ ಹಲವು ಸಿ.ಡಿ.ಗಳು ಅತ್ಯಂತ ಜನಪ್ರಿಯವಾಗಿದೆ. ಹೀಗಿರುವಾಗ ಗೀತೆ ರಚನೆಕಾರ ಎಂದು ಗುರುತಿಸುವುದು ಸರಿಯಲ್ಲ .
–  ಡಾ.ದೊಡ್ಡರಂಗೇಗೌಡ, ಹಿರಿಯ ಸಾಹಿತಿ

ಈಗಿನ ಮಕ್ಕಳು ಕನ್ನಡ ಮಾತನಾಡುವಂತಾಗಬೇಕು ಎಂಬ ಕಿವಿಮಾತಿನೊಂದಿಗೆ ಉದಯವಾಣಿ ಬಳಗದೊಂದಿಗೆ ತಮ್ಮ ಮಧುರ ಸಂಬಂಧವನ್ನು ಮೆಲುಕು ಹಾಕಿದ್ದಾರೆ ಡಾ.ದೊಡ್ಡರಂಗೇಗೌಡರು. ಈ ವಿಡಿಯೋ ನೋಡಲು ಇಲ್ಲಿ //bit.ly/2nhJa24 ಟೈಪ್‌ ಮಾಡಿ.

– ಎಂ.ಪ್ರದೀಪಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next