ಬೆಂಗಳೂರ: ನನ್ನೂರಿನ ಬಡಮಕ್ಕಳಿಗಾಗಿ ಪಬ್ಲಿಕ್ ಶಾಲೆ ಮತ್ತು ಪಿಯು ಕಾಲೇಜು ತೆರೆಯಬೇಕು ಎಂಬ ಕನಸು ಕಂಡಿದ್ದೇನೆ. ಇದನ್ನು ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸರಕಾರ ಹೆಜ್ಜೆಯಿರಿಸಲಿ ಎಂದು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಮನವಿ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ನಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ 217ನೇ ತಿಂಗಳ ಅತಿಥಿಯಾಗಿ ಭಾಗವಹಿಸಿ ತಾವು ಸಾಗಿ ಬಂದ ಹಾದಿಯನ್ನು ಮೆಲಕು ಹಾಕಿದರು.
ಅಕ್ಷರದ ಅರಿವಿಲ್ಲದ ಮುಜುಗರದ ಬದುಕು ನನ್ನೂರಿನಲ್ಲಿ ನಾನು ಶಾಲೆ ತೆರೆಯುವಂತೆ ಮಾಡಿತು. ಊರಿನ ನೂರಾರು ಬಡ ಮಕ್ಕಳ ಬದುಕಿಗೆ ಅದು ಅರಿವಿನ ಬೆಳಕಾಗಿತು. ಜೀವನದಲ್ಲಿ ಇದಕ್ಕಿಂತ ಹೆಚ್ಚಿನ ಸಂತೋಷ ಬೇರೆ ಯಾವುದೂ ಇಲ್ಲ ಎಂದರು.
ಬಡತನದ ಜೀವನ ನನ್ನನ್ನು ಪದ್ಮಶ್ರೀ ವರೆಗೂ ಕೊಂಡೊಯ್ದಿದೆ. ಕಿತ್ತಳೆ ಮಾರಾಟ ಮಾಡಿ ದಿನಕಳೆಯುತ್ತಿದ್ದ ನನ್ನನು ಗಡಿಮೀರಿ ಜನರು ಪ್ರೀತಿಸುವಂತಾದುದು ನಿರೀಕ್ಷೆಗೂ ಮೀರಿದ ಸಂಗತಿ ಎಂದು ಹೇಳಿದರು.
ಊರಿನಲ್ಲಿ ಶಾಲೆ ಆರಂಭಿಸಲು ಆಗ ಶಾಸಕರಾಗಿದ್ದ ಯು.ಟಿ.ಫರೀದ್ ಅವರ ಸಹಾಯವನ್ನು ಮರೆಯಲು ಸಾಧ್ಯವೇ ಇಲ್ಲ. ನಮ್ಮ ಶಾಲೆಯಲ್ಲಿ ಕಲಿತ ಎಷ್ಟೋ ಮಕ್ಕಳು ಉತ್ತಮ ಸಾಧನೆ ಮಾಡಿರುವುದನ್ನು ಕಂಡಾಗ ತುಂಬಾ ಎಂದಾಗ ಖುಷಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್.ರಂಗಪ್ಪ ಮತ್ತಿತರರು ಉಪಸ್ಥಿತರಿದ್ದರು.
ಸಚಿವರ ಜತೆ ಕನ್ನಡದಲ್ಲೇ ಮಾತಾಡಿದೆ :
ಪ್ರಶಸ್ತಿ ಸಮಾರಂಭದ ವೇಳೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಜತೆಯಲ್ಲಿ ಕನ್ನಡದಲ್ಲೇ ಮಾತನಾಡಿದೆ. ನಾನು ಕೂಡ ಕನ್ನಡಿಗಳು ಎಂದು ಹೇಳಿ ಅವರು ಖುಷಿ ಪಟ್ಟರು ಎಂದು ಹಾಜಬ್ಬ ಹೇಳಿದರು.