Advertisement

ಅತ್ಯುನ್ನತ ನಾಗರಿಕ ಪ್ರಶಸ್ತಿಗಳ ಘನತೆ, ಗೌರವ ಕಾಪಾಡಿ

11:28 PM Jan 26, 2022 | Team Udayavani |

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ಪ್ರಶಸ್ತಿಗಳ ಪಟ್ಟಿಯನ್ನು ಕೇಂದ್ರ ಸರಕಾರ ಮಂಗಳವಾರ ಬಿಡುಗಡೆ ಮಾಡಿದೆ.

Advertisement

ಕಳೆದ ಐದಾರು ವರ್ಷಗಳಿಂದೀಚೆಗೆ ಕೇಂದ್ರ ಸರಕಾರ ಪದ್ಮ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಿ ಈ ಅತ್ಯುನ್ನತ ಪ್ರಶಸ್ತಿಗಳ ಘನತೆ, ಗೌರವವನ್ನೂ ಹೆಚ್ಚಿಸುವಂತೆ ಮಾಡಿದೆ. ಈ ಹಿಂದೆ ಪದ್ಮ ಪ್ರಶಸ್ತಿ ಎಂದಾಕ್ಷಣ ನೆನಪಾಗುತ್ತಿದ್ದುದು ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿ, ಭಾರೀ ಪ್ರಚಾರ ದಲ್ಲಿದ್ದ ಗಣ್ಯಾತಿಗಣ್ಯರು. ದೇಶದ ಎಲ್ಲೋ ಮೂಲೆಯಲ್ಲಿ ಕಿಂಚಿತ್ತೂ ಪ್ರಚಾರ ಬಯಸದೇ ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆಗೈದ ಅಸಾಧಾರಣ ವ್ಯಕ್ತಿಗಳಾರೂ ಪ್ರಶಸ್ತಿ ಪಟ್ಟಿಯಲ್ಲಿ ಗೋಚರಿಸುತ್ತಿರಲಿಲ್ಲ. ವಿವಿಧ ಧರ್ಮ, ಜಾತಿ, ರಾಜಕೀಯ ಒತ್ತಡ, ಶಿಫಾರಸು, ಪ್ರಲೋಭನೆ, ವಶೀಲಿಬಾಜಿಗಳೇ ಪ್ರಶಸ್ತಿ ವಿಜೇತರ ಆಯ್ಕೆಯಲ್ಲಿ ಹೆಚ್ಚು ಪ್ರಭಾವ ಬೀರುತ್ತಿತ್ತು. ಇದೇ ಕಾರಣ ದಿಂದಾಗಿ ಪದ್ಮ ಪ್ರಶಸ್ತಿ ಆದಿಯಾಗಿ ಸರಕಾರದಿಂದ ಯಾವುದೇ ಪ್ರಶಸ್ತಿ, ಪುರಸ್ಕಾರ, ಗೌರವಗಳು ಪ್ರಕಟವಾದಾಗಲೆಲ್ಲ ವಿವಾದ ಅವುಗಳ ಬೆನ್ನಲ್ಲೇ ಹುಟ್ಟಿಕೊಳ್ಳುತ್ತಿತ್ತು. ಹಾಗೆಂದು ಈ ಹಿಂದೆ ಈ ಅತ್ಯುನ್ನತ ಪ್ರಶಸ್ತಿ, ಗೌರವ ಗಳಿಗೆ ಪಾತ್ರರಾದವರನ್ನೆಲ್ಲ ಇದೇ ತಕ್ಕಡಿಯಲ್ಲಿಟ್ಟು ತೂಗಿದರೆ ಅದು ತೀರಾ ಅಕ್ಷಮ್ಯವಾದೀತು ಮಾತ್ರವಲ್ಲದೆ ಆ ಸಾಧಕರಿಗೆ ಹಾಗೂ ಪ್ರಶಸ್ತಿಯ ಘನತೆಗೆ ಕುಂದು ಉಂಟುಮಾಡಿದಂತಾದೀತು.

ಆದರೆ ಈ ಪ್ರಶಸ್ತಿ, ಪುರಸ್ಕಾರಗಳ ಆಯ್ಕೆ ಪ್ರಕ್ರಿಯೆಗೆ ಬದಲಾವಣೆಯ ಸ್ಪರ್ಶ ನೀಡಿ ದೇಶದ ಅತ್ಯುನ್ನತ ಗೌರವ ಸಮಾಜದಲ್ಲಿನ ಜನಸಾಮಾನ್ಯ ಸಾಧಕನಿಗೆ ಲಭಿಸುವಂತೆ ಮಾಡಿದ ಶ್ರೇಯ ಹಾಲಿ ಸರಕಾರಕ್ಕೆ ಸಲ್ಲುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ದೇಶದ ತೀರಾ ಕುಗ್ರಾಮದ ಸಾಧಕ ರನ್ನೂ ಗುರುತಿಸಿ, ಅವರನ್ನು ದಿಲ್ಲಿಗೆ ಕರೆಸಿಕೊಂಡು ಪ್ರಶಸ್ತಿ ನೀಡಿ ಗೌರವಿಸು ತ್ತಿರುವುದು ಹೆಮ್ಮೆಯೇ ಸರಿ. ಈ ಮೂಲಕ ಪ್ರತಿಯೋರ್ವನಲ್ಲೂ ಸಾಧ ನೆಯ ಬೀಜವನ್ನು ಬಿತ್ತುವ ಕಾರ್ಯವನ್ನು ಸರಕಾರ ಮಾಡಿದೆ ಎಂದರೆ ಅದು ಖಂಡಿತ ಅತಿಶಯೋಕ್ತಿಯಾಗ ಲಾರದು. ಈ ಬಾರಿ ಪದ್ಮ ಪ್ರಶಸ್ತಿಗೆ ಪಾತ್ರರಾದವರ ಉದ್ದನೆಯ ಪಟ್ಟಿಯ ಮೇಲೆ ಒಮ್ಮೆ ಕಣ್ಣು ಹಾಯಿಸಿದರೆ ಅವರಲ್ಲಿ ಬಹುತೇಕ ಹೆಸರು ಅಪರಿಚಿತವೇ. ಕೆಲವೊಂದು ಹೆಸರುಗಳನ್ನು ಗಮನಿಸಿದಾಗ ಹೀಗೊಬ್ಬರೂ ಇದ್ದಾರಾ? ಎಂಬ ಉದ್ಗಾರ ನಮ್ಮಿಂದ ಬಾರದೇ ಇರಲಾರದು. ಪ್ರಶಸ್ತಿ, ಸಮ್ಮಾನಗಳೆಂದಾಕ್ಷಣ ಮಾರು ದೂರ ಓಡುತ್ತಿದ್ದವರನ್ನೂ ಗುರುತಿಸಿ ಸರಕಾರ ಅವರ ಸಾಧನೆಗೊಂದು ಶಹಭಾಸ್‌ ಎಂದಿದೆ.

ಈ ಬಾರಿಯೂ ಕೆಲವೊಂದು ಪ್ರಶಸ್ತಿ ವಿಜೇತರ ಬಗ್ಗೆ ಸೈದ್ಧಾಂತಿಕ ಮತ್ತು ರಾಜಕೀಯ ನೆಲೆಗಟ್ಟಿನಲ್ಲಿ ಆಕ್ಷೇಪಗಳು ಕೇಳಿಬಂದಿವೆ. ಇದು ಸಾಮಾನ್ಯ ಬೆಳವಣಿಗೆಯಾಗಿದ್ದು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ರಾಜಕೀಯ ಪಕ್ಷವೊಂದರ ಸರಕಾರ ಅಧಿಕಾರದಲ್ಲಿರುವಾಗ ಇಂಥ ಬೆಳವಣಿಗೆಗಳು ಸಹಜವೇ. ಬೆರಳೆಣಿಕೆ ಮಂದಿ ಪ್ರಶಸ್ತಿಯನ್ನು ತಿರಸ್ಕರಿಸುವುದಾಗಿ ಹೇಳಿದ್ದಾರೆ. ಇದು ಅವರವರ ವಿವೇಚನೆಗೆ ಬಿಟ್ಟ ವಿಚಾರ. ಸೈದ್ಧಾಂತಿಕ ಅಥವಾ ರಾಜಕೀಯ ಕಾರಣದಿಂದ ಇವರು ಈ ನಿರ್ಧಾರವನ್ನು ಕೈಗೊಂಡಿರಬಹುದು. ಪ್ರಶಸ್ತಿ, ಸಮ್ಮಾನ, ಗೌರವಗಳನ್ನು ಬಲವಂತವಾಗಿ ಹೇರುವುದೂ ಸರಿಯಲ್ಲ ಮಾತ್ರವಲ್ಲದೆ ಅವರು ತಿರಸ್ಕರಿಸಿದರು ಎಂಬ ಕಾರಣಕ್ಕಾಗಿ ಬೀದಿಯಲ್ಲಿ ನಿಂತು ಹೇಳಿಕೆ, ಸಮರ್ಥನೆ, ಟೀಕೆ ಮಾಡುವುದೂ ಸೂಕ್ತವಲ್ಲ. ಇದರಿಂದ ಪ್ರಶಸ್ತಿಯ ಘನತೆ, ಗೌರವಕ್ಕೆ ಚ್ಯುತಿಯಾಗುತ್ತದೆ ಎಂಬುದು ಪ್ರತಿಯೊಬ್ಬರ ವಿವೇಕದಲ್ಲಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next