ಮಂಗಳೂರು: ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಘೋಷಣೆಯಾಗಿದ್ದು, ಆ ಮೂಲಕ ಕರಾವಳಿಯು ಫೆರ್ನಾಂಡಿಸ್ ಅವರ ದೇಶ ಸೇವೆಯನ್ನು ಮತ್ತೆ ಸ್ಮರಿಸು ವಂತಾಗಿದೆ. ಈ ನಾಡಿನ ಅಪ್ರತಿಮ ಹೋರಾಟಗಾರರಾಗಿದ್ದ ಫೆರ್ನಾಂಡಿಸ್ ಕೊಂಕಣ ರೈಲ್ವೇಯ ರೂವಾರಿ. ಕೇಂದ್ರ ರೈಲ್ವೇ ಇಲಾಖೆಯ ಸಚಿವರಾಗಿದ್ದಾಗ ಅವರ ಛಲದಿಂದಾಗಿ ಈ ಯೋಜನೆ ಸಾಕ್ಷಾತ್ಕಾರಗೊಂಡಿತ್ತು. ಇದಕ್ಕಾಗಿ ಪ್ರತ್ಯೇಕ ನಿಗಮ ಸ್ಥಾಪಿಸಿ, ಅನುದಾನ ಒದಗಿಸಿ, ಉದ್ಘಾಟಿಸಿದ್ದರಿಂದ ಅವರ ಹೆಸರು ಅಜರಾಮರ.
ಮಂಗಳೂರು- ಮುಂಬಯಿ
ಮಂಗಳೂರಿನಲ್ಲಿ ಜಾನ್ ಜೋಸೆಫ್ ಫೆರ್ನಾಂಡಿಸ್- ಎಲೀಸ್ ಮಾರ್ಥಾ ದಂಪತಿಯ ಪುತ್ರನಾಗಿ 1930ರ ಜೂ.3ರಂದು ಜನಿಸಿದರು. ಮುಂದೆ ಮುಂಬಯಿಗೆ ಪಯಣಿಸಿದರು. ಅಲ್ಲಿ ಟ್ರೇಡ್ ಯೂನಿಯನ್ ನಾಯಕನಾಗಿ ರೂಪುಗೊಂಡ ಜಾರ್ಜ್ ಒಂದು ಕರೆ ನೀಡಿದರೆ ಮುಂಬಯಿಗೆ ಮುಂಬಯಿಯೇ ಸ್ತಬ್ಧ ಎಂಬಷ್ಟರ ಮಟ್ಟಿನ ವರ್ಚಸ್ಸು ಬೆಳೆಸಿಕೊಂಡರು. ಕಾರ್ಮಿಕ ನಾಯಕ, ಕೃಷಿಕ, ರಾಜಕಾರಣಿ, ಸಚಿವ, ಆಡಳಿತಗಾರ… ಬಹುಮುಖೀ ವ್ಯಕ್ತಿತ್ವ ಅವರದಾಗಿತ್ತು.
ಜಾರ್ಜ್ ಕರಾವಳಿ ಭಾಗದಲ್ಲಿ ಜನಪ್ರಿಯರಾಗಲು ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯೂ ಕಾರಣವಾಗಿತ್ತು. 1977ರಲ್ಲಿ ಚುನಾವಣೆ ಘೋಷಣೆಯಾದಾಗ ಜಾರ್ಜ್ ಬಿಹಾರದ ಜೈಲಿನಲ್ಲಿ ಇದ್ದುಕೊಂಡೇ ಚುನಾವಣೆಗೆ ಸ್ಪರ್ಧಿಸಿ ಜನತಾ ಪಕ್ಷದಿಂದ ಗೆದ್ದರು. ಬಂಧಮುಕ್ತರಾದ ಬಳಿಕ ಮೊರಾರ್ಜಿ ಸಂಪುಟದಲ್ಲಿ ಸಚಿವರಾದರು. ರೈಲ್ವೇ, ರಕ್ಷಣಾ ಮುಂತಾದ ಮಹತ್ವದ ಖಾತೆಗಳನ್ನು ನಿರ್ವಹಿಸಿ ಪ್ರಸಿದ್ಧಿ ಪಡೆದರು.
ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಅವರು ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದಾಗ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದರು. 9-9-1942ರಂದು ಬ್ರಿಟಿಷರ ವಿರುದ್ಧ ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಂದ ನಡೆದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿದ್ದರು.