Advertisement
ಈ ಬಾರಿಯ ಗಣರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯನ್ನು ಗಮನಿಸಿ. ಆ ಪಟ್ಟಿಯಲ್ಲಿರುವ ಬಹಳಷ್ಟು ಗಣ್ಯರ ಹೆಸರು ಅವರು ವಾಸವಾಗಿರುವ ರಾಜ್ಯದಲ್ಲೇ ಬಹಳಷ್ಟು ಮಂದಿಗೆ ಅಪರಿಚಿತ. ಆದರೆ ಅವರು ಮಾಡಿದ ಮತ್ತು ಮಾಡುತ್ತಿರುವ ಸಾಧನೆ, ನೀಡಿದ ಕೊಡುಗೆ ಎಲ್ಲ ಎಲ್ಲೆಗಳನ್ನು ಮೀರಿ ನಿಲ್ಲುವಂತಹದ್ದು. ದೇಶದ ಯಾವುದೋ ಮೂಲೆಯಲ್ಲಿ ಕುಳಿತು ಸುತ್ತಮುತ್ತಲಿನ ಜನರ ಸೇವೆ ಮಾಡುವ, ದೇಶಭಕ್ತಿಯ ಜಾಗೃತಿ ಮೂಡಿಸುವ, ಸರ್ವಧರ್ಮ ಸಾಮರಸ್ಯಕ್ಕೆ ಕೊಡುಗೆ ನೀಡುವ ಅಸಾಧಾರಣ ವ್ಯಕ್ತಿಗಳಿಗೆ ಈ ಭಾರಿ ದೇಶದ ಅತ್ಯುನ್ನತ ಪುರಸ್ಕಾರಗಳು ಲಭಿಸಿವೆ. ಒಂದೆರಡು ವರ್ಷಗಳ ಹಿಂದೆ ಆರಂಭಿಸಿದ ಈ ಸತ್ಸಂಪ್ರದಾಯ ಈ ವರ್ಷವೂ ಮುಂದುವರಿದುಕೊಂಡು ಬಂದಿರುವುದು ಪ್ರಶಂಸಾರ್ಹ.
Related Articles
Advertisement
ದೇಶದ ನಾಗರಿಕ ಪ್ರಶಸ್ತಿ/ಪುರಸ್ಕಾರಗಳನ್ನು ಒಬ್ಬ ವ್ಯಕ್ತಿ ದೇಶಕ್ಕೆ /ಸಮಾಜಕ್ಕೆ ನೀಡಿದ ಅತ್ಯುನ್ನತ ಕೊಡುಗೆಯನ್ನು ಗಮನಿಸಿ ನೀಡಿದಾಗ ವಿವಾದಗಳು ಉಂಟಾಗುವುದಿಲ್ಲ. ರಾಜಕೀಯ ಕಾರಣಕ್ಕಾಗಿ, ಚುನಾವಣೆ ದೃಷ್ಟಿಯಿಂದ ಇಂತಹ ಪ್ರಶಸ್ತಿ/ಪುರಸ್ಕಾರಗಳನ್ನು ಯಾವುದೇ ಸರಕಾರ ನೀಡಲು ಮುಂದಾದರೆ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಇನ್ನೂ ವಿಶೇಷವೆಂದರೆ ದೇಶದ ಪ್ರಧಾನಿಯಾಗಿದ್ದಾಗಲೇ ಭಾರತ ರತ್ನ “ಪಡೆದುಕೊಂಡವರ’ ಪರಂಪರೆಯೂ ನಮ್ಮಲ್ಲಿದೆ. 1947ರಿಂದ 1964ರ ತನಕ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರೂ ಅವರು 1955ರಲ್ಲಿ ಭಾರತರತ್ನ ಪಡೆದುಕೊಂಡಿದ್ದರೆ, 1966ರಿಂದ 1977 ಮತ್ತು 1980ರಿಂದ 1984ರ ವರೆಗೆ ಪ್ರಧಾನಿ ಯಾಗಿದ್ದ ಇಂದಿರಾಗಾಂಧಿ ಅವರು 1971ರಲ್ಲಿ ಭಾರತರತ್ನ ಪಡೆದು ಕೊಂಡರು. ಇದಕ್ಕಿಂತ ಸ್ವಲ್ಪ ಭಿನ್ನವಾಗಿ ಅಂದರೆ ಮರಣೋತ್ತರ ವಾಗಿ ನೆಹರೂ ಕುಟುಂಬದ, 1984ರಿಂದ 1989ರ ವರೆಗೆ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರಿಗೂ 1991ರಲ್ಲಿ ಅಂದಿನ ಕಾಂಗ್ರೆಸ್ ಸರಕಾರ ಭಾರತ ರತ್ನ ನೀಡಿ ಗೌರವಿಸಿತು. ಇದರೊಂದಿಗೆ ಒಂದೇ ಕುಟುಂಬದ ಮೂವರಿಗೆ “ಭಾರತ ರತ್ನ’ ಲಭಿಸಿದಂತಾಯಿತು. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ಅಂದಿನ ದಿನಗಳಲ್ಲಿ ನಡೆಯಿತು. ರಾಜಕೀಯಕ್ಕಾಗಿ ಇಂತಹ ಉನ್ನತ ಪುರಸ್ಕಾರಗಳನ್ನು ಬಳಸುವ ಬಗ್ಗೆಯೂ ಒಂದಷ್ಟು ಕಾಲ ಚರ್ಚೆ ನಡೆದು ಮತ್ತೆ ತಣ್ಣಗಾಯಿತು.
ಈ ನಡುವೆ ಭಾರತ ರತ್ನ ಮತ್ತು ಇತರ ನಾಗರಿಕ ಪುರಸ್ಕಾರಗಳನ್ನು ಇಂಥವರಿಗೆ ನೀಡಿದ್ದು ನಮ್ಮ ಸರಕಾರ ಎಂದು ಪ್ರಚಾರ ಮಾಡುವ ಮೂಲಕ ಅವುಗಳನ್ನು ರಾಜಕೀಯಕ್ಕೆ ಬಳಸುವ ಪ್ರಯತ್ನಗಳು ಆಗಾಗ ನಡೆಯುತ್ತಲೇ ಇವೆ. ಉದಾಹರಣೆಗೆ ಸಂವಿಧಾನದ ಪಿತಾಮಹ ಡಾ| ಬಿ. ಆರ್. ಅಂಬೇಡ್ಕರ್ ಅವರಿಗೆ ವಿ.ಪಿ. ಸಿಂಗ್ ಸರಕಾರ ಭಾರತ ರತ್ನ ನೀಡಿ ಅವರಿಗೆ ರಾಷ್ಟ್ರೀಯ ಗೌರವ ಸಲ್ಲಿಸಿತು ಎಂದು ಹೇಳುವ ಮೂಲಕ ಕಾಂಗ್ರೆಸ್ಸೇತರ ಪಕ್ಷಗಳು ಸಣ್ಣ ಆಂದೋಲನ ನಡೆಸಲು ಮುಂದಾದವು. ಆದರೆ ಅದು ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಎಷ್ಟು ಪರಿಣಾಮ ಕಾರಿಯಾಯಿತು ಎಂಬುದು ಬೇರೆ ವಿಚಾರ. ಕಾಂಗ್ರೆಸ್ಸೇತರ ಪಕ್ಷಗಳು ಅಂಬೇಡ್ಕರ್ ವಿಚಾರವನ್ನು ರಾಜಕೀಯ ದೃಷ್ಟಿಯಿಂದ ಕೈಗೆತ್ತಿಕೊಂಡಿದ್ದಲ್ಲಿ ತಪ್ಪೇನಿಲ್ಲ ಅನಿಸುತ್ತದೆ. 1947ರಿಂದ 1990ರ ವರೆಗಿನ 43 ವರ್ಷಗಳ ಅವಧಿಯಲ್ಲಿ ಸುಮಾರು 4-5 ವರ್ಷ ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ದೇಶವಾಳಿದ ಕಾಂಗ್ರೆಸ್ ಸರಕಾರಕ್ಕೆ ಡಾ| ಅಂಬೇಡ್ಕರ್ ಅವರ ನೆನಪಾಗಲಿಲ್ಲವೇ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ಇವೆಲ್ಲವುಗಳನ್ನು ಗಮನಿಸಿದಾಗಿ ಪ್ರಶಸ್ತಿ/ಪುರಸ್ಕಾರಗಳಿಗೆ ಗೌರವ ಬರುವುದು ಆಯಾಯ ಕಾಲದ ಸರಕಾರಗಳು ತೆಗೆದು ಕೊಳ್ಳುವ ನಿರ್ಧಾರಗಳಿಂದ ಎಂಬುದು ಸ್ಪಷ್ಟ. ನಮ್ಮ ರಾಷ್ಟ್ರೀಯ ಪ್ರಜ್ಞೆ ಅತು°ನ್ನತ ಪುರಸ್ಕಾರಗಳಿಗೆ ಸಾಧಕರನ್ನು ನಿಷ್ಪಕ್ಷಪಾತವಾಗಿ/ ಯಾವುದೇ ಪ್ರಲೋಭನೆ, ಒತ್ತಡಕ್ಕೊಳಗಾಗದೇ ಆಯ್ಕೆ ಮಾಡುವ ಮೂಲಕ ವ್ಯಕ್ತವಾಗಬೇಕು. ದೇಶದ ಯಾವುದೋ ಮೂಲೆಯಲ್ಲಿ ಸದ್ದುಗದ್ದಲವಿಲ್ಲದೇ ಕೆಲಸ ಮಾಡುವ ಮಹನೀಯರನ್ನು ಹುಡುಕುವ ಕೆಲಸ ಇನ್ನಷ್ಟು ನಡೆಯಬೇಕಾಗಿದೆ. ಹಳ್ಳಿಗಳಲ್ಲಿ ಆರೋಗ್ಯ ಭಾಗ್ಯ ಒದಗಿಸುತ್ತಿರುವ ನಾಟಿ ವೈದ್ಯರಿಂದ ಹಿಡಿದು ಮಂಗಳನ ಅಂಗಳಕ್ಕೆ ಕಾಲಿಡಲು ಸಿದ್ಧತೆ ನಡೆಸುತ್ತಿರುವ ನಮ್ಮ ವಿಜ್ಞಾನಿಗಳ ವರೆಗಿನ ಸಾಧನೆಗಳು, ಸಾಮರಸ್ಯದ ಬದುಕು ನಡೆಸಲು ಪ್ರೇರಣೆ ನೀಡುವವರು, ದೇಶದ ಸಮಗ್ರತೆ, ರಾಷ್ಟ್ರೀಯತೆಗೆ ಸದಾ ದುಡಿಯುವವರು, ಧಾರ್ಮಿಕ ಗುರುಗಳಿಗೆ, ಚಿಂತಕರಿಗೆ ಗೌರವ ಸಲ್ಲಿಸಿದಾಗ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಅರಿವಾಗುತ್ತದೆ.
ಈ ಹಿಂದೆ ಬಹುತೇಕ ಸಂದರ್ಭಗಳಲ್ಲಿ ಇಂತಹ ರಾಷ್ಟ್ರೀಯ ಪುರಸ್ಕಾರಗಳನ್ನು ಘೋಷಿಸಿದಾಗಲೆಲ್ಲಾ ರಾಜಕೀಯದ ವಾಸನೆ ಬರುತ್ತಿತ್ತು. ಈ ಬಾರಿ ಅಂಥ ಪ್ರಮಾದಗಳಾಗಿಲ್ಲ ಎಂಬುದು ಬಹುತೇಕರ ಅಭಿಪ್ರಾಯ. ರಾಜಕೀಯದಿಂದ ಹೊರ ಬಂದು ಅದರಾಚೆಗೆ ನಾವು ಕೆಲಸ ಮಾಡಿ ತೋರಿಸಬಹುದು ಎಂಬ ಬದ್ಧತೆ ನಮ್ಮನ್ನಾಳುವವರಿಗೆ ಇದ್ದರೆ ಬದಲಾವಣೆ ಸಾಧ್ಯ. ನಮ್ಮನ್ನಾಳು ವವರಿಗೆ ಮಾತ್ರವಲ್ಲ ನಮ್ಮಲ್ಲೂ ಅಂತಹ ಬದ್ಧತೆ ಇರಬೇಕು.
ಎ.ವಿ. ಬಾಲಕೃಷ್ಣ