ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅಭಿನಯ ಬ್ರಹ್ಮ ಅನಂತ್ ನಾಗ್ ಅವರಿಗೆ 2022ರ ಸಾಲಿನ ಪದ್ಮ ಪ್ರಶಸ್ತಿ ನೀಡಬೇಕೆಂದು ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಸೇರಿದಂತೆ ಚಂದನವನದ ಸಾಕಷ್ಟು ಜನರು ಒತ್ತಾಯಿಸಿದ್ದು, ಈ ಕುರಿತು ಟ್ವಿಟರಿನಲ್ಲಿ ಅಭಿಯಾನ ಶುರು ಮಾಡಿದ್ದಾರೆ.
ಈ ವರ್ಷದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳಿಗೆ ಜನರೇ ತಮ್ಮ ನಡುವಿನ ಸಾಧಕರ ಹೆಸರನ್ನು ಶಿಫಾರಸು ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ #PeoplesPadma ಹ್ಯಾಷ್ಟ್ಯಾಗ್ನಡಿ ಅಭಿಯಾನವೊಂದು ಆರಂಭವಾಗಿದ್ದು, ಕನ್ನಡದ ಖ್ಯಾತ ನಟ ಅನಂತ್ ನಾಗ್ (Anant Nag) ಅವರಿಗೆ ಈ ವರ್ಷದ ಪದ್ಮ ಪ್ರಶಸ್ತಿಯನ್ನು (Padma Awards 2021) ನೀಡಬೇಕೆಂದು ಒತ್ತಾಯಿಸಲಾಗುತ್ತಿದೆ.
#AnanthnagForPadma ಎಂಬ ಹ್ಯಾಷ್ಟ್ಯಾಗ್ನಡಿ ಟ್ವಿಟ್ಟರ್ನಲ್ಲಿ ಅಭಿಯಾನ ನಡೆಯುತ್ತಿದ್ದು, ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ ಕೂಡ ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ದೇಶದ ಅತ್ಯುನ್ನತ ಗೌರವಗಳಾದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳಿಗೆ ಸಾಧಕರನ್ನು ಆಯ್ಕೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಜನತೆಗೆ ಕರೆನೀಡಿದ್ದಾರೆ. ಚಿತ್ರರಂಗದ ಮಹಾನ್ ಪ್ರತಿಭೆಗಳಲ್ಲೊಬ್ಬರಾದ ಅನಂತ್ನಾಗ್ ಅವರು ಕನ್ನಡ ಭಾಷೆಗೆ, ನಾಡಿಗೆ, ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸೋಣ. ಕನ್ನಡನಾಡಿನ ಪರವಾಗಿ ಅನಂತ್ನಾಗ್ ಅವರನ್ನು #PeoplesPadma ಪ್ರಶಸ್ತಿಗೆ ನಾಮನಿರ್ದೇಶನ ಮಾಡೋಣ ಎಂದು ಈ ಕುರಿತು ಟ್ವಿಟ್ಟರ್ನಲ್ಲಿ ರಿಷಬ್ ಶೆಟ್ಟಿ ಪೋಸ್ಟ್ ಮಾಡಿದ್ದಾರೆ.
ಇನ್ನುರಕ್ಷಿತ್ ಶೆಟ್ಟಿಯವರು ಟ್ವೀಟ್ ಮಾಡಿ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದು, ಅಪ್ರತಿಮ ನಟನಿಗೆ ಅತ್ಯುನ್ನತ ಪ್ರಶಸ್ತಿಯೊಂದು ಗುಡಿಯ ಮೇಲೆ ಕಲಶವಿಟ್ಟಂತೆ. ಹಿರಿಯ ನಟ ಅನಂತ ನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡಬೇಕೆಂಬುದು ನನ್ನ ಹಾಗೂ ಕನ್ನಡಿಗರ ಆಶಯ. ಈ ಪ್ರಯತ್ನಕ್ಕೆ ನಾವೆಲ್ಲರೂ ಒಂದಾಗಿ ಬೆಂಬಲ ಸೂಚಿಸೋಣ ಎಂದಿದ್ದಾರೆ.
ಇನ್ನು ಭಾರತದಲ್ಲಿ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿದ್ದಾರೆ. ಅವರನ್ನು ಮುನ್ನೆಲೆಗೆ ತಂದು ಅವರ ಸಾಧನೆಯನ್ನು ದೇಶಕ್ಕೆ ಪರಿಚಯಿಸುವ ಉದ್ದೇಶದಿಂದ ತೆರಮರೆಯಲ್ಲಿರುವ ಸಾಧಕರನ್ನು ಪದ್ಮ ಪ್ರಶಸ್ತಿಗೆ ಜನರೇ ಶಿಫಾರಸು ಮಾಡಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. #PeoplesPadma ಹ್ಯಾಷ್ಟ್ಯಾಗ್ನಡಿ ಜನರೇ ತಮ್ಮ ನಡುವಿನ ಸಾಧಕರನ್ನು ನಾಮನಿರ್ದೇಶನ ಮಾಡುವ ಅವಕಾಶ ನೀಡಲಾಗಿದೆ. ಸೆಪ್ಟೆಂಬರ್ 15ರವರೆಗೆ ಈ ಹ್ಯಾಷ್ಟ್ಯಾಗ್ನಡಿ ನಾಮಿನೇಟ್ ಮಾಡಲು ಅವಕಾಶ ಇರುತ್ತದೆ. ಆ ನಾಮನಿರ್ದೇಶನಗಳಲ್ಲಿ ಅತ್ಯುತ್ತಮವಾದವರನ್ನು ಆಯ್ಕೆ ಮಾಡಿ ಪದ್ಮ ಪ್ರಶಸ್ತಿಯನ್ನು ನೀಡಲಾಗುತ್ತದೆ.