Advertisement

Ranji; ತಮಿಳುನಾಡು ವಿರುದ್ಧ ಪಡಿಕ್ಕಲ್‌ ಅಜೇಯ 151 ರನ್‌ ಪರಾಕ್ರಮ

12:04 AM Feb 10, 2024 | Team Udayavani |

ಚೆನ್ನೈ: ಭಾರತ “ಎ’ ತಂಡದ ಪರ ಯಶಸ್ವಿ ಅಭಿಯಾನ ಮುಗಿಸಿ ಬಂದ ಕರ್ನಾಟಕದ ಎಡಗೈ ಬ್ಯಾಟರ್‌ ದೇವದತ್ತ ಪಡಿಕ್ಕಲ್‌ ರಣಜಿಯಲ್ಲಿ ಶತಕದ ಆಟವನ್ನು ಮುಂದುವರಿಸಿದ್ದಾರೆ. ಆತಿಥೇಯ ತಮಿಳುನಾಡು ವಿರುದ್ಧ ಆರಂಭಗೊಂಡ “ಸಿ’ ವಿಭಾಗದ ರಣಜಿ ಪಂದ್ಯದಲ್ಲಿ ಅಜೇಯ 151 ರನ್‌ ಬಾರಿಸಿ ಕರ್ನಾಟಕದ ರಕ್ಷಣೆಗೆ ನಿಂತಿದ್ದಾರೆ. ಮೊದಲ ದಿನದಾಟದಲ್ಲಿ ಅಗರ್ವಾಲ್‌ ಪಡೆ 5 ವಿಕೆಟಿಗೆ 288 ರನ್‌ ಪೇರಿಸಿ ಸುಸ್ಥಿತಿಯಲ್ಲಿ ನೆಲೆಸಿದೆ.

Advertisement

ವನ್‌ಡೌನ್‌ನಲ್ಲಿ ಬ್ಯಾಟ್‌ ಹಿಡಿದು ಬಂದ ಪಡಿಕ್ಕಲ್‌ ತಮಿಳುನಾಡು ಬೌಲರ್‌ಗಳಿಗೆ ಸವಾಲಾಗುತ್ತಲೇ ಹೋದರು. 216 ಎಸೆತಗಳನ್ನು ನಿಭಾಯಿಸಿದ ಅವರು 12 ಬೌಂಡರಿ ಮತ್ತು 6 ಪ್ರಚಂಡ ಸಿಕ್ಸರ್‌ ನೆರವಿನಿಂದ 151 ರನ್‌ ಬಾರಿಸಿದ್ದಾರೆ. ಇದು ಪ್ರಸಕ್ತ ರಣಜಿ ಋತುವಿನಲ್ಲಿ ಪಡಿಕ್ಕಲ್‌ ಹೊಡೆದ 3ನೇ ಶತಕ. ಈ ನಡುವೆ ಇಂಗ್ಲೆಂಡ್‌ ಲಯನ್ಸ್‌ ಎದುರಿನ 2 ಪಂದ್ಯಗಳಲ್ಲಿ ಒಂದು ಶತಕ ಹಾಗೂ ಅರ್ಧ ಶತಕ ಬಾರಿಸಿ ತಮ್ಮ ಉಜ್ವಲ ಬ್ಯಾಟಿಂಗ್‌ ಫಾರ್ಮ್ ತೆರೆದಿರಿಸಿದ್ದರು.

132 ರನ್‌ ಜತೆಯಾಟ
ಆರಂಭಕಾರ ಆರ್‌. ಸಮರ್ಥ್ 57 ರನ್‌ ಕೊಡುಗೆ ಸಲ್ಲಿಸಿದರು (159 ಎಸೆತ, 5 ಬೌಂಡರಿ). ಸಮರ್ಥ್-ಪಡಿಕ್ಕಲ್‌ ಜೋಡಿಯಿಂದ 2ನೇ ವಿಕೆಟಿಗೆ 132 ರನ್‌ ಹರಿದು ಬಂತು. ಅಗರ್ವಾಲ್‌ 20, ನಿಕಿನ್‌ ಜೋಸ್‌ 13, ಮನೀಷ್‌ ಪಾಂಡೆ 1, ಕಿಶನ್‌ ಬೆಡಾರೆ 3 ರನ್‌ ಮಾಡಿ ಪೆವಿಲಿಯನ್‌ ಸೇರಿಕೊಂಡಿದ್ದಾರೆ. ಪಡಿಕ್ಕಲ್‌ ಅವರೊಂದಿಗೆ ಬ್ಯಾಟಿಂಗ್‌ ಕಾಯ್ದುಕೊಂಡಿರುವವರು 35 ರನ್‌ ಮಾಡಿರುವ ಹಾರ್ದಿಕ್‌ ರಾಜ್‌. ಇವರಿಬ್ಬರು ಸೇರಿ 6ನೇ ವಿಕೆಟಿಗೆ 54 ರನ್‌ ಒಟ್ಟುಗೂಡಿಸಿದ್ದಾರೆ.

ತಮಿಳುನಾಡು ಪರ ಆರ್‌. ಸಾಯಿ ಕಿಶೋರ್‌ 3, ಎಸ್‌. ಅಜಿತ್‌ ರಾಮ್‌ 2 ವಿಕೆಟ್‌ ಉರುಳಿಸಿದರು. ಕೊನೆಯ ಅವಧಿಯಲ್ಲಿ ತಮಿಳುನಾಡು 3 ವಿಕೆಟ್‌ ಉರುಳಿಸಿದ ಕಾರಣ ಒಂದಿಷ್ಟು ಸಮಾಧಾನಪಟ್ಟಿತು.
ಇದು “ಸಿ’ ವಿಭಾಗದಲ್ಲಿ ಮೊದಲೆರಡು ಸ್ಥಾನ ಪಡೆದ ತಂಡಗಳ ಮುಖಾಮುಖೀಯಾದ ಕಾರಣ ತೀವ್ರ ಕುತೂಹಲ ಮೂಡಿಸಿದೆ.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ-5 ವಿಕೆಟಿಗೆ 288 (ಪಡಿಕ್ಕಲ್‌ ಬ್ಯಾಟಿಂಗ್‌ 151, ಸಮರ್ಥ್ 57, ಹಾರ್ದಿಕ್‌ ಬ್ಯಾಟಿಂಗ್‌ 35, ಅಗರ್ವಾಲ್‌ 20, ಸಾಯಿ ಕಿಶೋರ್‌ 94ಕ್ಕೆ 3, ಅಜಿತ್‌ ರಾಮ್‌ 53ಕ್ಕೆ 2).

Advertisement
Advertisement

Udayavani is now on Telegram. Click here to join our channel and stay updated with the latest news.

Next