Advertisement
ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಪಡಿಕಲ್ಲು ಎಂಬಲ್ಲಿ ತೋಡಿಗೆ ಸ್ಥಳೀಯರು ಸೇರಿಕೊಂಡು ಕಟ್ಟ ನಿರ್ಮಿಸಿ ನೀರನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಿದ್ದಾರೆ. ಇಲ್ಲಿ ಸಂಗ್ರಹವಾಗುವ ನೀರು ಕಣಿವೆಗಳ ಮೂಲಕ ತೋಟಗಳಿಗೆ ಹರಿದು ಕೃಷಿ ಭೂಮಿಯನ್ನು ತಣಿಸುತ್ತದೆ. ಬೇಸಗೆ ಆರಂಭದಲ್ಲಿ ಕಟ್ಟ ನಿರ್ಮಾಣ ಕಾರ್ಯ ನಡೆಸುವ ಇಲ್ಲಿನ ಜನರು ನಿರ್ಮಾಣ ಪೂರ್ಣಗೊಂಡ ಬಳಿಕ ತೋಡಿಗೆ ಬಾಗಿನ ಅರ್ಪಿಸುತ್ತಾರೆ.
ಪಡಿಕಲ್ಲುವಿನಲ್ಲಿ ತೋಡಿಗೆ ಕಟ್ಟ ನಿರ್ಮಿಸುವ ಜಾಗದಲ್ಲಿ ಸಾಕಷ್ಟು ಹೂಳು ತುಂಬಿತ್ತು. ಈ ಬಗ್ಗೆ ಯೋಜನೆ ರೂಪಿಸಿ ಕಳೆದ ವರ್ಷ ಉದ್ಯೋಗ ಖಾತ್ರಿ ಯೋಜನೆಯ ಸುಮಾರು 2.80 ಲಕ್ಷ ರೂ. ಅನುದಾನದಲ್ಲಿ ಹೂಳು ತುಂಬಿ ದ್ದನ್ನು ತೆರವು ಮಾಡಲಾಯಿತು. ಬಳಿಕ ಸ್ಥಳೀಯರು ಕಟ್ಟ ಕಟ್ಟಿದ್ದಾರೆ. ಈ ವರ್ಷವೂ ಅದನ್ನು ಮುಂದುವರಿಸಿದ್ದಾರೆ.
Related Articles
ಈ ಹಿಂದೆ ಹಿರಿಯರು ಕೃಷಿ ಮಾಡು ತ್ತಿರುವ ಸಂದರ್ಭದಲ್ಲಿ ಇದೇ ಪಡಿಕಲ್ಲು ಪ್ರದೇಶದಲ್ಲಿ ತೋಡಿಗೆ ಕಟ್ಟ ನಿರ್ಮಿಸಿ ಗದ್ದೆಗಳಿಗೆ ನೀರು ಹರಿಸುತ್ತಿದ್ದರು. ಆದರೆ 25-30 ವರ್ಷಗಳ ಹಿಂದೆ ಆ ಕೆಲಸ ನಿಂತು ಹೋಗಿತ್ತು. ಬೇಸಗೆಯಲ್ಲಿ ನೀರಿನ ಕೊರತೆ ನೀಗಲು, ಅಂತರ್ಜಲ ವೃದ್ಧಿಗೆ, ತೋಟಕ್ಕೆ ನೀರು ಹರಿಸಲು ಗ್ರಾ.ಪಂ. ಸದಸ್ಯ ಮಾಧವ ಚಾಂತಾಳ ನೇತೃತ್ವದಲ್ಲಿ ಕಟ್ಟ ಕಟ್ಟುವ ಕೆಲಸ ಮರು ಆರಂಭಿಸಲಾಗಿದೆ.
Advertisement
ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಆಗ್ರಹಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸುವಂತೆ ಹಲವು ವರ್ಷಗಳಿಂದ ಆಗ್ರಹಿಸುತ್ತ ಬಂದರೂ ಪ್ರಯೋಜನವಾಗಿಲ್ಲ ಎಂಬ ದೂರು ಕೇಳಿ ಬಂದಿದೆ. ಅಣೆಕಟ್ಟು ನಿರ್ಮಾಣವಾದಲ್ಲಿ ಇಲ್ಲಿನ ನೀರಿನ ಅಭಾವ ಶಾಶ್ವತವಾಗಲಿ ನೀಗಲಿದೆ. ಹೀಗಾಗಿ ಶೀಘ್ರ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲು ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಮಳೆ ಪ್ರಾರಂಭವಾದ ಬಳಿಕ ಬೇಸಗೆಯಲ್ಲಿ ನಿರ್ಮಿಸಿದ ಕಟ್ಟ ಒಡೆದು ಹೋಗುತ್ತದೆ. ಬಳಿಕ ಮುಂದಿನ ವರ್ಷ ಬೇರೆಯೆ ಕಟ್ಟ ನಿರ್ಮಿಸಬೇಕಾಗುತ್ತದೆ. ಸರಕಾರಕ್ಕೆ ಈ ಬಗ್ಗೆ ಹಲವು ಬಾರಿ ಸ್ಥಳೀಯರು ಮನವಿ ಕೂಡ ಸಲ್ಲಿಸಿದ್ದಾರೆ. ಅಂತರ್ಜಲ ವೃದ್ಧಿ
ಮೊದಲು ಇಲ್ಲಿನ ಬಾವಿ, ಕೆರೆಗಳಲ್ಲಿ ಬೇಸಗೆಯಲ್ಲಿ ನೀರು ಬತ್ತಿ ಹೋಗುತ್ತಿತ್ತು. ಆದರೆ ಪಡಿಕಲ್ಲುವಿನಲ್ಲಿ ಇಲ್ಲಿ ಕಟ್ಟ ನಿರ್ಮಿಸಿ ನೀರು ಸಂಗ್ರಹಿಸಲು ಆರಂಭಿಸಿದ ಬಳಿಕ ತೋಟಕ್ಕೆ ನೀರು ಪೊರೈಕೆ ಆಗುವ ಜತೆಗೆ ಕೆರೆ, ಬಾವಿಗಳಲ್ಲಿ ಬೇಸಗೆಯಲ್ಲಿ ನೀರು ತುಂಬಿರುತ್ತದೆ ಎನ್ನುತ್ತಾರೆ ಗ್ರಾಮಸ್ಥರು. ಅಲ್ಲದೇ ಈ ಭಾಗದ ಪರಿಸರ ಬಿಸಿಲಿನ ಬೇಗೆಯ ನಡುವೆಯೂ ತಂಪಾಗಿರುತ್ತದೆ. ಮನವಿ ಸಲ್ಲಿಕೆ
ಎರಡು ವರ್ಷಗಳಿಂದ ಇಲ್ಲಿನ ತೋಟಗಳಿಗೆ ಸ್ಥಳೀಯರೇ ಸೇರಿಕೊಂಡು ಕಟ್ಟ ನಿರ್ಮಿಸಿ ನೀರು ಹರಿಸುತ್ತಿದ್ದೇವೆ. ಇಲ್ಲಿ ಸರಕಾರದ ಅನುದಾನದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾದಲ್ಲಿ ಬಹಳಷ್ಟು ಪ್ರಯೋಜನವಾಗಲಿದೆ. ಈ ಬಗ್ಗೆ ಮನವಿ ಕೂಡ ಸಲ್ಲಿಸಲಾಗಿದೆ.
-ಮಾಧವ ಚಾಂತಾಳ,
ಕೊಲ್ಲಮೊಗ್ರು ಗ್ರಾ.ಪಂ. ಸದಸ್ಯರು