Advertisement

ರೈಲು ಹಳಿಗೆ ಗುಡ್ಡಕುಸಿತ ತಡೆಯಲು “ಗೇಬಿಯನ್‌ ವಾಲ್‌’! ಪಡೀಲ್‌ನಲ್ಲಿ ಶಿಲೆಕಲ್ಲುಗಳ ಬೃಹತ್‌ ತಡೆಗೋಡೆ

11:54 PM Dec 19, 2022 | Team Udayavani |

ಮಹಾನಗರ: ಪಡೀಲ್‌ನಲ್ಲಿ ಕಳೆದ ಮಳೆಗಾಲದ ವೇಳೆ ರೈಲು ಹಳಿ ಮೇಲೆ ಗುಡ್ಡ ಕುಸಿತ ಉಂಟಾದ ಪ್ರದೇಶದಲ್ಲಿ ಮತ್ತೆ ಗುಡ್ಡ ಜರಿದು ಬೀಳದಂತೆ ತಡೆ ಗೋಡೆ ನಿರ್ಮಿಸುವ ಕಾಮಗಾರಿ ಭರದಿಂದ ಸಾಗಿದೆ. “ಗೇಬಿಯನ್‌ ವಾಲ್‌’ ಹೆಸರಿನ ಈ ತಡೆಗೋಡೆ ನಿರ್ಮಾಣ ಕಾಮಗಾರಿ ಯನ್ನು ಗುಜರಾತ್‌ ಮೂಲದ ಸಂಸ್ಥೆ ನಿರ್ವಹಿಸುತ್ತಿದೆ.

Advertisement

ಮಂಗಳೂರು ಜಂಕ್ಷನ್‌ (ಕಂಕನಾಡಿ) ರೈಲು ನಿಲ್ದಾಣದಿಂದ ಬೆಂಗಳೂರಿಗೆ, ಸುರತ್ಕಲ್‌ ಕಡೆಯಿಂದ ಬೆಂಗಳೂರಿಗೆ ಮತ್ತು ಮಂಗಳೂರು-ಮುಂಬಯಿ ಮಾರ್ಗ ಹೀಗೆ ತ್ರಿಕೋನ ಮಾದರಿಯಲ್ಲಿ ರೈಲು ಹಳಿಗಳು ಇಲ್ಲಿ ಹಾದು ಹೋಗು ತ್ತವೆ. ಮಂಗಳೂರು-ಮುಂಬಯಿ ಮಾರ್ಗ ಹೆಚ್ಚು ಸಂಚಾರ ಒತ್ತಡದಿಂದ ಕೂಡಿರುತ್ತದೆ. ಕೆಲವು ವರ್ಷಗಳಿಂದ ಮಳೆಗಾಲ ಸಂದರ್ಭ ಈ ಭಾಗದಲ್ಲಿ ಭೂ ಕುಸಿತ ಉಂಟಾಗುತ್ತಿವೆ.

ಗುಡ್ಡ ಜರಿದು ಇಳಿಜಾರಾದ ಭಾಗದಲ್ಲಿ “ಗೇಬಿಯನ್‌ ವಾಲ್‌’ ತಡೆಗೋಡೆ ಕಾಮ ಗಾರಿ ನಡೆಯುತ್ತಿದೆ. ಚೌಕ ಆಕಾರದ ಕಬ್ಬಿಣದ ಜಾಲರಿ ಮಾದರಿಯ ಬಾಕ್ಸ್‌ ನಲ್ಲಿ ಶಿಲೆಕಲ್ಲುಗಳನ್ನು ಒತ್ತೂತ್ತಾಗಿ ಇರಿಸಿ ತಡೆಗೋಡೆ ಕಟ್ಟಲಾಗುತ್ತಿದೆ. ಈಗಾಗಲೇ ಕೆಳ ಹಂತದಲ್ಲಿ 85 ಮೀ. ಉದ್ದದ ಹಾಗೂ 8 ಮೀ. ಎತ್ತರದ ಗೋಡೆ ಕಟ್ಟಲಾಗಿದೆ. ಇನ್ನೂ ಎರಡು ಹಂತದಲ್ಲಿ ಇಂತಹ ತಡೆಗೋಡೆ ನಿರ್ಮಾಣವಾಗಲಿದ್ದು, ಎರಡನೇ ಹಂತದಲ್ಲಿ 100 ಮೀ. ಮತ್ತು ಮೂರನೇ ಹಂತದಲ್ಲಿ 60 ಮೀ. ಗೋಡೆ ನಿರ್ಮಾಣವಾಗಲಿದೆ. ಹೀಗೆ ಮೂರು ಹಂತದ ಗೋಡೆ ನಿರ್ಮಾಣದಿಂದ ಗುಡ್ಡ ಮತ್ತಷ್ಟು ಕುಸಿಯುವುದನ್ನು ತಡೆಯಲು ಸಾಧ್ಯವಾಗಲಿದೆ.

ಗೂಡ್ಸ್‌ ರೈಲು ಸಂಚಾರ ಹೆಚ್ಚು
ಪ್ರಸ್ತುತ ತಡೆಗೋಡೆ ಕಾಮಗಾರಿ ನಡೆಯುತ್ತಿರುವ ಭಾಗದ ಪಕ್ಕದಲ್ಲಿ ಹಾದು ಹೋಗುವ ಹಳಿಯಲ್ಲಿ ಗೂಡ್ಸ್‌ ರೈಲುಗಳ ಸಂಚಾರ ಹೆಚ್ಚಾಗಿರುತ್ತದೆ. ಸುರತ್ಕಲ್‌, ಬೈಕಂಪಾಡಿ ಭಾಗದ ವಿವಿಧ ಕೈಗಾರಿಕೆಗಳಿಗೆ ಕಚ್ಚಾವಸ್ತು ಬೆಂಗಳೂರು ಭಾಗದಿಂದ ಪೂರೈಸುವುದು ಹಾಗೂ ಕೈಗಾರಿಕೆಗಳಿಂದ ಸಿದ್ಧವಸ್ತುಗಳನ್ನು ಬೆಂಗಳೂರು ಹಾಗೂ ಇತರ ಭಾಗಗಳಿಗೆ ರೈಲಿನಲ್ಲಿ ತೆಗೆದುಕೊಂಡು ಹೋಗಲು ಇದೇ ಮಾರ್ಗ ಬಳಸುತ್ತಾರೆ. ಮಾತ್ರವಲ್ಲದೆ ಕೊಂಕಣ ಮಾರ್ಗದಿಂದ ಬರುವ ರೈಲುಗಳೂ ಬೆಂಗಳೂರು ಮಾರ್ಗಕ್ಕೆ (ಜಂಕ್ಷನ್‌ ರೈಲು ನಿಲ್ದಾಣಕ್ಕೆ ಹೋಗದೆ) ನೇರವಾಗಿ ಈ ಹಳಿಯ ಮೂಲಕ ಸಾಗಬಹುದಾಗಿದೆ. ಒಂದು ದಿನ ರೈಲು ಸಂಚಾರದಲ್ಲಿ ವ್ಯತ್ಯಯವಾದರೆ, ಇಲಾಖೆಗೆ ಕೋಟ್ಯಂತರ ರೂಪಾಯಿ ನಷ್ಟಾಗುತ್ತದೆ. ಆದ್ದರಿಂದ ಸುರಕ್ಷಿತ ಸಂಚಾರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಏನಿದು ಗೇಬಿಯನ್‌ ವಾಲ್‌?
ಹೆದ್ದಾರಿ, ರೈಲು ಮಾರ್ಗದ ಮೇಲೆ ಗುಡ್ಡ ಕುಸಿತ ಉಂಟಾದರೆ ಆ ಭಾಗದಲ್ಲಿ ಮತ್ತೆ ಕುಸಿತವಾಗದಂತೆ ಈ “ಗೇಬಿಯನ್‌ ವಾಲ್‌’ಗಳನ್ನು ನಿರ್ಮಿಸುತ್ತಾರೆ. ಕಬ್ಬಿಣದ ಜಾಲರಿ ಮಾದರಿಯ ಬಾಕ್ಸ್‌ ಗಳಲ್ಲಿ ಶಿಲೆಕಲ್ಲುಗಳನ್ನು ತುಂಬಿಸಿ ಒಂದಮೇಲೆ ಒಂದರಂತೆ ಜೋಡಿಸಿ ಗೋಡೆ ನಿರ್ಮಿಸಲಾಗುತ್ತದೆ. ಗುಡ್ಡದ ಎತ್ತರಕ್ಕೆ ಅನುಗುಣವಾಗಿ ವಿವಿಧ ಹಂತಗಳಲ್ಲಿ ಕಟ್ಟಲಾಗುತ್ತದೆ. ಇವುಗಳ ಒಳಗಿನಿಂದ ನೀರು ಹರಿದು ಹೋಗಲು ಸಾಧ್ಯವಾಗುವುದರಿಂದ ಮತ್ತೆ ಜರಿದು ಬೀಳುವ ಸಾಧ್ಯತೆ ಕಡಿಮೆ.

Advertisement

ಜರಿದು ಬೀಳದಂತೆ ತಡೆಯಬಹುದು
ಮೂರು ಹಂತದಲ್ಲಿ “ಗೇಬಿಯನ್‌ ವಾಲ್‌’ ತಡೆಗೋಡೆ ನಿರ್ಮಾಣ ಮಾಡಲಾಗುವುದು. ಇದರಿಂದ ಗುಡ್ಡ ಮತ್ತಷ್ಟು ಜರಿದು ಬೀಳದಂತೆ ತಡೆಯಬಹುದಾಗಿದೆ. ಇನ್ನೆರಡು ತಿಂಗಳಲ್ಲಿ ಕಾಮಗಾರಿ ಮುಗಿಸಲು ಉದ್ದೇಶಿಸಲಾಗಿದೆ. ಮುಂದಿನ ಮಳೆಗಾಲದಲ್ಲಿ ರೈಲುಗಳ ಸುರಕ್ಷಿತ ಸುಗಮ ಸಂಚಾರದ ಉದ್ದೇಶದಿಂದ ಕಾಮಗಾರಿ ನಡೆಯುತ್ತಿದೆ.
– ರಾಜ್‌ ಪಟೇಲ್‌, ಕಾಮಗಾರಿ ಉಸ್ತುವಾರಿ ಪ್ರಮುಖರು

Advertisement

Udayavani is now on Telegram. Click here to join our channel and stay updated with the latest news.

Next