Advertisement

Paddy ಇಳುವರಿ ಕುಸಿತ? ತುಂಗಭದ್ರಾ,ಕಾವೇರಿ ತೀರದಲ್ಲಿ ನೀರಿಲ್ಲದೆ ಭತ್ತ ಬೆಳೆಗೆ ಸಂಕಷ್ಟ

12:50 AM Oct 02, 2023 | Team Udayavani |

ರಾಯಚೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ಭತ್ತದ ಇಳುವರಿ ಕಡಿಮೆಯಾಗಿದ್ದು, ಈ ಬಾರಿ ಬೇಸಗೆ ವೇಳೆಗೆ ಅಕ್ಕಿ ಬೆಲೆ ಕ್ವಿಂಟಾಲ್‌ಗೆ ಏಳು ಸಾವಿರ ರೂ. ತಲುಪುವ ಸಾಧ್ಯತೆ ಇದೆ.

Advertisement

ಕರ್ನಾಟಕದ ಕೃಷ್ಣಾ, ತುಂಗಭದ್ರಾ, ಕಾವೇರಿ ತೀರ ವ್ಯಾಪ್ತಿ ಮಾತ್ರವಲ್ಲದೆ ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲೂ ಭತ್ತದ ಬೆಳೆಗೆ ನೀರಿನ ಅಭಾವ ಎದುರಾಗಿದೆ. ರಾಜ್ಯದ ಬಹುತೇಕ ಜಲಾಶಯಗಳು ಜಲ ಅಭಾವಕ್ಕೆ ಗುರಿಯಾಗಿದ್ದು, 2ನೇ ಬೆಳೆಗೆ ನೀರು ಸಿಗುವುದಿಲ್ಲ ಎನ್ನುವುದು ಖಚಿತವಾಗಿದೆ. ದಕ್ಷಿಣ ಭಾರತದ ಈ ರಾಜ್ಯಗಳಲ್ಲಿ ಶೇ. 70ರಷ್ಟು ಭತ್ತದ ಉತ್ಪಾದನೆ ಕುಸಿಯಲಿದೆ ಎನ್ನಲಾಗುತ್ತಿದೆ. ಹೀಗಾಗಿ ಇಳುವರಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಲಿದ್ದು, ಪ್ರತೀ

ಕ್ವಿಂಟಾಲ್‌ಗೆ 5 ಸಾವಿರ ರೂ. ಇರುವ ಸೋನಾಮಸೂರಿ ಅಕ್ಕಿ 7 ಸಾವಿರ ರೂ.ಗಳಿಗೆ ತಲುಪಲಿದೆ ಎನ್ನುತ್ತಾರೆ ವ್ಯಾಪಾರಸ್ಥರು.

ಜಿಲ್ಲೆಯ ತುಂಗಭದ್ರಾ ಮತ್ತು ನಾರಾಯಣಪುರ ಜಲಾಶಯ ವ್ಯಾಪ್ತಿಯ ಜಲಾನಯನ ಭಾಗದಲ್ಲಿ ಒಂದನೇ ಬೆಳೆಗೆ ಸಮರ್ಪಕ ನೀರು ಸಿಗದ ಸ್ಥಿತಿ ಇದೆ. ಈಗ ಕಾಲುವೆಗಳಿಗೆ ನಿತ್ಯ 4,100 ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ. ಆದರೆ ಈ ಪ್ರಮಾಣದಲ್ಲಿ ನೀರು ಹರಿಸಿದರೆ ನ. 20ರ ವೇಳೆಗೆ ನೀರು ಖಾಲಿಯಾಗಲಿದೆ.

ಮೊದಲನೇ ಬೆಳೆಯಲ್ಲೇ ಇಳುವರಿ ಕುಂಠಿತಗೊಂಡಿದ್ದು, 2ನೇ ಬೆಳೆಗೆ ನೀರಿನ ಅಲಭ್ಯತೆ ಇರುವುದರಿಂದ ಇಳುವರಿ ಮತ್ತಷ್ಟು ಕಡಿಮೆಯಾಗುವ ಅಪಾಯವಿದೆ. ಕೃಷ್ಣಾ ನದಿ ವ್ಯಾಪ್ತಿಯಲ್ಲಿ ನಾರಾಯಣಪುರ ಮತ್ತು ಜುರಾಲಾ ಜಲಾಶಯ ಅವಲಂಬಿತ ರೈತರಿಗೆ ಲಭ್ಯವಾದಷ್ಟು ನೀರು ಮುಂದಿನ ಭಾಗದ ರೈತರಿಗೆ ಲಭಿಸಿಲ್ಲ. ತೆಲಂಗಾಣದ ನಾಗಾರ್ಜುನ ಸಾಗರ ಜಲಾಶಯದಲ್ಲೂ ಸಂಗ್ರಹ ಕಡಿಮೆಯಾಗಿದೆ.

Advertisement

ಇದರಿಂದ ಆಂಧ್ರದಲ್ಲೂ ಭತ್ತದ ಬೆಳೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದು ಖಚಿತವಾಗಿದೆ. ಕಾವೇರಿ ನೀರು ಹಂಚಿಕೆ ವಿವಾದ ನಡೆಯು ತ್ತಿದ್ದು, ತಮಿಳುನಾಡಿನಲ್ಲೂ ಕೃಷಿಗೆ ನೀರಿನ ಅಭಾವ ಎದುರಾಗಿದೆ.

ಟಿಬಿ ಡ್ಯಾಂ ವ್ಯಾಪ್ತಿಯ 6 ಲಕ್ಷ ಎಕರೆಗೆ ಬರ
ತುಂಗಭದ್ರಾ ಜಲಾಶಯವನ್ನು ಅವಲಂಬಿಸಿ ಕರ್ನಾಟಕದ ಆರು ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ. ಆಂಧ್ರ, ಕರ್ನಾಟಕ, ತೆಲಂಗಾಣ ಸೇರಿ 16.37 ಲಕ್ಷ ಎಕರೆಯಷ್ಟು ಕೃಷಿ ಭೂಮಿ ಈ ಜಲಾಶಯವನ್ನು ಅವಲಂಬಿಸಿದೆ. ಈ ವ್ಯಾಪ್ತಿಯ ನಾಲ್ಕು ಪ್ರಮುಖ ಕಾಲುವೆಗಳಿಗೂ ನೀರಿನ ಕೊರತೆ ಖಚಿತವಾಗಿದೆ.

12ರಿಂದ 13 ಲಕ್ಷ ಟನ್‌ ಕೊರತೆ?
ರಾಜ್ಯದಲ್ಲಿ ಪ್ರತೀ ವರ್ಷ ಅಂದಾಜು 60ರಿಂದ 70 ಲಕ್ಷ ಟನ್‌ ಭತ್ತ ಬೆಳೆಯಲಾಗುತ್ತದೆ. ಇದರಲ್ಲಿ ಶೇ. 50ರಷ್ಟು ಭತ್ತ ತುಂಗಭದ್ರಾ ಜಲಾಶಯ ವ್ಯಾಪ್ತಿ ಹಾಗೂ ನಾರಾಯಣಪುರ ಎಡದಂಡೆ ಕಾಲುವೆ ವ್ಯಾಪ್ತಿಯ ಜಿಲ್ಲೆಗಳಲ್ಲಿ ಬೆಳೆಯುತ್ತದೆ. ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಒಂದು ಬೆಳೆಯಲ್ಲಿ ಕನಿಷ್ಠ 12ರಿಂದ 13 ಲಕ್ಷ ಟನ್‌ ಭತ್ತ ಬೆಳೆಯಲಾಗುತ್ತದೆ. ಆದರೆ ಈ ಬಾರಿ 2ನೇ ಬೆಳೆಗೆ ನೀರು ಅಲಭ್ಯವಾಗಿ ಹೆಚ್ಚು ಕಡಿಮೆ ಇಷ್ಟು ಪ್ರಮಾಣದ ಭತ್ತದ ಉತ್ಪಾದನೆ ಕೊರತೆ ಎದುರಾಗುವ ಸಾಧ್ಯತೆಗಳಿವೆ.

ಸೋನಾಮಸೂರಿ,ಆರ್‌ಎನ್‌ಆರ್‌ ಬೆಲೆ ಏರಿಕೆ?
ಹೆಚ್ಚು ಬಳಕೆಯಾಗುವ ಸೋನಾ ಮಸೂರಿ, ಆರ್‌ಎನ್‌ಆರ್‌ ಭತ್ತ ಬೆಳೆಯುವುದು ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ. ಇಲ್ಲಿನಷ್ಟು ಬೇರೆ ಯಾವುದೇ ರಾಜ್ಯದಲ್ಲಿ ಬೆಳೆಯುವುದಿಲ್ಲ. ಆದರೆ ಈ ಬಾರಿ ಈ ಭಾಗದಲ್ಲಿಯೇ ಭತ್ತ ಉತ್ಪಾದನೆ ಕೊರತೆ ಎದುರಾಗಲಿದ್ದು, ಬೇಡಿಕೆ -ಬೆಲೆ ಸಹಜವಾಗಿ ಹೆಚ್ಚುವ ಸಾಧ್ಯತೆ ಇದೆ.

ಶೇ. 50ರಷ್ಟುಇಳುವರಿ ಕಡಿಮೆ
ರಾಜ್ಯದಲ್ಲಿ ಎಲ್ಲ ಹಂಗಾಮುಗಳಲ್ಲಿ 13.53 ಲಕ್ಷ ಹೆಕ್ಟೇರ್‌ಗಳಲ್ಲಿ ಭತ್ತ ಬಿತ್ತನೆ ಆಗುತ್ತದೆ. ಕಳೆದ ವರ್ಷ 43.5 ಲಕ್ಷ ಟನ್‌ ಉತ್ಪಾದನೆ ಆಗಿತ್ತು. ಈ ಮುಂಗಾರು ಹಂಗಾಮಿನಲ್ಲಿ 10.6 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಆಗಬೇಕಿತ್ತು. ಆದರೆ 9 ಲಕ್ಷ ಹೆಕ್ಟೇರ್‌ನಲ್ಲಿ ಮಾತ್ರ ಆಗಿದ್ದು, ಅಂದಾಜು 1.5 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಆಗಿಲ್ಲ. ಈ ವರ್ಷ ಜುಲೈ ತಿಂಗಳಿನಲ್ಲಿ ಆಗಿರುವ ಬಿತ್ತನೆಯಲ್ಲಿ ಶೇ. 50ರಷ್ಟು ಪ್ರದೇಶದಲ್ಲಿ ಇಳುವರಿ ಕಡಿಮೆ ಆಗಬಹುದು.

ಕಳೆದ ವರ್ಷ ಈ ವೇಳೆಗೆ ಟಿಬಿ ಡ್ಯಾಂನಲ್ಲಿ 105 ಟಿಎಂಸಿ ಅಡಿ ನೀರು ಲಭ್ಯವಿತ್ತು. ಆದರೆ ಈಗ ಕೇವಲ 56 ಟಿಎಂಸಿ ಅಡಿ ಇದೆ. ಕಾಲುವೆಗಳಿಗೆ ನಿತ್ಯ 3,900 ಕ್ಯೂಸೆಕ್‌ ಹರಿಸಿದರೆ ಮಾತ್ರ ಒಂದನೇ ಬೆಳೆಗೆ ನೀರು ಸರಿ ಹೋಗುತ್ತದೆ. ಈಗ 4,100 ಕ್ಯೂಸೆಕ್‌ ಹರಿಸುತ್ತಿದ್ದು, 6.35 ಟಿಎಂಸಿ ಅಡಿ ಕೊರತೆಯಾಗುವ ಸಾಧ್ಯತೆ ಇದೆ.
-ಬಸಪ್ಪ ಜಾನೇಕರ್‌, ಮುಖ್ಯ ಎಂಜಿನಿಯರ್‌, ತುಂಗಭದ್ರಾ ನಿರಾವರಿ ನಿಗಮ

ಮುಂಗಾರು ಮಳೆ ಸರಿಯಾಗಿ ಬಾರದ ಕಾರಣ ಜಲಾಶಯಗಳಲ್ಲಿ ನೀರಿನ ಅಲಭ್ಯತೆ ಹೆಚ್ಚಾಗಿ ಭತ್ತ ಬೆಳೆಯ ಮೇಲೆ ನೇರ ಪರಿಣಾಮ ಉಂಟಾಗಿದೆ. ಭತ್ತ ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆಗೆ ಬರದಿದ್ದರೆ ಸಹಜವಾಗಿಯೇ ಅಕ್ಕಿಯ ಬೆಲೆ ಹೆಚ್ಚಾಗುತ್ತದೆ. ನಮ್ಮ ನಿರೀಕ್ಷೆಯ ಪ್ರಕಾರ ಕ್ವಿಂಟಾಲ್‌ಗೆ 7 ಸಾವಿರ ರೂ. ತಲುಪಿದರೆ ಅಚ್ಚರಿ ಇಲ್ಲ.
-ಸಾವಿತ್ರಿ ಪರುಷೋತ್ತಮ್‌, ಕಾರ್ಯಾಧ್ಯಕ್ಷ, ಅಕ್ಕಿ ಗಿರಣಿ ಮಾಲಕರ ಸಂಘ

-ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next