ಯಳಂದೂರು: ತಾಲೂಕಿನಲ್ಲಿ ಭತ್ತ ಕಟಾವು ಕಾರ್ಯವು ಆರಂಭವಾಗುತ್ತಿದೆ. ಈ ಬಾರಿ ಉತ್ತಮ ಮಳೆ ಹಾಗೂ ಕಬಿನಿ ಕಾಲುವೆಯಲ್ಲಿ ನೀರು ಹರಿದಿರುವುದರಿಂದ ಬಂಪರ್ ಬೆಳೆಯೂ ಬಂದಿದೆ. ಭತ್ತಕ್ಕೆ ಬೆಂಬಲ ಬೆಲೆ ನೀಡುವ ಉದ್ದೇಶದಿಂದ ಖರೀದಿ ಕೇಂದ್ರ ತೆರೆಯಬೇಕೆಂಬ ನಿಯಮವಿದೆ. ಆದರೆ ರೈತರಿಗೆ ಅನುಕೂಲವನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರವು ತಕ್ಷಣ ಮುಂದಾಗಬೇಕಾಗಿದೆ.
3500 ಹೆಕ್ಟೇರ್‌ನಲ್ಲಿ ಭತ್ತ: ತಾಲೂಕಿನಲ್ಲಿ 3500 ಹೆಕ್ಟೇರ್ ಪ್ರದೇಶದಲ್ಲಿ ರೈತರು ಭತ್ತವನ್ನು ಬೆಳೆದಿದ್ದಾರೆ. ಈಗಾಗಲೇ ಭತ್ತ ಹಣ್ಣಾಗಿದ್ದು ಕಟಾವಿಗೆ ಬಂದಿದೆ. ಇಲ್ಲಿನ ರೈತರು ಈ ಬಾರಿ ಐಆರ್-64, ಬಿಪಿಟಿ, ಎಂಟಿಯು-1010, ಜಯ ಭತ್ತದ ತಳಿಗಳನ್ನು ಬೆಳೆದಿದ್ದಾರೆ. ಅದರಲ್ಲೂ ಐಆರ್-64 ತಳಿ ಹೆಚ್ಚಾಗಿ ಬೆಳೆದಿದ್ದು ಹಾಗೂ ಮುಸುಕಿನ ಜೋಳವನ್ನು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ, ರಾಗಿಯನ್ನು 150 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದ್ದು ಈಗಾಗಲೇ ಇದರ ಕಟಾವು ಕಾರ್ಯ ಪ್ರಾರಂಭವಾಗಿದೆ.
ತಾಲೂಕು ಮಟ್ಟದಲ್ಲಿ ಖರೀದಿ ಕೇಂದ್ರ ತೆರೆಯಬೇಕು: ಸರ್ಕಾರವು ಭತ್ತಕ್ಕೆ ಬೆಂಬಲ ಬೆಲೆಯನ್ನು ನಿಗದಿ ಮಾಡಿ ಖರೀದಿ ಕೇಂದ್ರಗಳನ್ನು ತೆರೆಯಬೇಕು. ತಾಲೂಕು ಮಟ್ಟದಲ್ಲಿ ಖರೀದಿ ಕೇಂದ್ರವನ್ನು ಆರಂಭಿಸಬೇಕಿದೆ. ಆದರೆ ಈ ಕಾರ್ಯ ಇನ್ನೂ ತಾಲೂಕಿನಲ್ಲಿ ಆಗಿಲ್ಲ.
ಯಳಂದೂರಿನಲ್ಲಿ ಖರೀದಿ ಕೇಂದ್ರ ಬೇಕು: ಕಳೆದ ವರ್ಷ ಭತ್ತದ ಖರೀದಿ ಕೇಂದ್ರವನ್ನು ಸಮೀಪದ ಸಂತೆಮರಹಳ್ಳಿಯ ಎಪಿಎಂಸಿ ಕೇಂದ್ರದಲ್ಲಿ ಖರೀದಿ ಕೇಂದ್ರ ತೆರೆದಿತ್ತು. ಇದರಿಂದ ರೈತರಿಗೆ ತೀವ್ರ ತೊಂದರೆಯಾಗಿತ್ತು. ಇದಕ್ಕೆ ವಿರೋಧವೂ ವ್ಯಕ್ತವಾಗಿತ್ತು. ಯಳಂದೂರು ತಾಲೂಕಿನಲ್ಲಿ ಹೆಚ್ಚು ಭತ್ತ ಬೆಳೆಯುವ ಪ್ರದೇಶವನ್ನು ಬಿಟ್ಟು ದೂರದ ಸಂತೆಮರಹಳ್ಳಿ ಕ್ಷೇತ್ರದಲ್ಲಿ ತೆರೆದಿತ್ತು ಪ್ರತಿಭಟನೆಗೂ ಕಾರಣವಾಗಿತ್ತು.
ಇಲ್ಲಿಗೆ ಸಾಗಣೆ ವೆಚ್ಚವೂ ಅಧಿಕವಾಗುತ್ತದೆ. ಜೊತೆಗೆ ಹೆಚ್ಚಿನ ಪರಿಶ್ರಮವೂ ಇರುತ್ತದೆ ಎಂಬ ಕಾರಣವೊಡ್ಡಿ ಹೆಚ್ಚಿನ ರೈತರು ಭತ್ತವನ್ನು ಗದ್ದೆಗಳಲ್ಲಿ ಮಧ್ಯವರ್ತಿಗಳಿಗೆ ಮಾರಾಟ ಮಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿ ಹೀಗೆ ಆಗಬಾರದು ಖರೀದಿ ಕೇಂದ್ರವನ್ನು ಯಳಂದೂರು ಪಟ್ಟಣದಲ್ಲೇ ತೆರೆಯಬೇಕು ಎಂಬುದು ಇಲ್ಲಿನ ರೈತ ಮುಖಂಡ ಮಹಾದೇವಸ್ವಾಮಿ, ಸಿದ್ದಲಿಂಗಸ್ವಾಮಿ ಹಾಗೂ ಇತರರ ಆಗ್ರಹವಾಗಿದೆ.
ತಾಲೂಕಿನಲ್ಲಿ ಡಿಸೆಂಬರ್ ತಿಂಗಳಲ್ಲಿ ಕಟಾವು ಕಾರ್ಯ ಪ್ರಾರಂಭವಾಗುತ್ತಿದೆ. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖರೀದಿ ಕೇಂದ್ರ ಹಾಗೂ ಬೆಂಬಲ ಬೆಲೆ ನೀಡುವ ನಿಟ್ಟಿನಲ್ಲಿ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ. ಸರ್ಕಾರದ ಆದೇಶಕ್ಕಾಗಿ ಕಾಯುತ್ತಿದ್ದು, ಆದೇಶ ಬಂದ ತಕ್ಷಣ ಖರೀದಿ ಕೇಂದ್ರ ತೆರೆಯಲಾಗುವುದು.
-ವೆಂಕಟರಂಗಶೆಟ್ಟಿ, ಕೃಷಿ ಅಧಿಕಾರಿ, ಯಳಂದೂರು
* ಫೈರೋಜ್ ಖಾನ್