Advertisement

ಬರಿದಾಗುತ್ತಿದೆ ಕರಾವಳಿಯ ಭತ್ತದ ಕಣಜ!

09:42 AM Jun 08, 2019 | keerthan |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಭತ್ತ ಬೆಳೆ ಒಟ್ಟು 22 ಸಾವಿರ ಹೆಕ್ಟೇರ್‌ ಪ್ರದೇಶ ಕಡಿಮೆಯಾಗಿದ್ದು, ಭತ್ತದ ಬೆಳೆಗೆ ಸರಕಾರದ ಸೌಲಭ್ಯ, ಸಹಾಯ ಧನ ಕಡಿತಗೊಳ್ಳುವ ಸಾಧ್ಯತೆ ಇದೆ.

Advertisement

ಈ ಬಾರಿ ದ.ಕ. ಜಿಲ್ಲೆ ಯಲ್ಲಿ 15,900 ಹಾಗೂ ಉಡುಪಿ ಜಿಲ್ಲೆಯಲ್ಲಿ 36 ಸಾವಿರ ಹೆಕ್ಟೇರ್‌ ಸೇರಿ ದಂತೆ ಒಟ್ಟು 51,900 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲು ಯೋಜಿಸಲಾಗಿದೆ. ಕಳೆದ ವರ್ಷ ದ.ಕ.ದಲ್ಲಿ 28 ಸಾವಿರ ಹೆ. ಹಾಗೂ ಉಡುಪಿ ಜಿಲ್ಲೆಯಲ್ಲಿ 44 ಸಾವಿರ ಹೆ. ಸೇರಿ ಒಟ್ಟು 72 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು. 8 ವರ್ಷಗಳಲ್ಲಿ ಉಭಯ ಜಿಲ್ಲೆಗಳಲ್ಲಿ ಒಟ್ಟು 34 ಸಾವಿರ ಹೆಕ್ಟೇರ್‌ ಕಡಿಮೆಯಾಗಿದೆ.

ಆರ್‌ಟಿಸಿಯಲ್ಲಿ ಮಾತ್ರ!
2018ರಲ್ಲಿ ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳನ್ನು ಒಳಗೊಂಡು ನಡೆಸಿದ ಸಮೀಕ್ಷೆ ದ.ಕ. ದಲ್ಲಿ 10,900 ಹಾಗೂ ಉಡುಪಿ ಜಿಲ್ಲೆಯಲ್ಲಿ 36 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದೆ ಎಂದಿತ್ತು. ರೈತರು ಪರ್ಯಾಯ ಬೆಳೆಗಳತ್ತ ಹೊರಳಿದರೂ ಆರ್‌ಟಿಸಿಯಲ್ಲಿ ಬದಲಾಗಿರಲಿಲ್ಲ. ಆದರೆ ಕಳೆದ ವರ್ಷ ರೈತರ ಕೃಷಿ ಪ್ರದೇಶಗಳಿಗೆ ತೆರಳಿ ಕ್ಷೇತ್ರ ವಾರು ಬೆಳೆ ಸಮೀಕ್ಷೆ ನಡೆಸಲಾಗಿತ್ತು. ಈ ಸಂದರ್ಭ ನಿಜಾಂಶ ಬೆಳಕಿಗೆ ಬಂದಿತ್ತು.

ದ.ಕ. ಜಿಲ್ಲೆಯ ಬೆಳೆ ಸಮೀಕ್ಷೆಯ ಮತ್ತು ಕಳೆದ 5 ವರ್ಷಗಳ ಭತ್ತದ ಬೆಳೆಯ ಅಂಕಿ-ಅಂಶಗಳನ್ನು ಕ್ರೋಢೀ ಕರಿಸಿ ಕೃಷಿ ಇಲಾಖೆಯು 2019-20ನೇ ಸಾಲಿಗೆ ತಾಲೂಕುವಾರು ಭತ್ತದ ಬೆಳೆ ಗುರಿ ನಿಗದಿಪಡಿಸಿದೆ. ಮಂಗಳೂರು ತಾಲೂಕಿನಲ್ಲಿ 6,700 ಹೆ. (2010- 11ರಲ್ಲಿ 12,100 ಹೆ.), ಬಂಟ್ವಾಳದಲ್ಲಿ 5,000 (9,500 ಹೆ.), ಬೆಳ್ತಂಗಡಿಯಲ್ಲಿ 3,000 ಹೆ. (8,500 ಹೆ.) ಪುತ್ತೂರಿನಲ್ಲಿ 900 (2,500 ಹೆ.), ಸುಳ್ಯದಲ್ಲಿ 300 ಹೆ. (500 ಹೆ.) ಪ್ರದೇಶ ಒಳಗೊಂಡಿದೆ.
ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಉಡುಪಿ ತಾಲೂಕಿನಲ್ಲಿ 15,500 ಹೆ., ಕುಂದಾಪುರದಲ್ಲಿ 14,000 ಹಾಗೂ ಕಾರ್ಕಳ ತಾಲೂಕಿನಲ್ಲಿ 6,500 ಹೆ. ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತಿದೆ.

ಮಳೆ ವಿಳಂಬ: ಕೃಷಿಗೆ ಹಿನ್ನಡೆ
ಮುಂಗಾರುಪೂರ್ವ ಮಳೆ ಕೊರತೆಯಿಂದ ಉಳುಮೆ, ನೇಜಿ ತಯಾರಿ ಇತ್ಯಾದಿ ಪೂರ್ವ ತಯಾರಿ ಮಾಡಲಾಗುತ್ತಿತ್ತು. ಆದರೆ ಇದಕ್ಕೆ ಹಿನ್ನಡೆಯಾಗಿದ್ದು ಮುಂಗಾರಿಗೆ ಕಾಯುವಂತಾಗಿದ್ದು ಬೆಳೆ ಮೇಲೆ ಪರಿಣಾಮ ಬೀರಲಿದೆ.

Advertisement

ಎಂಒ-4 ಕೊರತೆ ಇಲ್ಲ
ಮುಂಗಾರು ಹಂಗಾಮಿನಲ್ಲಿ ಹೆಚ್ಚು ಬಳಕೆಯಾಗುವ ಎಂಒ-4 ಭತ್ತದ ಬೀಜ ದಾಸ್ತಾನಿದೆ. ಕಳೆದ ಬಾರಿ ಇದರ ಕೊರತೆಯಿತ್ತು. ದ.ಕ.ದಲ್ಲಿ 437 ಕ್ವಿಂಟಾಲ್‌ ಎಂಒ-4, ಜಯ 27.5 ಕ್ವಿಂ. ಸೇರಿದಂತೆ ಒಟ್ಟು 600 ಕ್ವಿಂ. ಭತ್ತದ ಬೀಜ ದಾಸ್ತಾನಿದ್ದು 200 ಕ್ವಿ. ರೈತರಿಗೆ ವಿತರಿಸಲಾಗಿದೆ. ರಸಗೊಬ್ಬರವೂ ಸಾಕಷ್ಟಿದೆ.ಉಡುಪಿ ಜಿಲ್ಲೆಗೆ 2,065 ಕ್ವಿಂ. ಎಂಒ-4 ಬಂದಿದ್ದು ಇದರಲ್ಲಿ 1,441 ಕ್ವಿಂಟಾಲ್‌ ವಿತರಣೆಯಾಗಿದೆ. 20 ಕ್ವಿಂ. ಜ್ಯೋತಿ ತಳಿಯಲ್ಲಿ 7.25 ಕ್ವಿಂ. ರೈತರಿಗೆ ವಿತರಿಸಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಸಮೀಕ್ಷೆ ಪ್ರಕಾರ ದ.ಕ. ಜಿಲ್ಲೆಯಲ್ಲಿ ಭತ್ತ ಕೃಷಿ ಪ್ರದೇಶದಲ್ಲಿ ಇಳಿಕೆಯಾಗಿದೆ. ಕೃಷಿ ಇಲಾಖೆ 2019-20ನೇ ಸಾಲಿಗೆ ಜಿಲ್ಲೆಯಲ್ಲಿ ಕಳೆದ 5 ವರ್ಷಗಳ ಭತ್ತ ಬೆಳೆ ಅಂಕಿ- ಅಂಶ ಆಧರಿಸಿ 15,900 ಹೆಕ್ಟೇರ್‌ ಪ್ರದೇಶದ ಗುರಿ ನಿಗದಿಪಡಿಸಿದೆ.
ಡಾ| ಸೀತಾ, ಜಂಟಿ ಕೃಷಿ ನಿರ್ದೇಶಕರು ದ.ಕ.ಜಿಲ್ಲೆ

ಉಡುಪಿ ಜಿಲ್ಲೆಯಲ್ಲಿ ಕಳೆದ ವರ್ಷದ ಬೆಳೆ ಸಮೀಕ್ಷೆಯಲ್ಲಿ 36ಸಾವಿರ ಹೆ. ಭತ್ತದ ಬೆಳೆ ಪ್ರದೇಶ ಗುರುತಿಸಲಾಗಿತ್ತು. ಇದನ್ನು ಆಧರಿಸಿ ಈ ಸಾಲಿನ ಭತ್ತ ಬೆಳೆ ಗುರಿ ಇರಿಸಿಕೊಳ್ಳಲಾಗಿದೆ.
ಡಾ| ಎಚ್‌. ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು ಉಡುಪಿ ಜಿಲ್ಲೆ

ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next