ವರದಿ: ಕೆ.ನಿಂಗಜ್ಜ
ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಬೇಸಿಗೆ ಹಂಗಾಮಿನ ಭತ್ತದ ಬೆಳೆ ಬಂಪರ್ ಇಳುವರಿ ಬಂದಿದ್ದು, ಬೆಲೆ ಕುಸಿತದ ಪರಿಣಾಮ ರೈತರು ಕಂಗಾಲಾಗಿದ್ದಾರೆ. ಎರಡ್ಮೂರು ವರ್ಷಗಳಿಂದ ಭತ್ತದ ಬೆಳೆಗೆ ಹಲವು ರೋಗ ಬಂದಿದ್ದರಿಂದ ಇಳುವರಿಯೂ ಕಡಿಮೆ ಇತ್ತು. ಈ ಬಾರಿ ಭತ್ತವನ್ನು ಮುಂಗಡವಾಗಿ ನಾಟಿ ಮಾಡಿದ್ದರಿಂದ ರೈತರು ಉತ್ತಮ ಇಳುವರಿ ಪಡೆದಿದ್ದಾರೆ.
ಗಂಗಾವತಿ ಸೋನಾ, ಕಾವೇರಿ ಸೋನಾ, ಆರ್‌ಎನ್‌ಆರ್ ಹೀಗೆ ಹಲವು ತಳಿಯ ಭತ್ತ ನಾಟಿ ಮಾಡಿದ್ದ ರೈತರು ಈ ಬಾರಿ ಎಕರೆಗೆ 35-50 ಕ್ವಿಂಟಲ್ (75 ಕೆಜಿ ತೂಕ) ಭತ್ತ ಬೆಳೆದಿದ್ದಾರೆ. ಆರಂಭದಲ್ಲಿ ಭತ್ತಕ್ಕೆ ಕಂದು ಜಿಗಿ ರೋಗ, ತೆನೆ ಉದ್ದಗೆ ಬರುವ ರೋಗ ಸೇರಿ ಹಲವು ರೋಗಗಳು ಬಂದು ರೈತರು ಆತಂಕಗೊಂಡಿದ್ದರು. ಆದರೆ ರೈತರು ಕೃಷಿ ಇಲಾಖೆ, ಕೃಷಿ ವಿಜ್ಞಾನ ಸಂಶೋಧನಾ ಕೇಂದ್ರದ ಅಧಿ ಕಾರಿಗಳು ಕೃಷಿ ವಿಜ್ಞಾನಿಗಳ ಸಲಹೆ ಮೇರೆಗೆ ಹಲವು ರೋಗ ತಡೆಯುವ ಕ್ರಿಮಿನಾಶಕ ಸಿಂಪರಣೆ ಮತ್ತು ನೀರು ಹರಿಸುವ ವಿಧಾನ ಬದಲಿಸಿದ್ದರಿಂದ ಉತ್ತಮ ಇಳುವರಿ ಬಂದಿದೆ. ಈಗಾಗಲೇ ಆನೆಗೊಂದಿ, ಬಸಾಪಟ್ಟಣ, ಹೇರೂರು, ಢಣಾಪೂರ ಸೇರಿ ಇತರೆ ಭಾಗದಲ್ಲಿ ಭತ್ತದ ಕಟಾವು ಕಾರ್ಯ ಭರದಿಂದ ನಡೆಯುತ್ತಿದೆ.
ತಡವಾಗಿ ನಾಟಿ ಮಾಡಿದ ಭತ್ತದ ಬೆಳೆ ಇನ್ನೂ 20 ದಿನಗಳ ನಂತರ ಕಟಾವಿಗೆ ಬರುತ್ತದೆ. ಸದ್ಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್(75 ಕೆಜಿ ತೂಕ) ಭತ್ತದ ಚೀಲಕ್ಕೆ 1290-1350 ರೂ.ಗಳಿದ್ದು ಭತ್ತ ಬೆಳೆಯಲು ಖರ್ಚು ಮಾಡಿದ ಹಣವೂ ವಾಪಸ್ ಬರಲ್ಲ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ಸೇರಿ ರಾಜ್ಯದ ವಿವಿಧೆಡೆಯಿಂದ 20 ಲಕ್ಷ ಟನ್ ಭತ್ತ ಖರೀದಿಸಿ ಸ್ಥಳೀಯವಾಗಿ ಮಿಲ್ಲಿಂಗ್ ಮಾಡಿಸಿ ಅಕ್ಕಿಯನ್ನು ಅನ್ನಭಾಗ್ಯ ಸೇರಿ ಸರಕಾರದ ಹಾಸ್ಟೆಲ್-ದಾಸೋಹ ಯೋಜನೆಗೆ ಪೂರೈಸಲು ಸರ್ಕಾರ ತೀರ್ಮಾನಿಸಿದೆ. ಈಗಾಗಲೇ ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲಾ ಧಿಕಾರಿಗಳು ಭತ್ತ ಖರೀದಿ ಕೇಂದ್ರ ಆರಂಭಿಸುವ ಪ್ರಕ್ರಿಯೆ ಆರಂಭ ಮಾಡಿದ್ದಾರೆ. ಭತ್ತ ಖರೀದಿ ಕೇಂದ್ರ ಬೇಗ ಆರಂಭವಾದರೆ ಅನುಕೂಲಸ್ಥ ರೈತರು ಭತ್ತ ಮಾರಲು ಸಾಧ್ಯವಾಗುತ್ತದೆ. ಸ್ವಾಭಾವಿಕವಾಗಿ ಮಾರುಕಟ್ಟೆಯಲ್ಲಿ ಸರಕಾರ ಭತ್ತ ಖರೀದಿ ಆರಂಭಿಸಿದರೆ ಇತರೆ ಭತ್ತ ಖರೀದಿದಾರರು ಸಹ ರೈತರಿಗೆ ಉತ್ತಮ ನೀಡಲು ಆರಂಭಿಸುತ್ತಾರೆ.