ಸಿರುಗುಪ್ಪ: ತಾಲೂಕಿನ ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ನದಿ, ಹಳ್ಳದ ನೀರಾವರಿಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದ ಭತ್ತದ ಬೆಳೆಯಲ್ಲಿ ಇಳುವರಿ ಕಡಿಮೆ ಬರುತ್ತಿದೆ.
ಪ್ರಸಕ್ತ ವರ್ಷ ಒಂದು ಎಕರೆ ಭತ್ತ ಬೆಳೆಯಲು 23 ರಿಂದ 30ಸಾವಿರ ರೂ. ಖರ್ಚು ಮಾಡಿದ್ದು, ಎಕರೆಗೆ 35 ರಿಂದ 40 ಚೀಲ ಇಳುವರಿ ಬರುತ್ತಿದ್ದು, ಸಾಲ ಮಾಡಿ ಭತ್ತ ಬೆಳೆದ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.
ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಹಾಗೂ ಆಗಸ್ಟ್‌ತಿಂಗಳಲ್ಲಿಯೇ ಜಲಾಶಯದಿಂದ ಕಾಲುವೆಗಳಿಗೆ ನೀರು ಹರಿಸಿದ್ದರಿಂದ ತಾಲೂಕಿನ ರೈತರು ಗಂಗಾ ಕಾವೇರಿ ಸೋನಾಮಸೂರಿ, ಕಾವೇರಿ ಸೋನ, ಎರ್ರಮಲ್ಲಿ, ಗಂಗಾವತಿ ಸೋನಾ ಮುಂತಾದ ವಿವಿಧ ತಳಿಯ ಭತ್ತ ಬೆಳೆದಿದ್ದಾರೆ. ಆದರೆ ಸತತವಾಗಿ ಸುರಿದ ಮಳೆ ಮತ್ತು ಭತ್ತದ ಬೆಳೆಯಲ್ಲಿ ಕಾಣಿಸಿಕೊಂಡ ಕಣೆರೋಗ ಸೇರಿದಂತೆ ವಿವಿಧ ರೋಗಗಳು ಕಾಣಿಸಿಕೊಂಡಿದ್ದವು. ಅಲ್ಲದೆ ಅತಿಯಾದ ರಸಗೊಬ್ಬರ, ಕ್ರಿಮಿನಾಶಕವನ್ನು ಗದ್ದೆಗಳಿಗೆ ಬಳಸಿದ್ದರಿಂದ ಖರ್ಚು ಹೆಚ್ಚಾಗಿದ್ದು, ಒಂದು ಎಕರೆ ಭತ್ತ ಬೆಳೆಯಲು 23 ರಿಂದ 30 ಸಾವಿರರೂ. ವೆಚ್ಚವಾಗಿದೆ. ಆದರೆ ಒಂದು ಎಕರೆಗೆ 35 ರಿಂದ 40 ಚೀಲ ಭತ್ತದ ಇಳುವರಿಬರುತ್ತಿದ್ದು, ರೈತ ಖರ್ಚು ಮಾಡಿದ ಹಣ ವಾಪಸ್ ಬರುತ್ತಿಲ್ಲ.
ಸತತವಾಗಿ ಸುರಿದ ಮಳೆಯಿಂದಾಗಿ ಭತ್ತದ ಬೆಳೆಯಲ್ಲಿ ಈ ಬಾರಿ ಕಣೆಹುಳು ರೋಗ, ಬಡ್ಡೆ ಕೊಳೆಯುವ ರೋಗ ಹೀಗೆ ಹಲವು ರೋಗಗಳು ಕಾಣಿಸಿಕೊಂಡ ಪರಿಣಾಮ ಭತ್ತವು ಟಿಸಿಲು ಒಡೆಯದಿರುವುದು ಇಳುವರಿ ಕಡಿಮೆಯಾಗಲು ಮುಖ್ಯಕಾರಣವಾಗಿದೆ. ರೋಗ ನಿಯಂತ್ರಿಸಲು ರೈತರು ದುಬಾರಿ ವೆಚ್ಚದ ಕ್ರಿಮಿನಾಶಕಗಳನ್ನು ಸಿಂಪಡಣೆ ಮಾಡಿ ಅಧಿಕ ಖರ್ಚು ಮಾಡಿದ್ದಾರೆ. ತಾಲೂಕಿನ ಭತ್ತದ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ಒಂದು ಎಕರೆಗೆ 40 ರಿಂದ 45 (75 ಕೆಜಿ) ಕ್ವಿಂಟಲ್ ಭತ್ತದ ಇಳುವರಿ ಬರುತ್ತಿತ್ತು. ಆದರೆ ಈ ಬಾರಿ 33 ರಿಂದ 40 ಕ್ವಿಂಟಲ್ ಇಳುವರಿ ಬರುತ್ತಿದ್ದು, ರೈತರು ತೀವ್ರ ನಷ್ಟ ಅನುಭವಿಸುವಂತಾಗಿದೆ.
ಕೇಂದ್ರ ಸರ್ಕಾರವು ಭತ್ತದ ರಫ್ತು ನಿಷೇಧ ಮಾಡಿರುವುದರಿಂದ ಕಳೆದ ವರ್ಷದಿಂದ ಭತ್ತಕ್ಕೆ ಹೆಚ್ಚಿನ ಬೆಲೆ ದೊರೆಯುತ್ತಿಲ್ಲ. ಇದರಿಂದಾಗಿ ವ್ಯಾಪಾರಿಗಳು ಭತ್ತಖರೀದಿಸಲು ಮುಂದೆ ಬರುತ್ತಿಲ್ಲ.ಸದ್ಯ ಮಾರುಕಟ್ಟೆಯಲ್ಲಿ ಆರ್.ಎನ್. ಆರ್. ಕ್ವಿಂಟಲ್‌ಗೆ ರೂ.1750, ಸೋನಾ ರೂ.1450-1500, ನೆಲ್ಲೂರು ಸೋನಾ ರೂ.1280-1300ಕ್ಕೆ ಬೆಲೆ ದೊರೆಯುತ್ತಿದೆ. ಕಳೆದ ವರ್ಷ ಆರ್.ಎನ್.ಆರ್. ಭತ್ತಕ್ಕೆ ರೂ.1800, ಸೋನಾ ಮಸೂರಿ ರೂ.1850, ನೆಲ್ಲೂರುಸೋನಾ ರೂ.1600, ಬೆಲೆಯಲ್ಲಿಮಾರಾಟವಾಗಿತ್ತು. ರೈತರ ಹೊಲಗಳಿಗೆ ತೆರಳಿ ವ್ಯಾಪಾರಿಗಳು ಭತ್ತ ಖರೀದಿ ಮಾಡಿದ್ದರು. ಆದರೆ ಈ ವರ್ಷ ತಾಲೂಕಿನಲ್ಲಿ ಶೇ.30ರಷ್ಟು
ರೈತರು ಭತ್ತಕೊಯ್ಲು ಮಾಡಿದ್ದು, ಆರ್. ಎನ್.ಆರ್. ಕ್ವಿಂಟಲ್‌ಗೆ ರೂ.1750, ಸೋನಾ ರೂ.1450-1500, ನೆಲ್ಲೂರು ಸೋನಾ ರೂ.1280-1300ಕ್ಕೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಒಂದೆಡೆ ಇಳುವರಿ ಕಡಿಮೆಬೆಲೆಯಲ್ಲಿಯೂ ಕುಸಿತ ಮಾರುಕಟ್ಟೆಯಲ್ಲಿ ಭತ್ತಕ್ಕೆ ಬೇಡಿಕೆ ಇಲ್ಲದಿರುವುದು ತಾಲೂಕಿನ ಭತ್ತ ಬೆಳೆದ ರೈತರನ್ನು ಕಂಗೆಡಿಸಿದೆ.
ಕೇಂದ್ರ ಸರ್ಕಾರ ಭತ್ತ ರಫ್ತು ಮಾಡುವುದನ್ನು ನಿಷೇಧಿ ಸಿರುವುದರಿಂದ ಭತ್ತದ ಬೆಲೆ ಕುಸಿಯಲು ಪ್ರಮುಖ ಕಾರಣವಾಗಿದೆ. ರೈತರು ಬೆಳೆದ ಭತ್ತವನ್ನು ಸರ್ಕಾರ ವೈಜ್ಞಾನಿಕ ಬೆಲೆ ನೀಡಿ ಖರೀದಿಸಿದರೆ ಮಾತ್ರ ರೈತರಿಗೆ ಅನುಕೂಲವಾಗಲಿದೆ.
-ವಾ.ಹುಲುಗಯ್ಯ, ಅಧ್ಯಕ್ಷರು, ರೈತ ಸಂಘ, ಹಸಿರು ಸೇನೆ.(ನಂಜುಂಡಸ್ವಾಮಿ ಬಣ)
ಕಳೆದ ವರ್ಷಕ್ಕಿಂತ ಈ ವರ್ಷ ಕ್ವಿಂಟಲ್ ಭತ್ತಕ್ಕೆ 250-300 ರೂ. ಬೆಲೆ ಕಡಿಮೆಯಾಗಿದ್ದು, ಒಂದು ಕಡೆಯಾದರೆ ಇಳುವರಿಯಲ್ಲಿಯೂ ಕಡಿಮೆಯಾಗಿರುವುದು ಭತ್ತ ಬೆಳೆದ ರೈತನು ನಷ್ಟ ಅನುಭವಿಸಬೇಕಾಗಿದೆ.
-ವೈ.ಕೃಷ್ಣಾರೆಡ್ಡಿ, ಕರೂರು ರೈತ
ಆರ್.ಬಸವರೆಡ್ಡಿ ಕರೂರು