ದೇವದುರ್ಗ: ನಾರಾಯಣಪುರ ಬಲದಂಡೆ ಕಾಲುವೆಯಿಂದ ನೀರಾವರಿ ಸೌಲಭ್ಯ ಪಡೆದು ಬೇಸಿಗೆ ಅವಧಿ ಯಲ್ಲಿನ ಭತ್ತ ನಾಟಿ ಕಾರ್ಯ ಚುರುಕಾಗಿ ನಡೆದಿದೆ. ಆದರೆ ಬೆಳೆಗಳಿಗೆ ಸಂಪೂರ್ಣ ನೀರು ಸಿಗುವುದು ಮಾತ್ರ ಡೌಟ್. ಗಲಗ, ಜಾಲಹಳ್ಳಿ, ಗಬ್ಬೂರು ಸೇರಿದಂತೆ ಇತರೆ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಚುರುಕಾಗಿದೆ. ಬೇಸಿಗೆ ಅವ ಧಿಯಲ್ಲಿ ಭತ್ತ ಬೆಳೆಯಲು ನಾಟಿ ಕಾರ್ಯ ತುರುಸಿನಿಂದ ನಡೆದಿದೆ.
9,174 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗುತ್ತಿದೆ. ಮುಖ್ಯ ನಾಲೆ ಸೇರಿದಂತೆ ಕೆಲವು ವಿತರಣಾ ಕಾಲುವೆಗಳಿಗೂ ನೀರು ಹರಿಸಲು ವಾರಾಬಂದಿ ಮಾಡಿರುವುದರಿಂದ ಭತ್ತ ನಾಟಿ ಮಾಡಲಾಗುತ್ತಿದೆ. ನೀರಾವರಿ ಸಲಹಾ ಸಮಿತಿ ಮಾರ್ಚ್‌ವರೆಗೆ ನೀರು ಹರಿಸುವ ಸೂಚನೆ ನೀಡಿದ್ದು, ರೈತರು ಏ.15ರವರೆಗೆ ನೀರು ಹರಿಸಬೇಕೆಂಬ ಬೇಡಿಕೆ ಇದೆ. ನಾಟಿ ಕೆಲಸಕ್ಕಾಗಿ ಮುದ್ದೇಬಿಹಾಳ, ಕಕ್ಕೇರಿ, ಹುಣಸಗಿ ಸೇರಿದಂತೆ ಇತರೆ ಗ್ರಾಮಗಳಿಂದ ನೂರಾರು ಮಹಿಳೆಯರು
ಆಗಮಿಸುತ್ತಿದ್ದಾರೆ.
ಭತ್ತ ನಾಟಿ ಮಾಡಲು ಎಕರೆಗೆ 3-4 ಸಾವಿರವರೆಗೆ ಗುತ್ತಿಗೆ ನೀಡಲಾಗುತ್ತಿದೆ. ಗಲಗ, ಜಾಲಹಳ್ಳಿ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಭತ್ತ ನಾಟಿ ಕೆಲಸ ಜೋರಾಗಿದೆ. ರಾಜ್ಯ-ಕೇಂದ್ರ ಸರ್ಕಾರ ಭತ್ತ ಖರೀದಿ ಕೇಂದ್ರ ಬೆಂಬಲ ಬೆಲೆ ಘೋಷಿಸದ ಹಿನ್ನೆಲೆ ನೂರಾರು ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಯಿತು.
ಬೆಂಬಲ ಬೆಲೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆ ಉಂಟಾಗಿದ್ದು ಮತ್ತೆ ದಲ್ಲಾಳಿಗಳಿಗೆ ಭತ್ತ ಮಾರುವ ಅನಿವಾರ್ಯತೆ ಬಂದೊದಗಿತ್ತು. ತಾಲೂಕಿನಲ್ಲಿ ಭತ್ತ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ ರೈತರು ಪರದಾಡುವಂತಾಗಿದೆ. ಬಹುತೇಕ ರೈತರು ದಲ್ಲಾಳಿಗಳಿಗೆ ಈಗಾಗಲೇ ಉದ್ರಿಯಾಗಿ
ಮಾರಾಟ ಮಾಡಿದ್ದಾರೆ. ಶೇ.50 ರೈತರು ಉತ್ತಮ ದರವಿಲ್ಲದ ಕಾರಣ ಗದ್ದೆಯಲ್ಲಿಯೇ ಭತ್ತ ಸಂಗ್ರಹಿಸಿದ್ದಾರೆ. ರಾಜ್ಯ- ಕೇಂದ್ರ ಸರ್ಕಾರ ಭತ್ತ ಖರೀದಿ ಕೇಂದ್ರ ಆರಂಭಿಸಲು ಹಿಂದೇಟು ಹಾಕಿದ ಹಿನ್ನೆಲೆ ನೂರಾರು ರೈತರು ಮಾರಾಟ ಮಾಡಲು ದಲ್ಲಾಳಿಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಬಂದಿದೆ ಎನ್ನುತ್ತಾರೆ ರೈತರಾದ ಶಿವಪ್ಪ, ರಾಮಪ್ಪ.
ಪಟ್ಟಣ ಸೇರಿ ತಾಲೂಕಿನಾದ್ಯಂತ ಬೇಸಿಗೆ ಅವ ಧಿಯಲ್ಲಿ 9,174 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ.
ಡಾ| ಎಸ್. ಪ್ರಿಯಾಂಕ್,
ಕೃಷಿ ಸಹಾಯಕ ನಿರ್ದೇಶಕಿ