Advertisement

ಭತ್ತ ಬೆಳೆಗಾರರಿಗೀಗ ಗಜ ಆತಂಕ

05:36 PM Nov 20, 2018 | |

ಶಿವಮೊಗ್ಗ: ತಮಿಳುನಾಡಿನಲ್ಲಿ ಅಬ್ಬರಿಸುತ್ತಿರುವ ಗಜ ಚಂಡ ಮಾರುತ ತಮಿಳುನಾಡಿನಷ್ಟೇ ಅಲ್ಲದೇ ಶಿವಮೊಗ್ಗದಲ್ಲೂ ತನ್ನ ಆರ್ಭಟ ತೋರಿದೆ. ಜಿಲ್ಲೆಯ ಭತ್ತ ಮತ್ತು ಮೆಕ್ಕೆಜೋಳ ರೈತರಿಗೆ ಆತಂಕದ ಕಾರ್ಮೋಡ ಎದುರಾಗಿದೆ. ಜಿಲ್ಲೆಯಲ್ಲಿ ಸುಮಾರು 1.05 ಲಕ್ಷ ಹೆಕ್ಟೇರ್‌ನಲ್ಲಿ ಭತ್ತ ಬಿತ್ತನೆ ಮಾಡಲಾಗಿದ್ದು, 10 ದಿನಗಳಿಂದ ಕಟಾವು ಆರಂಭವಾಗಿದೆ. ಮೆಕ್ಕೆಜೋಳ ಕಟಾವು ಬಹುತೇಕ ಮುಕ್ತಾಯವಾಗಿದ್ದು, ರೈತರು ಕಾಳು ಒಣಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಎರಡೂಮೂರು ವರ್ಷಗಳ ನಂತರ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭತ್ತ ಬೆಳೆಯಲಾಗಿದೆ. ಆದರೆ ಸೂಕ್ತ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ.

Advertisement

23ರವರೆಗೆ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನ. 23ರವರೆಗೆ ಮಳೆಯಾಗುವ ಸಾಧ್ಯತೆ ಇದ್ದು, ರೈತರು ಬೆಲೆ ಕುಸಿತದ ಆತಂಕ ಎದುರಿಸುತ್ತಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಮೋಡ ಕವಿದ ವಾತಾವರಣವಿದ್ದು ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಭತ್ತ ಒಣಗಲ್ಲ: ಭಾನುವಾರ ಬಂದ ಮಳೆಗೆ ರೈತರು ಕಟಾವು ಮಾಡಿದ ಭತ್ತವನ್ನು ಒಕ್ಕಲು ಕಣಕ್ಕೆ ತರಲಾಗದೇ ಗದ್ದೆಯಲ್ಲೇ
ಬಿಟ್ಟಿದ್ದರು. ಸೋಮವಾರ ಕೂಡ ಬಿಸಿಲು, ಮೋಡದ ಆಟ ಮುಂದುವರೆದಿದ್ದು, ಭತ್ತದ ಒಣಗುತ್ತಿಲ್ಲ. ಇದೇ ರೀತಿ ವಾತಾವರಣ ಶುಕ್ರವಾರದವರೆಗೂ ಇರುವುದರಿಂದ ಈಗಾಗಲೇ ಕಟಾವು ಮಾಡಿದ ರೈತರು ಏನು ಮಾಡಬೇಕೆಂದು ದಿಕ್ಕು ತೋಚದೆ ಆತಂಕಕ್ಕೆ  ಒಳಗಾಗಿದ್ದಾರೆ.

 ದರ ಮತ್ತಷ್ಟು ಕುಸಿತ ಭೀತಿ: ಜ್ಯೋತಿ ಭತ್ತಕ್ಕೆ 1300 ರಿಂದ 1400 ರೂ., ಸಣ್ಣ ಭತ್ತ 1400 ರಿಂದ 1500 ರೂ.ವರೆಗೆ ಮಾರಾಟವಾಗುತ್ತಿದೆ. ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಭತ್ತ ಮಾರಾಟವಾಗುತ್ತಿದೆ. ಭತ್ತದ ದರ ಎಷ್ಟೇ ಕುಸಿದರೂ ಅಕ್ಕಿ ಬೆಲೆ ಮಾತ್ರ ಕಡಿಮೆ ಆಗಿಲ್ಲ. ಮಧ್ಯವರ್ತಿಗಳು, ಗಿರಣಿ ಮಾಲೀಕರು ಮಾತ್ರ ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬುದು ರೈತರ ಆಕ್ರೋಶವಾಗಿದೆ.

ಕೇಂದ್ರ ಸರ್ಕಾರ ಘೋಷಿಸಿರುವ 1750 ರೂ.ಗಿಂತಲೂ ಕಡಿಮೆ ದರಕ್ಕೆ ಕಡಿಮೆ ದರಕ್ಕೆ ರಾಜ್ಯ ಸರಕಾರ ಭತ್ತ ಖರೀದಿಗೆ ಮುಂದಾಗಿದೆ. ಈಚೆಗೆ ಸಿಎಂ ಕುಮಾರಸ್ವಾಮಿ ಅವರು 1600 ರೂ.ಗೆ ಖರೀದಿಸುವುದಾಗಿ ಭರವಸೆ ನೀಡಿದ್ದರು. 

Advertisement

ನಂತರ 2 ಸಾವಿರ ರೂ.ಗೆ ಖರೀದಿಸುವುದಾಗಿ ತಿಳಿಸಿದ್ದಾರೆ. ಈವರೆಗೂ ಸರಕಾರದಿಂದ ಯಾವುದೇ ಆದೇಶ ಹೊರಬಿದ್ದಿಲ್ಲ.
ಸರಕಾರ ಎಷ್ಟು ಬೆಲೆಗೆ ಖರೀದಿ ಮಾಡುತ್ತದೆ ಎಂಬುದರ ಮೇಲೆ ಮಾರುಕಟ್ಟೆಯಲ್ಲಿ ದರ ಬದಲಾವಣೆಯಾಗುವ ಸಾಧ್ಯತೆ ಇದೆ.

ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next