ಶಿರಸಿ: ಮಹಾತ್ಮಾ ಗಾಂಧೀಜಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ಭತ್ತದ ನಾಟಿ, ಕೋಯ್ಲಿಗೆ ಅವಕಾಶ ಬಂದರೆ ಮಾತ್ರ ಭತ್ತದ ಬೇಸಾಯಕ್ಕೆ ನೆರವಾಗುತ್ತದೆ ಎಂದು ಪ್ರಗತಿಪರ ರೈತ, ಭತ್ತದ ತಳಿ ಸಂರಕ್ಷಕ ಬಂಟ್ವಾಳದ ಪರಮೇಶ್ವರ ಹೇಳಿದರು.
ಕದಂಬ ಮಾರ್ಕೇಟಿಂಗ್‌ನಲ್ಲಿ ಕೃಷಿ ವಿಜ್ಞಾನ ಕೇಂದ್ರ, ಕದಂಬ ಮಾರ್ಕೇಟಿಂಗ್, ಕೃಷಿ ಇಲಾಖೆಗಳ ಜಂಟಿ ಸಹಕಾರದಲ್ಲಿ ನಡೆದ ಭತ್ತದ ಬೇಸಾಯ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಭತ್ತದ ಬೇಸಾಯದಲ್ಲಿ ಕ್ರಿಮಿನಾಷಕ, ರಾಸಾಯನಿಕ ರಹಿತ ಕೆಲಸ ಮಾಡಬೇಕು. ಆ ಮೂಲಕ ಪ್ರಕೃತಿ ರಕ್ಷಣೆ ಕೂಡ ಆಗಲಿದೆ. ಭತ್ತಕ್ಕಿಂತ ಭತ್ತದ ಗದ್ದೆಗಳನ್ನು ಶಾಶ್ವತ ರಕ್ಷಣೆ ಮಾಡಿಕೊಳ್ಳಬೇಕು. ಗದ್ದೆಗೆ ಕೂಡ ಬೆಲೆ ಕೊಟ್ಟಿಕೊಳ್ಳಬೇಕು ಎಂದೂ ಆಗ್ರಹಿಸಿದರು.
ಕೃಷಿ ಇಲಾಖೆ ಉಪನಿರ್ದೇಶಕ ನಟರಾಜ್, ಸಾಂಪ್ರದಾಯಿಕ ಭತ್ತದ ತಳಿಗಳಲ್ಲಿ ಇಳುವರಿ ಕಡಿಮೆ ಆಗಿದ್ದರಿಂದ ಸಾಂಪ್ರದಾಯಿಕ ತಳಿಗಳು ದೂರ ಹೋಗಿವೆ. ಸಾಂಪ್ರದಾಯಿಕ ತಳಿಗಳ ಔಷಧೀಯ ಮಹತ್ವ, ವಿಶೇಷತೆ ತಿಳಿಸಿ ಮಾರುಕಟ್ಟೆ ಒದಗಿಸಿದರೆ ಉತ್ತಮ ದರದಲ್ಲಿ ಮಾರಾಟ ಆಗುತ್ತದೆ. ನಮ್ಮಲ್ಲಿ ಇರುವ 140 ಸಾಂಪ್ರದಾಯಿಕ ಭತ್ತದ ತಳಿಗಳ ವಿಶೇಷತೆ ಗುರುತು ಮಾಡಿದರೆ ಬೇರೆ ಜಿಲ್ಲೆ, ರಾಜ್ಯಗಳಿಗೂ ಹೋಗುತ್ತದೆ. ಉತ್ತರ ಕನ್ನಡ ಬ್ರಾಂಡ್‌ನ ಭತ್ತದ ತಳಿ ಮಾಡುವ ಕಾರ್ಯವನ್ನು ಇಲಾಖೆ ಕೂಡ ಮಾಡಲಿದೆ ಎಂದರು.
ಕದಂಬ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ಕೋಟೆಮನೆ, ಸಾಂಪ್ರದಾಯಿಕ ಭತ್ತದ ತಳಿ ಬೆಳಿಯುವ ರೈತರಿದ್ದಾರೆ. ರಾಸಾಯನಿಕ ಮುಕ್ತ ಭತ್ತದ ಬೇಸಾಯ ಕುಂಬಾರವಾಡದಲ್ಲಿ ನಡೆಯುತ್ತಿದೆ ಎಂದರು.
ಭತ್ತದ ತಳಿ ಸಂರಕ್ಷಕ ಆರ್.ಜಿ. ಭಟ್ಟ, ಕದಂಬ ಅಧ್ಯಕ್ಷ ಶಂಬುಲಿಂಗ ಹೆಗಡೆ, ಕೃಷಿ ವಿಜ್ಞಾನಿ ಎಂ.ಜೆ. ಮಂಜು, ಅಧಿಕಾರಿ ಶಂಕರ ಹೆಗಡೆ, ಗುರುಪಾದ ಹೆಗಡೆ ಬೊಮ್ಮನಳ್ಳಿ, ನರೇಂದ್ರ ಹೊಂಡಾಗಶಿಗೆ ಇತರರು ಇದ್ದರು.