Advertisement

160 ಎಕರೆ ಕೃಷಿಭೂಮಿಯಲ್ಲಿ ಭತ್ತದ ನೇರ ಕೂರಿಗೆ

11:27 PM Oct 14, 2019 | Sriram |

ವಿಶೇಷ ವರದಿತೆಕ್ಕಟ್ಟೆ : ಬದಲಾದ ಕಾಲ ದಲ್ಲಿ ಕರಾವಳಿಯ ಸಾಂಪ್ರದಾಯಿಕ ಕೃಷಿಕರಿಗೆ ಎದುರಾದ ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ಪರಿಣಾಮವಾಗಿ ಯಾಂತ್ರೀಕೃತ ಬೀಜ ಬಿತ್ತನೆ ಕಾರ್ಯಕ್ಕೆ ಮೊರೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದ್ದು ಈ ಬಾರಿ ಉಳ್ತೂರು ಗ್ರಾಮದಲ್ಲಿಯೇ ಮೊದಲ ಬಾರಿಗೆ ಇಲ್ಲಿನ ರೈತರು ಸುಮಾರು 160 ಎಕರೆ ವಿಸ್ತೀರ್ಣದ ಕೃಷಿಭೂಮಿಯಲ್ಲಿ ಭತ್ತದ ನೇರ ಕೂರಿಗೆ ಬಿತ್ತನೆ ಮಾಡಿ ಸಮೃದ್ಧ ಭತ್ತದ ಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ.

Advertisement

ಕೃಷಿ ಚಟುವಟಿಕೆಯಲ್ಲಿ ಹೊಸತನ
ಕೃಷಿ ಇಲಾಖೆ, ಇಕ್ರಿಸ್ಯಾಟ್‌ ಸಿಮ್ಮಿಟ್‌ ಸಹಯೋಗದೊಂದಿಗೆ ಭೂ ಸಮೃದ್ಧಿ ಯೋಜನೆ ಅಡಿಯಲ್ಲಿ ಟ್ಯಾಕ್ಟರ್‌ ಚಾಲಿತ ಕೂರಿಗೆಯಿಂದ ಬಿತ್ತನೆಯ ಪ್ರಾತ್ಯಕ್ಷಿಕೆ ಮೂಲಕ ಕರಾವಳಿಗೆ ಮುಂಗಾರು ಮಳೆ ಆಗಮಿಸುವ ಮೊದಲೇ ಬೀಜ ಬಿತ್ತನೆ ಮಾಡಿದ್ದು , ಸುಮಾರು 130 ದಿನಗಳಲ್ಲಿಯೇ ಎಂಒ4 ಭತ್ತ ಉತ್ತಮ ಫಸಲು ಕಂಡಿದೆ.

ಪ್ರತಿ ಗಂಟೆಗೆ ಸುಮಾರು 1 ಎಕರೆ ಕೃಷಿ ಭೂಮಿಗೆ ಬೀಜ ಬಿತ್ತನೆ ಎಕರೆಗೆ ಸುಮಾರು 10ರಿಂದ 13 ಕೆಜಿ ದೀರ್ಘಾವಧಿಯ ಎಂಒ 4 ತಳಿ ಸೂಕ್ತವಾಗಿದ್ದು, ಭತ್ತದ ನೇರ ಕೂರಿಗೆ ಬಿತ್ತನೆ ಯಿಂದಾಗಿ ನೀರು, ಬೀಜ,ಗೊಬ್ಬರ ಹಾಗೂ ಕೃಷಿ ಕೂಲಿಕಾರ್ಮಿಕರ ಸಂಬಳ ಉಳಿತಾಯವಾಗುತ್ತದೆ.

ವಾರದಲ್ಲೇ ಕಟಾವು ಕಾರ್ಯ ಆರಂಭ
ಈಗಾಗಲೇ ಕರಾವಳಿ ತೀರ ಸೇರಿದಂತೆ ಉಳ್ತೂರು ಸುತ್ತಮುತ್ತಲಿನ ಪರಿಸರದ ಕೃಷಿಭೂಮಿಯಲ್ಲಿ ಭತ್ತದ ಕೃಷಿ ಮೈದಳೆದು ನಿಂತಿದ್ದು ಉತ್ತಮ ಫಸಲು ಕಂಡಿದೆ. ದಿನ ದಿಂದ ದಿನಕ್ಕೆ ಏರುತ್ತಿರುವ ತಾಪಮಾನ, ಒಣ ಹವೆಯಿಂದಾಗಿ ಭತ್ತದ ತೆನೆಗಳು ಒಳಗು ತ್ತಿದ್ದು ಒಂದು ವಾರದಲ್ಲಿ ಕಟಾವು ಕಾರ್ಯ ಆರಂಭವಾಗಲಿದೆ ಎನ್ನುವುದು ಸ್ಥಳೀಯ ಕೃಷಿಕ ತೇಜಪ್ಪ ಶೆಟ್ಟಿ ಅವರ ಅಭಿಪ್ರಾಯ.

ಏನಿದು ಕೂರಿಗೆ ಭತ್ತದ ಬೇಸಾಯ ಕ್ರಮ?
ಕರಾವಳಿಯಲ್ಲಿ ಸಾಂಪ್ರದಾಯಿಕವಾಗಿ ಬೀಜ ಬಿತ್ತನೆ ಮಾಡಿ 20 ದಿನಗಳ ಅನಂತರ ನೇಜಿ ಕಾರ್ಯ ಮಾಡುವ ಪದ್ಧತಿ ಇತ್ತು. ಆದರೆ ಬದಲಾದ ಕಾಲಕ್ಕೆ ಹೊಂದಿಕೊಂಡ ಗ್ರಾಮೀಣ ರೈತ ಸಮುದಾಯ ಮಾನವ ಶಕ್ತಿಯ ಬಳಕೆ ಕಡಿಮೆ ಮಾಡಿ ಒಳ್ಳೆಯ ತಾಂತ್ರಿಕತೆ ಅಳವಡಿಸಿಕೊಂಡು ಜೂನ್‌ ಮೊದಲ ವಾರದಿಂದಲೇ ಮಳೆಯಾಗುವುದಾದರೆ ಮೇ ತಿಂಗಳ ಕೊನೆ ವಾರದಲ್ಲಿಯೇ ಹವಾಮಾನದ ವರದಿಯ ಅಧ್ಯಯನದ ಆಧಾರದ ಮೇಲೆ ಟ್ಯಾಕ್ಟರ್‌ ಚಾಲಿತ ಕೂರಿಗೆ ತಂತ್ರಜ್ಞಾನ ಬಳಸಿಕೊಂಡು ಒಣ ಭೂಮಿಯಲ್ಲಿ ಬೀಜ ಬಿತ್ತಬೇಕು. ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಬೀಜ ಹಾಗೂ ಗೊಬ್ಬರಗಳು ಮಿತವಾಗಿ ಬಳಸಲ್ಪಡುವ ಆಧುನಿಕ ಕೃಷಿ ಪದ್ದತಿಯೇ ಕೂರಿಗೆ ಭತ್ತದ ಬೇಸಾಯ ಕ್ರಮ.

Advertisement

ಕೃಷಿ ತಂತ್ರಜ್ಞಾನದಿಂದ ಉತ್ತಮ ಇಳುವರಿ
ಭೂ ಸಮೃದ್ಧಿ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯಲ್ಲಿ ರೈತರ ಸಹಯೋಗದೊಂದಿಗೆ ಉತ್ತಮ ತಳಿಗಳ ಹಾಗೂ ಉತ್ತಮ ಕೃಷಿ ತಂತ್ರಜ್ಞಾನವನ್ನು ಬಳಸಿದುದ‌ರಿಂದ ಭತ್ತದ ಇಳುವರಿ ಹೆಚ್ಚಾಗಿದೆ . ಕರಾವಳಿ ಪ್ರದೇಶದಲ್ಲಿ ಹೊಸ ಅನುಭವವಾದರಿಂದ ಇದರ ಬೇಸಾಯ ಕ್ರಮದ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕಾಗಿದೆ. ಈ ಬೇಸಾಯ ಕ್ರಮದಲ್ಲಿ ಕಳೆಗಳ ನಿರ್ವಹಣೆ ಪ್ರಮುಖ ಅಂಶವಾಗಿದ್ದು ಬೀಜ ಬಿತ್ತನೆಯಾದ 48 ಗಂಟೆಗಳ ಅನಂತರ 1ಲೀ. ಪೆಂಡಿಮೇಥಿಲಿನ್‌ ಅನ್ನು ಸುಮಾರು 150-200 ಲೀ. ನೀರಿಗೆ ಬೆರಸಿ ಒಂದು ಎಕರೆಗೆ ಭತ್ತದ ಬೀಜ ಮೊಳಕೆ ಒಡೆಯುವ ಮೊದಲೇ ಮಣ್ಣಿನಲ್ಲಿ ಕಳೆ ಬೀಜಗಳು ಮೊಳಕೆ ಒಡೆಯದಂತೆ ತಡೆಯಬಲ್ಲದು. ರೈತರಿಗೆ ಕಡಿಮೆ ಖರ್ಚಿನಲ್ಲಿ ಭತ್ತ ಬೆಳೆದು ಉತ್ತಮ ಇಳುವರಿ ಪಡೆಯಬಹುದಾಗಿದೆ.
-ಡಾ| ಎ.ಎನ್‌.ರಾವ್‌,ಹಿರಿಯ ವಿಜ್ಞಾನಿಗಳು, ಐಆರ್‌ಆರ್‌ಐ .

ಉಳಿತಾಯ
ಟ್ಯಾಕ್ಟರ್‌ ಚಾಲಿತ ಕೂರಿಗೆ ಯಿಂದ ಬಿತ್ತನೆ ಮಾಡುವುದರಿಂದ ತುಂಬಾ ಉಳಿತಾಯವಾಗಿದೆ. ಉಳ್ತೂರು ಗ್ರಾಮದಲ್ಲಿ ತಾಂತ್ರಿಕತೆ ಬಳಸಿ ಸುಮಾರು 160 ಎಕರೆ ವಿಸ್ತೀರ್ಣದ ಕೃಷಿ ಭೂಮಿಯಲ್ಲಿ ಬಿತ್ತನೆ ಮಾಡಿ ಉತ್ತಮ ಫಸಲು ಕಂಡಿದ್ದೇವೆ. ಇದರಿಂದ ಕಡಿಮೆ ಖರ್ಚು ಅಧಿಕ ಇಳುವರಿ ಹಾಗೂ ಹೆಚ್ಚು ಲಾಭವಾಗುತ್ತಿದೆ.
-ರವೀಂದ್ರ ಶೆಟ್ಟಿ ಕಟ್ಟೆಮನೆ,
ಸಾವಯವ ಕೃಷಿಕರು

Advertisement

Udayavani is now on Telegram. Click here to join our channel and stay updated with the latest news.

Next