Advertisement

ಭತ್ತ ಬೇಸಾಯಗಾರರಿಗೆ ಇನ್ನೂ ಲಭಿಸಿಲ್ಲ ಪ್ರೋತ್ಸಾಹ ಧನ

08:20 AM May 11, 2019 | mahesh |

ಮಂಗಳೂರು: ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಭತ್ತ ಬೇಸಾಯಕ್ಕೆ ಪ್ರೋತ್ಸಾಹಧನವಾಗಿ ರಾಜ್ಯ ಸರಕಾರವು ಕಳೆದ ಬಜೆಟ್‌ನಲ್ಲಿ ಪ್ರತೀ ಹೆಕ್ಟೇರಿಗೆ 7,500 ರೂ. ಘೋಷಿಸಿದ್ದರೂ ಇನ್ನೂ ಬೇಸಾಯಗಾರರ ಕೈಸೇರಿಲ್ಲ.

Advertisement

ಮಳೆಗಾಲ ಪ್ರಾರಂಭಕ್ಕೆ ಕೆಲವು ವಾರಗಳಷ್ಟೇ ಬಾಕಿಯಿದ್ದು, ರೈತರು ಬೇಸಾಯಕ್ಕೆ ಅಣಿಯಾಗುತ್ತಿದ್ದಾರೆ. ಮುಂಗಾರು ಋತು ವಿನ ಕೃಷಿ ಚಟುವಟಿಕೆ ಆರಂಭಕ್ಕೂ ಮೊದಲೇ ಈ ಪ್ರೋತ್ಸಾಹ ಧನ ಲಭಿಸಿದರೆ ಮಾತ್ರ ರೈತರಿಗೆ ಪ್ರಯೋಜನಕಾರಿಯಾಗಲಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 90 ಸಾವಿರ ಭತ್ತ ಬೆಳೆಗಾರರಿದ್ದಾರೆ.

ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಭತ್ತ ಕೃಷಿ ತೀವ್ರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕೇರಳ ಮಾದರಿಯಲ್ಲಿ ಇಲ್ಲೂ ಪ್ರೋತ್ಸಾಹನ ಪ್ಯಾಕೇಜ್‌ ಘೋಷಿಸಬೇಕು ಎಂದು ಆಗ್ರಹಿಸಲಾಗಿತ್ತು. ಇದನ್ನು ಮನ್ನಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಳೆದ ಬಜೆಟ್‌ನಲ್ಲಿ ಪ್ರತೀ ಹೆಕ್ಟೇರ್‌ಗೆ 7,500 ರೂ. ಪ್ರೋತ್ಸಾಹ ಧನ ಘೋಷಿಸಿದ್ದರು.

ಕೇರಳದಲ್ಲಿ ಕುಸಿಯುತ್ತಿರುವ ಭತ್ತದ ಬೇಸಾಯವನ್ನು ಆಧರಿಸಲು ಹೆಕ್ಟೇರ್‌ವಾರು ಪ್ರೋತ್ಸಾಹ ಧನ ನೀಡಲಾಗುತ್ತಿದೆ. ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಉತ್ಪಾದನ ವೆಚ್ಚ ಏರಿಕೆ, ಸೂಕ್ತ ಬೆಲೆ ಕೊರತೆ, ಕೂಲಿ ಕಾರ್ಮಿಕರ ಸಮಸ್ಯೆಯಿಂದ ಭತ್ತದ ಬೆಳೆ ಬೇಸಾಯಗಾರರಿಗೆ ಹೆಚ್ಚು ಲಾಭದಾಯಕವಲ್ಲ ಎಂಬ ಸ್ಥಿತಿ ಇದೆ. ಇದರಿಂದ ಭತ್ತ ಬೆಳೆಯುವವರ ಸಂಖ್ಯೆ ಇಳಿಮುಖವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇರಳದಂತೆ ಇಲ್ಲಿಯೂ ಹೆಕ್ಟೇರ್‌ಗೆ 7,500 ರೂ. ಪೋತ್ಸಾಹಧನ ನೀಡಬಹುದು ಎಂದು ಕರ್ನಾಟಕ ಸರಕಾರ 2015ರಲ್ಲಿ ನೇಮಿಸಿದ್ದ ಅಧ್ಯಯನ ಸಮಿತಿ 2016ರಲ್ಲಿ ವರದಿ ಸಲ್ಲಿಸಿತ್ತು. ಇದಕ್ಕೆ ಪೂರಕವಾಗಿ ಅದು ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಅಧ್ಯಯನ ಮಾಡಿತ್ತು.

ಭತ್ತದ ಬೆಳೆ ನಿರಂತರ ಕುಸಿತ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಭತ್ತ ಬೆಳೆಯುವ ಪ್ರದೇಶದಲ್ಲಿ ನಿರಂತರ ಇಳಿಕೆ ಕಂಡುಬಂದಿದೆ. ಇಲಾಖಾ ಅಂಕಿಅಂಶಗಳಂತೆ ಆರು ವರ್ಷಗಳ ಹಿಂದೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ 34,000 ಹೆಕ್ಟೇರ್‌ನಲ್ಲಿ ಬೆಳೆಯಲಾಗುತ್ತಿತ್ತು. 2018-19ನೇ ಸಾಲಿಗೆ ಇದು 26,560 ಹೆಕ್ಟೇರ್‌ಗೆ ಕುಸಿದಿದೆ. ಸುಮಾರು 7,440 ಹೆಕ್ಟೇರ್‌ ಪ್ರದೇಶದಿಂದ ಭತ್ತ ಕಣ್ಮರೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 10 ವರ್ಷಗಳಲ್ಲಿ 15,360 ಹೆಕ್ಟೇರ್‌ನಿಂದ ಭತ್ತ ಮಾಯವಾಗಿದೆ. ಭತ್ತದ ಬೆಳೆ ಪ್ರಮಾಣ ಕುಸಿಯುತ್ತಿರುವ ಈ ಸಂಕೀರ್ಣ ಕಾಲಘಟ್ಟದಲ್ಲಿ ಉತ್ತೇಜನಕಾರಿ ಕ್ರಮಗಳು ಸರಕಾರದಿಂದ ಜಾರಿಯಾಗಬೇಕು ಎಂಬ ಬೇಡಿಕೆ ರೈತರದಾಗಿತ್ತು. ತಜ್ಞರು ಇದನ್ನು ಬೆಂಬಲಿಸಿದ್ದರು.

Advertisement

ಉಡುಪಿ: 36,000 ಹೆಕ್ಟೇರ್‌ ಗುರಿ
2019-20ನೇ ಆರ್ಥಿಕ ಸಾಲಿನಲ್ಲಿ ಮುಂಗಾರು ಋತುವಿನಲ್ಲಿ ಉಡುಪಿ ಜಿಲ್ಲೆಯಲ್ಲಿ 36,000 ಹೆ. ಪ್ರದೇಶದಲ್ಲಿ ಭತ್ತ ಬೆಳೆ ಗುರಿ ಇರಿಸಿಕೊಳ್ಳಲಾಗಿದೆ. ಕಳೆದ ಸಾಲಿನಲ್ಲಿ ಹಾಕಿಕೊಳ್ಳಲಾಗಿದ್ದ 44,000 ಹೆಕ್ಟೇರ್‌ ಗುರಿಯಲ್ಲಿ 36,000 ಹೆಕ್ಟೇರ್‌ ಸಾಧನೆ ಮಾಡಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ 28,000 ಹೆ. ಗುರಿ ಹೊಂದಲಾಗಿದ್ದರೆ ಬೆಳದದ್ದು 26,560 ಹೆಕ್ಟೇರ್‌ಗಳಲ್ಲಿ. 2019-20ನೇ ಸಾಲಿನಲ್ಲಿ ಗುರಿ ನಿಗದಿ ಪ್ರಕ್ರಿಯೆ ನಡೆಯುತ್ತಿದ್ದು ಈ ವೇಳೆ ಕಳೆದ ವರ್ಷ ಬೆಳೆ ಸಮೀಕ್ಷೆಯಲ್ಲಿ ಅಂದಾಜಿಸಲಾದ ಪ್ರದೇಶವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಬೆಳೆ ಸಮೀಕ್ಷೆಯಲ್ಲಿ ಪ್ರಸ್ತುತ ಇರುವ ಅಂಕಿಅಂಶಕ್ಕಿಂತ ಸುಮಾರು 10,000 ಹೆ. ಪ್ರದೇಶ ಕಡಿಮೆ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ.

ಉಡುಪಿ ಜಿಲ್ಲೆಯಲ್ಲಿ ಈ ಮುಂಗಾರಿನಲ್ಲಿ 36000 ಹೆ. ಭತ್ತದ ಬೆಳೆ ಗುರಿಯನ್ನು ಇರಿಸಿಕೊಳ್ಳಲಾಗಿದೆ. ಭತ್ತದ ಬೆಳೆಗೆ ಸರಕಾರ ಘೋಷಿಸಿರುವ ಪೋತ್ಸಾಹ ಧನ ಯೋಜನೆಯ ಮಾರ್ಗಸೂಚಿಗಳು ಇನ್ನೂ ಬಂದಿಲ್ಲ.
– ಡಾ| ಎಚ್. ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಸಾಲಿನ ಮುಂಗಾರಿನಲ್ಲಿ ಭತ್ತದ ಬೆಳೆ ಗುರಿ ನಿಗದಿ ಒಂದೆರಡು ದಿನಗಳಲ್ಲಿ ಅಂತಿಮಗೊಳ್ಳಲಿದೆ. ಕಳೆದ ಬಾರಿ ಸುಮಾರು 26,560 ಹೆ. ಪ್ರದೇಶದಲ್ಲಿ ಭತ್ತ ಬೆಳೆಯಲಾಗಿತ್ತು.
– ಡಾ| ಸೀತಾ ಜಂಟಿ ಕೃಷಿ ನಿರ್ದೇಶಕರು ದ.ಕ.ಜಿಲ್ಲೆ

-ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next