Advertisement
ಸವಣೂರು: ಭತ್ತ ಪ್ರಮುಖ ಆಹಾರ ಬೆಳೆ. ಹೆಚ್ಚಿನ ಮಕ್ಕಳಿಗೆ ಅಕ್ಕಿ ಯಾವ ರೀತಿ ಬೆಳೆಯಲಾಗುತ್ತದೆ ಎಂಬ ಬಗ್ಗೆ ಸರಿಯಾದ ಮಾಹಿತಿಯಿರುವುದು ಕಡಿಮೆಯೇ. ಅದರಲ್ಲೂ ಸಿಟಿಯ ಬದುಕಿಗೆ ಒಗ್ಗಿಕೊಂಡ ಮಕ್ಕಳಿಗಂತೂ ಗದ್ದೆ ಕಣ್ಣಗೆ ಸಿಕ್ಕುವುದೇ ಅಪರೂಪವೆನಿಸಿಬಿಟ್ಟಿದೆ. ಈ ನಿಟ್ಟಿನಲ್ಲಿ ಭತ್ತದ ಬೆಳೆಯನ್ನು ಬೆಳೆಯುವುದು ಹೇಗೆ, ನಾಟಿ ಹೇಗೆ ಮೊದಲಾದ ವಿಚಾರಗಳ ಮೂಲಕ ಮಕ್ಕಳಿಗೆ ಭತ್ತದ ಕೃಷಿಯ ಬಗ್ಗೆ ಆಸಕ್ತಿ, ತಿಳಿವಳಿಕೆ ಮೂಡಿಸುವ ಸಲುವಾಗಿ ಪಾಲ್ತಾಡಿ ಗ್ರಾಮದ ಚೆನ್ನಾವರ ಕಿ.ಪ್ರಾ. ಶಾಲಾ ಮಕ್ಕಳಿಗೆ ಚೆನ್ನಾವರ ಪಟ್ಟೆಯ ಭತ್ತದ ಗದ್ದೆಯಲ್ಲಿ ಭತ್ತದ ಕೃಷಿಯ ಕುರಿತು ತಿಳಿಹೇಳಲಾಯಿತು. ಚೆನ್ನಾವರ ಅಭ್ಯುದಯ ಯುವಕ ಮಂಡಲದ ನೇತೃತ್ವದಲ್ಲಿ ಇಲ್ಲಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಭತ್ತದ ಗದ್ದೆಯಲ್ಲಿ ಪರಿಣತರಿಂದ ಮಾಹಿತಿ ನೀಡಲಾಯಿತು.
ಶಾಲಾ ಮಕ್ಕಳು ಆಸಕ್ತಿಯಿಂದ ಗದ್ದೆಗೆ ಇಳಿದರು. ಗದ್ದೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದವರ ಬಾಯಿಯಿಂದ ಕೇಳಿಬರುತ್ತಿದ್ದ ‘ಓ ಬೇಲೇ.. ಓ ಬೇಲೆ..’ ಹಾಡುಗಳು ಮಕ್ಕಳ ಬಾಯಲ್ಲೂ ಸರಾಗವಾಗಿ ಕೇಳಿಬಂದವು. ಹಿಂದಿನ ಕಾಲದವರು ಕೃಷಿಯ ನಂಟನ್ನು ಬಿಡದೆ ನೇಜಿ ನಾಟಿ ಮಾಡುವ ಸಮಯದಲ್ಲಿ ತಮ್ಮನ್ನು ತಾವೇ ಹುರಿದುಂಬಿಸಿಕೊಳ್ಳಲು ಜಾನಪದ ಹಾಡು, ಪಾಡªನಗಳನ್ನು ಹೇಳುತ್ತಿದ್ದರು. ಈ ಹಾಡನ್ನು ಮಕ್ಕಳೂ ಹಾಡಿ ಸಂಭ್ರಮಿಸಿದರು. ಭತ್ತದ ಕೃಷಿಯಿಂದ ದೂರಸರಿಯುವ ಕಾಲದಲ್ಲಿ ವಿದ್ಯಾರ್ಥಿಗಳು, ಯುವಜನತೆ ಈ ಕೃಷಿಯ ಬಗ್ಗೆ ನೈಜವಾಗಿ ತಿಳುವಳಿಕೆ ಬೆಳೆಸಿಕೊಳ್ಳಬೇಕಾದರೆ ಸ್ವತಃ ಗದ್ದೆಗಿಳಿದು ಕೆಲಸದಲ್ಲಿ ತೊಡಗಿಸಿಕೊಂಡಾಗ ಮಾತ್ರ ಸಾಧ್ಯ ಎಂಬುದನ್ನು ಮನಗಂಡು ಪಾಲ್ತಾಡಿ ಶ್ರೀವಿಷ್ಣು ಮಿತ್ರವೃಂದದವರು ಮಕ್ಕಳನ್ನು ಗದ್ದೆಯ ಬಳಿ ಕರೆದುಕೊಂಡು ಅವರಿಗೆ ನೈಜತೆಯನ್ನು ಅರಿಯುವ ಪ್ರಯತ್ನ ಮಾಡುತ್ತಿದ್ದಾರೆ. ಮಳೆಗಾಲದ ಜಿಟಿಜಿಟಿ ಮಳೆ, ಗಾಳಿಯನ್ನು ಲೆಕ್ಕಿಸದೆ ನೇಜಿ ನೆಡುವುದರಲ್ಲಿ ಪಾಲ್ಗೊಂಡ ಮಕ್ಕಳು ಭಾನುವಾರ ಇದೇ ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡಾಕೂಟದಲ್ಲೂ ಪಾಲ್ಗೊಂಡಿದ್ದರು.
Related Articles
Advertisement