Advertisement
ಕಡಿಮೆ ನೀರು, ಸಮಯಕ್ಕೆ ಸರಿಯಾಗಿ ಬೆಳೆ, ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುವಲ್ಲಿ ಈ ಪದ್ಧತಿ ಹೆಚ್ಚು ರೈತರಿಗೆ ಅನುಕೂಲ. ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ರೈತರು ನೇರ ಕೂರಿಗೆ ಭತ್ತದ ಬಿತ್ತನೆ ಬೆಳೆಯಲು ಮುಂದಾಗಿದ್ದಾರೆ. ಜೊತೆಗೆ ಒಂದೇ ಬೆಳೆಗೆ ಸೀಮಿತವಾಗದೆ ಪರ್ಯಾಯ ಬೆಳೆ ಬೆಳೆದು ಕೂಡ ಸೈ ಎನಿಸಿಕೊಂಡಿದ್ದಾರೆ.
Related Articles
Advertisement
ಸಾಂಪ್ರದಾಯಿಕ ನಾಟಿ ಪದ್ಧತಿಗೆ ಅಧಿಕ ನೀರು, ಹೆಚ್ಚು ಕೂಲಿಕಾರರು, ವ್ಯಾಪಕ ರಸಗೊಬ್ಬರ, ಕೀಟನಾಶಕ ಬಳಕೆ ಮಾಡಬೇಕಾಗುತ್ತದೆ. ಇದರಿಂದ ಜಾಗತಿಕ ತಾಪಮಾನದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುವ ಜೊತೆಗೆ ಮಣ್ಣಿನ ಮಾಲಿನ್ಯವೂ ಹೆಚ್ಚಾಗುತ್ತದೆ. ಆದರೆ, ಈ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಕೂರಿಗೆ ಭತ್ತದ ಬಿತ್ತನೆ ರೈತರಿಗೆ ಹೆಚ್ಚು ವರದಾನ ಆಗಲಿದೆ. ಜೊತೆಗೆ ಈ ಪದ್ಧತಿಯನ್ನು ರೈತರು ಅಳವಡಿಸಿಕೊಂಡಲ್ಲಿ 1 ಹೆಕ್ಟೇರ್‌ಗೆ 4 ಸಾವಿರ, 1 ಎಕರೆಗೆ 1,600 ರೂ. ಪ್ರೋತ್ಸಾಹ ಧನ ಕೃಷಿ ಇಲಾಖೆಯಿಂದ ದೊರೆಯಲಿದೆ ಎನ್ನುತ್ತಾರೆ ತ್ಯಾವಣಿಗೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಬಿ.ವಿ. ಶ್ರೀನಿವಾಸಲು.
ಪ್ರಸ್ತುತ ಕುಡಿಯುವ ನೀರಿಗೆ ಜಿಲ್ಲೆಯಲ್ಲಿ ಬರ ಆವರಿಸಿರುವ ಸಂದಿಗ್ಧ ಪರಿಸ್ಥಿತಿಯಲ್ಲಿ ಹೊಸ ಬಗೆಯ ಕೃಷಿ ಅಳವಡಿಕೆ ಹೆಚ್ಚು ಸಹಕಾರಿ. ಈ ಹಿನ್ನೆಲೆಯಲ್ಲಿ ಹೆಚ್ಚೆಚ್ಚು ರೈತರು ಜಿಲ್ಲೆಯಾದ್ಯಂತ ನೇರ ಕೂರಿಗೆ ಭತ್ತದ ಭಿತ್ತನೆ ಕೃಷಿ ಅಳವಡಿಸಿಕೊಂಡರೆ ನೀರಿನ ಉಳಿತಾಯದೊಂದಿಗೆ ಜಲಕ್ಷಾಮ ನಿವಾರಣೆಗೆ ಉತ್ತಮ ಕೊಡುಗೆ ನೀಡಬಹುದಾಗಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶ ಸೇರಿದಂತೆ ಜಿಲ್ಲೆಯ ಎಲ್ಲಾ ಕೊನೆಭಾಗದ ರೈತರ ನೀರಿನ ಸಮಸ್ಯೆಗೆ ಕೂರಿಗೆ ಭತ್ತದ ಬಿತ್ತನೆ ಪರಿಹಾರ ಮಾರ್ಗವಾಗಿದೆ. ಈ ಬೆಳೆಯ ಬಗ್ಗೆ ಕಾಡಾ ಮುಂತಾದ ಸಭೆಗಳಲ್ಲಿ ಕೃಷಿ ಇಲಾಖೆ ಮತ್ತು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು, ತಜ್ಞರು ಸೇರಿ ಬೆಳೆಯೋಜನೆ ರೂಪಿಸಬೇಕು. ಜೊತೆಗೆ ಯಾವ ಪ್ರದೇಶದ ಭೂಮಿಗಳಲ್ಲಿ ಕೂರಿಗೆ ಬಿತ್ತನೆ ಮಾಡಲು ಸಾಧ್ಯವಿದೆಯೋ, ಅಲ್ಲೆಲ್ಲಾ ಈ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸೂಕ್ತ ನಿರ್ದೇಶನ ನೀಡಿದ್ದಾದರೆ ಬೇಸಿಗೆ ಹಂಗಾಮಿನಲ್ಲಿ ಶೇ. 50 ರಿಂದ 60 ರಷ್ಟು ಭದ್ರಾ ನೀರಿನ ಸಮಸ್ಯೆ ನಿಯಂತ್ರಿಸಬಹುದು.•ತೇಜಸ್ವಿ ಪಟೇಲ್, ಜಿಲ್ಲಾ ಪಂಚಾಯಿತಿ ಸದಸ್ಯ. ಜಿಲ್ಲೆಯ ಭದ್ರಾ, ಶಾಂತಿಸಾಗರ, ತುಂಗಾಭದ್ರಾ ಸೇರಿದಂತೆ ನೀರಾವರಿ ಅಚ್ಚುಕಟ್ಟು ಭಾಗದ ರೈತರು ಹಾಗೂ ಕೊನೆ ಭಾಗಕ್ಕೆ ಕಡಿಮೆ ಪ್ರಮಾಣದಲ್ಲಿ ನೀರು ದೊರೆಯುವ ರೈತರು ನೇರ ಕೂರಿಗೆ ಭತ್ತದ ಬಿತ್ತನೆ ಅಳವಡಿಸಿಕೊಂಡರೆ ಹೆಚ್ಚು ಅನುಕೂಲ. ಈ ರೀತಿಯ ಬೆಳೆ ಪದ್ಧತಿಯಿಂದ ಖರ್ಚು-ವೆಚ್ಚ ಕಡಿಮೆ ಆಗುವ ಜೊತೆಗೆ ಅಧಿಕ ಲಾಭ ಪಡೆಯಬಹುದಾಗಿದೆ. ಬೇಸಿಗೆಯ ಈ ದಿನಗಳಲ್ಲಿ ಅಪಾರ ಪ್ರಮಾಣದ ನೀರನ್ನು ಉಳಿತಾಯ ಮಾಡಬಹುದಾಗಿದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ರೈತರಿಗೆ ಲಾಭಾಂಶ ದೊರೆಯುವುದು ಅಷ್ಟಕಷ್ಟೇ. ಆದರೆ, ಕೂರಿಗೆ ಭತ್ತ ಬಿತ್ತನೆಯಿಂದ ರೈತರ ಆದಾಯ ದ್ವಿಗುಣ ಆಗುವ ಜೊತೆಗೆ ಪರಿಸರದ ಮೇಲಾಗುವ ಹಾನಿಯನ್ನು ತಡೆಗಟ್ಟಬಹುದಾಗಿದೆ.
•ಶರಣಪ್ಪ ಮುದಗಲ್ ಜಿಲ್ಲಾ ಜಂಟಿ ಕೃಷಿ ನಿರ್ದೇಶರು. ವಿಜಯ್ ಕೆಂಗಲಹಳ್ಳಿ