Advertisement

ದೇಸೀ ಭತ್ತ ತಳಿ ಪ್ರೋತ್ಸಾಹಧನ ಒಂದೇ ವರ್ಷಕ್ಕೆ ಸೀಮಿತ!

10:38 AM Nov 08, 2020 | sudhir |

ಮಂಗಳೂರು: ಕರಾವಳಿಯ ಭತ್ತ ಬೇಸಾಯ, ವಿಶೇಷವಾಗಿ ದೇಸೀ ಭತ್ತದ ತಳಿಗಳ ಬೇಸಾಯವನ್ನು ಉತ್ತೇಜಿಸುವುದಕ್ಕಾಗಿ ಕಳೆದ ವರ್ಷ ಘೋಷಿಸಲಾಗಿದ್ದ “ಕರಾವಳಿ ಪ್ಯಾಕೇಜ್‌’ ಒಂದೇ ವರ್ಷಕ್ಕೆ ಸೀಮಿತಗೊಂಡಿದೆ. ಇದರ ಜತೆಗೆ ಕೃಷಿಭಾಗ್ಯ, ಸಾವಯವ ಕೃಷಿ ಉತ್ತೇಜನ ಯೋಜನೆಗಳನ್ನು ಕೂಡ ಕೈಬಿಡಲಾಗಿದೆ.

Advertisement

ಕರಾವಳಿಯಲ್ಲಿ ಸ್ಥಳೀಯ ಭತ್ತದ ತಳಿಗಳ ಬೇಸಾಯವನ್ನು ಪ್ರೋತ್ಸಾಹಿಸಲು ಮತ್ತು ಯಾಂತ್ರೀಕೃತ ಕೃಷಿಯ ಉತ್ತೇಜನಕ್ಕಾಗಿ ಕಳೆದ ವರ್ಷ “ಕರಾವಳಿ ಪ್ಯಾಕೇಜ್‌’ನಡಿ 5 ಕೋ.ರೂ. ಮೀಸಲಿಡಲಾಗಿತ್ತು. ಉಭಯ ಜಿಲ್ಲೆಗಳ 3,791 ರೈತರು ಇದರ ಪ್ರಯೋಜನ ಪಡೆದಿದ್ದರು.

ದೇಸೀ ತಳಿಗೆ ಕೊಕ್‌
“ಕರಾವಳಿ ಪ್ಯಾಕೇಜ್‌’ನಡಿ ಯಾಂತ್ರೀಕೃತ ನಾಟಿ, ನೇರ ಬಿತ್ತನೆ ಮತ್ತು ಸ್ಥಳೀಯ(ದೇಸೀ) ತಳಿಗೆ ಎಕರೆಗೆ 3 ಸಾವಿರ ರೂ.ಗಳಂತೆ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಈ ಬಾರಿ ಕೇಂದ್ರದ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ನಡಿ ಯಾಂತ್ರೀಕೃತ ಬೇಸಾಯಕ್ಕೆ ಪ್ರೋತ್ಸಾಹಧನ ನೀಡಲಾಗುತ್ತದೆ. ಆದರೆ ಇದರಲ್ಲಿ ಸ್ಥಳೀಯ ಭತ್ತದ ತಳಿ ಪ್ರೋತ್ಸಾಹಧನ ಒಳಗೊಂಡಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪಾಣೆಮಂಗಳೂರು ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ ಅಪರಿಚಿತ ವ್ಯಕ್ತಿ

ಪ್ರತ್ಯೇಕವಾಗಿ ಗುರುತಿಸಿಲ್ಲ
ಕರಾವಳಿ ಪ್ಯಾಕೇಜ್‌ನಡಿ ಕಳೆದ ವರ್ಷ ಪ್ರೋತ್ಸಾಹಧನವನ್ನು ನೇರವಾಗಿ ಫ‌ಲಾನುಭವಿಗಳ ಖಾತೆಗೆ ಹಾಕಲಾಗಿತ್ತು. ಸ್ಥಳೀಯ ಭತ್ತ ತಳಿ ಉತ್ತೇಜನಕ್ಕೆ ಪ್ರೋತ್ಸಾಹಧನ ಇತ್ತಾದರೂ ಅದನ್ನು ಪ್ರತ್ಯೇಕವಾಗಿ ಗುರುತಿಸಿಲ್ಲ. ಎರಡೂ ಜಿಲ್ಲೆಗಳಲ್ಲಿ ಭದ್ರಾ, ಜಯ, ಜ್ಯೋತಿ, ರಾಶಿ ಇತ್ಯಾದಿ ತಳಿಗಳನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇವು ಸ್ಥಳೀಯವೇ. ಹಾಗಾಗಿ ಕಳೆದ ಬಾರಿ ಪ್ಯಾಕೇಜ್‌ನಡಿ ಪ್ರೋತ್ಸಾಹಧನ ನೀಡುವಾಗ ದೇಸಿ ತಳಿ ಬೆಳೆದವರನ್ನು ಪ್ರತ್ಯೇಕವಾಗಿ ಗುರುತಿಸದೆ, ಯಂತ್ರೋಪಕರಣ, ನೇರ ಬಿತ್ತನೆ ಯೋಜನೆಯಡಿ ದೇಸೀ ತಳಿ ಬೆಳೆದವರನ್ನೂ ಸೇರಿಸಿ ಪ್ರೋತ್ಸಾಹಧನ ನೀಡಲಾಗಿದೆ ಎಂದು ಕೃಷಿ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

Advertisement

ಕೃಷಿ ಭಾಗ್ಯವೂ ಇಲ್ಲ
ಕೃಷಿ ಹೊಂಡ ನಿರ್ಮಾಣ, ಸ್ಪ್ರಿಂಕ್ಲರ್‌ ನೀರಾವರಿ ಮೊದಲಾದ ಕಾರ್ಯಕ್ರಮ ಒಳಗೊಂಡಿದ್ದ ಕೃಷಿ ಭಾಗ್ಯ ಯೋಜನೆಯನ್ನೂ ಈ ಬಾರಿ ರದ್ದುಪಡಿಸಲಾಗಿದೆ. ಇದರಲ್ಲದೆ ಜೀವಾಮೃತ, ಬೀಜಾಮೃತ ಕಾರ್ಯಕ್ರಮದಡಿ ಗೊಬ್ಬರ, ಬೀಜ ಖರೀದಿ ಸಬ್ಸಿಡಿ, ದೇಸಿ ತರಕಾರಿ ಬೀಜ ಖರೀದಿ ಸಬ್ಸಿಡಿ, ಮೇವಿನ ಹುಲ್ಲು ಬೆಳೆಸಲು ಸಬ್ಸಿಡಿ ಮೊದಲಾದ ಆರ್ಥಿಕ ನೆರವನ್ನೂ ಈ ಬಾರಿ ನೀಡಲಾಗುತ್ತಿಲ್ಲ.

ಈ ಬಾರಿ ಕರಾವಳಿ ಪ್ಯಾಕೇಜ್‌, ಕೃಷಿಭಾಗ್ಯ ಯೋಜನೆಗಳನ್ನು ನೀಡಿಲ್ಲ. ಆದರೆ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್‌ನಡಿ ವಿವಿಧ ಪ್ರೋತ್ಸಾಹಧನ, ಪರಿಕರ ನೀಡಲಾಗುತ್ತದೆ. ಫ‌ಲಾನುಭವಿಗಳಿಗೆ ಸೌಲಭ್ಯ ವಿತರಣೆ ನಡೆಯುತ್ತಿದೆ. ಕರಾವಳಿಯಲ್ಲಿ ಸ್ಥಳೀಯ ತಳಿಗಳನ್ನೇ ಬೆಳೆಯಲಾಗುತ್ತಿದೆ. ಹಾಗಾಗಿ ಸ್ಥಳೀಯ ತಳಿ ಎಂದು ಪ್ರತ್ಯೇಕವಾಗಿ ಗುರುತಿಸಿರಲಿಲ್ಲ. ಯಾಂತ್ರೀಕೃತ ನಾಟಿ, ನೇರಬಿತ್ತನೆಯ ಫ‌ಲಾನುಭವಿಗಳ ಜತೆಗೆ ದೇಸಿ ತಳಿ ಬೆಳೆದವರಿಗೂ ಪ್ರೋತ್ಸಾಹ ಧನ ನೀಡಲಾಗಿತ್ತು.

– ಸೀತಾ, ಕೆಂಪೇಗೌಡ, ಉಪನಿರ್ದೇಶಕರು, ಕೃಷಿ ಇಲಾಖೆ, ದ.ಕ., ಉಡುಪಿ ಜಿಲ್ಲೆ

ಪ್ಯಾಕೇಜ್‌ನಡಿ 1.35 ಕೋ.ರೂ.
ಕರಾವಳಿ ಪ್ಯಾಕೇಜ್‌ನಡಿ ಕಳೆದ ವರ್ಷ ದಕ್ಷಿಣಕನ್ನಡ, ಉಡುಪಿಯಲ್ಲಿ ಒಟ್ಟು 1.35 ಕೋ.ರೂ. ಪ್ರೋತ್ಸಾಹಧನ ನೀಡಲಾಗಿತ್ತು. ಯಾಂತ್ರೀಕೃತ ನಾಟಿ, ನೇರಬಿತ್ತನೆಯ ಜತೆಗೆ ದೇಸಿ ತಳಿ ಬೆಳೆಯುವ ರೈತರನ್ನು ಸೇರಿಸಲಾಗಿತ್ತು. ಉಡುಪಿಯಲ್ಲಿ
1,466 ರೈತರಿಗೆ 52.96 ಲ.ರೂ. ರೂ., ದ.ಕ.ದಲ್ಲಿ 2,325 ಮಂದಿಗೆ 82.17 ಲ.ರೂ. ಪ್ರೋತ್ಸಾಹಧನ ನೀಡಲಾಗಿತ್ತು.

– ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next