Advertisement
ಪ್ರತಿ ವರ್ಷ ಯಾವುದಾದರೊಂದು ವಿಶೇಷ ಬೆಳೆಗಳನ್ನು ಬೆಳೆಯುವುದು ಮುತ್ತಣ್ಣರ ವೈಶಿಷ್ಟé. ಸುಮಾರು 20 ದೇಶಿ ತಳಿಯ ಭತ್ತವನ್ನು ಬೆಳೆದು ಕಟಾವಿನ ಖುಷಿಯಲ್ಲಿದ್ದಾರೆ. ಶಿವಮೊಗ್ಗದ ಸಾವಯವ ಕೃಷಿ ಸಂಶೋಧನಾ ಕೇಂದ್ರದಿಂದ ದೇಶಿ ತಳಿಯ ಭತ್ತದ ಬೀಜವನ್ನು ತಂದು ಪ್ರಾಯೋಗಿಕವಾಗಿ ತಮ್ಮ 20 ಗುಂಟೆ ಜಮೀನಿನಲ್ಲಿ ಶ್ರೀಪದ್ಧತಿಯಲ್ಲಿ ನಾಟಿ ಮಾಡಿದ್ದಾರೆ.
ಸಾಮಾನ್ಯವಾಗಿ ಭತ್ತದ ಪೈರು ಎಂದರೆ ಹಸಿರಿನಿಂದ ಕೂಡಿರುತ್ತದೆ. ಆದರೆ ಮುತ್ತಣ್ಣನ ಹೊಲದಲ್ಲಿ ಕಪ್ಪು ಭತ್ತದ ತಳಿ ನಳನಳಿಸುತ್ತಿದೆ. ಕಾಳಜೀರ, ಎಚ್‌ಎಂಟಿ, ಎಕ್ಸ್‌ಜ್ಯೋತಿ, ಸೇಲಂಸಣ್ಣ, ಮ್ಯಾಜಿಕ್ 100, ಜೆಜಿಕೆ- 2, ಸಹ್ಯಾದ್ರಿ ಮೇಘ, ಕೆಪಿಆರ್- 2ಎಕ್ಸ್, ಮೈಸೂರು ಮಲ್ಲಿಗೆ, ಸಿದ್ದಸಣ್ಣ, ರತ್ನಚೂಡಿ, ಚಿನ್ನಪೊನ್ನಿ, ವೆಲೈಪೊನ್ನಿ, ಡಾಂಬರ ಸಾಲೆ, ಮಂಜುಗುಣಿ ಸಣ್ಣಕ್ಕಿ, ನಜರ್‌ಬಾದ್, ಹೀಗೆ ಅನೇಕ ಭತ್ತದ ತಳಿಗಳು ಮುತ್ತಣ್ಣನ ಹೊಲದಲ್ಲಿವೆ. ಹೈಬ್ರಿಡ್ ಭತ್ತದ ತಳಿಗೆ ಹೋಲಿಸಿದರೆ ದೇಶಿ ತಳಿಯ ಭತ್ತದ ಪೈರಿಗೆ ರೋಗ ಹಾಗೂ ಕೀಟಬಾಧೆ ಕಡಿಮೆ. ಅಷ್ಟೇ ಅಲ್ಲದೆ ನೀರಿನ ಪ್ರಮಾಣವೂ ಕಡಿಮೆ. ದೇಶಿ ಭತ್ತಕ್ಕೆ ಬೇಡಿಕೆ ಇದ್ದರೂ ಮಾರುಕಟ್ಟೆಯ ಕೊರತೆ ಇದೆ. ಇದರಿಂದ ದೇಶಿ ಭತ್ತವನ್ನು ಬೆಳೆಯುವ ರೈತರ ಸಂಖ್ಯೆ ಕಡಿಮೆ.
Related Articles
ಕಪ್ಪು ಭತ್ತದ ತಳಿಗಳಿಂದ ಗದ್ದೆಯಲ್ಲಿ ಚಿತ್ರ ಬಿಡಿಸುವ ಕಲೆ ಜಪಾನ್‌ನಲ್ಲಿ ತುಂಬಾ ಪ್ರಸಿದ್ಧಿ. ಕಪ್ಪು ಭತ್ತದ ತಳಿಗಳು ಔಷಧೀಯ ಗುಣಗಳಿಂದ ಕೂಡಿವೆ. ಮುತ್ತಣ್ಣ ಅಡಕೆ ಸಸಿಗಳ ನರ್ಸರಿಯನ್ನೂ ನಡೆಸುತ್ತಿದ್ದಾರೆ. ಈಗ, ವರ್ಷಕ್ಕೆ ನರ್ಸರಿಯೊಂದರಿಂದಲೇ ಮುತ್ತಣ್ಣನಿಗೆ 1- 2 ಲಕ್ಷ ರೂ. ಆದಾಯ ಬರುತ್ತಿದೆ. ಶಿವಮೊಗ್ಗ, ಹಾವೇರಿ, ಹುಬ್ಬಳ್ಳಿ, ಮುಂಡಗೋಡು, ದಾವಣಗೆರೆಗಳಿಂದಲೂ ಮುತ್ತಣ್ಣನ ಅಡಕೆ ಸಸಿಗಳಿಗೆ ಬೇಡಿಕೆಯಿದೆ.
Advertisement
ಇವರ ತೋಟದಲ್ಲಿ ಗೆಣಸು, ಅಡಕೆ, ಬಾಳೆ, ಚಿಕ್ಕು, ಜೇನುಸಾಕಣಿಕೆ, ನಾಟಿಕೋಳಿ, ಮಾವು ಇನ್ನು ಅನೇಕ ತಳಿಯ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. ಎಲ್ಲವಕ್ಕೂ ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಮುತ್ತಣ್ಣ, ಸರ್ಕಾರದಿಂದ ಕೃಷಿ ಪಂಡಿತ, ರಾಜ್ಯೋತ್ಸವ ಪ್ರಶಸ್ತಿಗಳಿಗೂ ಪಾತ್ರರಾಗಿದ್ದಾರೆ.
ಚಿತ್ರ-ಲೇಖನ: ಟಿ. ಶಿವಕುಮಾರ್