Advertisement
2018-19ನೇ ಸಾಲಿಗೆ ಹೋಲಿಸಿದರೆ ಈ ಬಾರಿ ಭತ್ತದ ಬೆಳೆ ವಿಸ್ತೀರ್ಣ ಕಡಿಮೆಯಾಗಿದ್ದರೂ ಉತ್ಪಾದನೆಯ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ. ಕಳೆದ ಬಾರಿ ಜಿಲ್ಲೆಯಲ್ಲಿ 54,615 ಹೆಕ್ಟೇರ್ ಪ್ರದೇಶದಲ್ಲಿ ಪ್ರತಿ ಹೆಕ್ಟೇರ್‌ಗೆ 58 ಕ್ವಿಂಟಲ್‌ನಂತೆ ಕನಿಷ್ಠ 3.19 ಲಕ್ಷ ಮೆಟ್ರಿಕ್ ಟನ್ ಭತ್ತದ ಇಳುವರಿ ನಿರೀಕ್ಷಿಸಲಾಗಿತ್ತು. 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 52,978 ಹೆಕ್ಟೇರ್‌ನಲ್ಲಿ ಭತ್ತ ಬೆಳೆದಿದ್ದು 4,23,824 ಟನ್ ಭತ್ತದ ಉತ್ಪಾದನೆ ನಿರೀಕ್ಷಿಸಲಾಗಿದೆ.
Related Articles
Advertisement
ಗೊಂದಲ ಸೃಷ್ಟಿ: ಕಳೆದ ವರ್ಷ ಭತ್ತ ಖರೀದಿ ಜವಾಬ್ದಾರಿಯನ್ನು ರೈಸ್‌ಮಿಲ್‌ಗಳಿಗೆ ವಹಿಸಲಾಗಿತ್ತು. ಅದಕ್ಕೂ ಮುಂಚೆ ಸರ್ಕಾರವೇ ರೈತರಿಂದ ನೇರವಾಗಿ ಭತ್ತ ಖರೀದಿ ಮಾಡಿ ಹಲ್ಲಿಂಗ್‌ಗೆ ಮಾತ್ರ ರೈಸ್‌ಮಿಲ್ ಗಳಿಗೆ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಕಳೆದ ಸಾಲಿನಲ್ಲಿ ಆ ನಿಯಮದಲ್ಲಿ ಬದಲಾವಣೆ ತಂದು ರೈಸ್ ಮಿಲ್‌ಗಳೇ ರೈತರಿಂದ ಭತ್ತ ಖರೀದಿ ಮಾಡುವುದು, ಖರೀದಿಸಿದ ಭತ್ತಕ್ಕೆ ಪ್ರತಿ ಕ್ವಿಂಟಲ್‌ಗೆ 1750 ರೂ.ನಂತೆ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟು, ಐದಾರು ತಿಂಗಳ ನಂತರ ಹಲ್ಲಿಂಗ್ ಮಾಡಿ ಸರ್ಕಾರಕ್ಕೆ ನೀಡುವಂತೆ ಹೊಸ ನಿಯಮ ರೂಪಿಸಿ ಜಾರಿಗೊಳಿಸಿತು.
ಇದಕ್ಕೆ ರೈಸ್‌ಮಿಲ್ ಮಾಲೀಕರು ಒಪ್ಪದೆ ಗೊಂದಲ ಸೃಷ್ಟಿಯಾಗಿತ್ತು. ಭತ್ತ ಖರೀದಿ ಮಾಡಲು ಠೇವಣಿ ಇಡುವಷ್ಟು ಹಣ ನಮ್ಮಲ್ಲಿಲ್ಲ. ಅದಕ್ಕಾಗಿ ಸರ್ಕಾರವೇ ನೇರವಾಗಿ ಭತ್ತ ಖರೀದಿ ಮಾಡಿ ರೈಸ್‌ಮಿಲ್‌ಗಳಿಗೆ ಪೂರೈಸಿದರೆ ನಮಗೂ ಕೆಲಸ ಸಿಕ್ಕಂತಾಗುವುದು, ಸರ್ಕಾರಕ್ಕೂ ಅನುಕೂಲವಾಗಲಿದೆ ಎಂಬ ಸಂದೇಶ ರವಾನಿಸಿದ್ದರು. ಆದರೆ, ಈ ಗೊಂದಲ ಕೊನೆಯ ವರೆಗೂ ಮುಂದುವರಿದು ರೈತರಿಂದ ಕಡೆಗೂ ಸಮರ್ಪಕವಾಗಿ ಸರ್ಕಾರ ಭತ್ತ ಖರೀದಿ ಮಾಡಲೇ ಇಲ್ಲ. ಇದರಿಂದ ರೈತರು ಬೆಳೆದ ಭತ್ತವೆಲ್ಲವೂ ದಲ್ಲಾಳಿಗಳ ಪಾಲಾಗಿತ್ತು.
ಮತ್ತೆ ದಲ್ಲಾಳಿಗಳ ಪಾಲಾಗುವ ಆತಂಕ: ಈ ಬಾರಿಯೂ ಭತ್ತಕ್ಕೆ ಬೆಂಬಲ ಬೆಲೆ ನಿಗದಿಪಡಿಸದೆ, ಸಕಾಲದಲ್ಲಿ ಖರೀದಿ ಕೇಂದ್ರವನ್ನೂ ತೆರೆಯದಿದ್ದಲ್ಲಿ ಭತ್ತದ ಬೆಳೆ ಈ ಬಾರಿಯೂ ಮಧ್ಯವರ್ತಿಗಳ ಪಾಲಾಗುವುದಕ್ಕೆ ಹಾಗೂ ರೈತರಿಗೆ ಉತ್ತಮ ಬೆಲೆ ಸಿಗದೆ ಶೋಷಣೆಗೆ ಒಳಗಾಗುವುದಕ್ಕೆ ಸರ್ಕಾರವೇ
ನೇರ ಕಾರಣವಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಶಂಭೂನಹಳ್ಳಿ ಸುರೇಶ್ ಆರೋಪಿಸಿದ್ದಾರೆ. ಈ ವೇಳೆಗೆ ಸರ್ಕಾರ ಬೆಂಬಲ ಬೆಲೆ ನಿಗದಿಪಡಿಸಬೇಕಿತ್ತು, ಖರೀದಿ ಕೇಂದ್ರಗಳನ್ನು ತೆರೆದು ಭತ್ತ ಖರೀದಿಗೆ ವ್ಯವಸ್ಥೆ ಮಾಡಬೇಕಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿರುವ ಸಿಎಂ ಯಡಿಯೂರಪ್ಪನವರು ಭತ್ತದ ಬೆಳೆ ಕಟಾವಿಗೆ ಬಂದಿರುವ ಸಮಯದಲ್ಲಿ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಿ ಖರೀದಿ ಕೇಂದ್ರ ತೆರೆಯುವುದಕ್ಕೆ ತುರ್ತು ಕ್ರಮ ವಹಿಸಲಿ ಎಂದು ಒತ್ತಾಯಿಸಿದ್ದಾರೆ.
-ಮಂಡ್ಯ ಮಂಜುನಾಥ್