ಎಂ. ರಮೇಶ್ ರೆಡ್ಡಿ ತೇಜಸ್ವಿನಿ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಣ ಮಾಡಿರುವ ಚಿತ್ರ ಪಡ್ಡೆಹುಲಿ. ಇದೀಗ ಪ್ರೇಕ್ಷಕರೆಲ್ಲರ ಗಮನ ಸೆಳೆದುಕೊಂಡಿರೋ ಈ ಚಿತ್ರ ಇದೇ ಏಪ್ರಿಲ್ ಹತ್ತೊಂಬತ್ತರಂದು ರಾಜ್ಯಾಧ್ಯಂತ ತೆರೆಕಾಣುತ್ತಿದೆ. ಈ ಸಿನಿಮಾ ಮೂಲಕವೇ ಶ್ರೇಯಸ್ ಎಂಬ ಮಾಸ್ ಹೀರೋ ಆಗಮನವಾಗುತ್ತಿದೆ.
ಗುರುದೇಶಪಾಂಡೆ ನಿರ್ದೇಶನ ಮಾಡಿರೋ ಈ ಚಿತ್ರ ಎಲ್ಲೆಡೆ ಸಕಾರಾತ್ಮಕವಾದ ಮಾತುಗಳಿಗೆ ಕಾರಣವಾಗಿದೆ. ಗುರುದೇಶಪಾಂಡೆ ಅವರ ಚಿತ್ರಗಳೆಂದ ಮೇಲೆ ಅಲ್ಲಿ ಚೆಂದದ ಕಥೆ ಇದ್ದೇ ಇರುತ್ತೆ. ಆದರೆ ಪಡ್ಡೆಹುಲಿಯ ಕಥೆಯ ವಿಚಾರದಲ್ಲಿರೋದು ಯಾರಿಗಾದರೂ ಮುದ ನೀಡುವಂಥಾ ವಿಶೇಷ.
ಪಡ್ಡೆಹುಲಿ ಚಿತ್ರದ ಕಥೆ ಏನು ಅನ್ನೋ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಈ ಬಗೆಗಿನ ಎಲ್ಲ ವಿಚಾರಗಳನ್ನು ಸಹಜವಾಗಿಯೇ ಚಿತ್ರತಂಡ ಗೌಪ್ಯವಾಗಿಟ್ಟಿದೆ. ಆದರೆ ಈ ಕಥೆಯ ಹಿಂದೆ ಸಾಹಸ ಸಿಂಹ ವಿಷ್ಣುವರ್ಧನ್ ಅವರ ನೆರಳಿದೆ. ಈ ಚಿತ್ರದಲ್ಲಿ ಶ್ರೇಯಸ್ ಪಡ್ಡೆಹುಲಿಯಾಗಿ, ಸಾಹಸ ಸಿಂಹನ ಅಭಿಮಾನಿಯಾಗಿ ನಟಿಸಿದ್ದಾರೆ. ಅಸಲಿಗೆ ಈ ಚಿತ್ರದ ಕಥಾ ಎಳೆಯನ್ನು ಹೇಳಿದ್ದದ್ದು ಕೂಡಾ ವಿಷ್ಣು ಅವರೇ!
ನಾಯಕ ಶ್ರೇಯಸ್ ಅವರ ತಂದೆ ಕೆ ಮಂಜು ಅವರು ಸಾಹಸ ಸಿಂಹನ ಆಪ್ತ ವಲಯದಲ್ಲಿದ್ದವರು. ಅವರು ವಿಷ್ಣು ಅಭಿಮಾನಿಯೂ ಹೌದು. ಹೀಗೇ ಒಂದು ದಿನ ಸಿನಿಮಾ ಬಗ್ಗೆ ಚರ್ಚೆ ನಡೆಸುತ್ತಿರುವಾಗ ಕೆ. ಮಂಜು ಅವರಿಗೆ ಕಾಲೇಜು ಬೇಸಿನ ಕಥಾ ಎಳೆಯೊಂದನ್ನು ಹೇಳಿದ್ದರಂತೆ. ಅದು ಆ ಕ್ಷಣವೇ ಇಷ್ಟವೂ ಆಗಿತ್ತಂತೆ. ಮಂಜು ತಮ್ಮ ಮಗನಿಗೆ ಗ್ರ್ಯಾಂಡದ್ ಎಂಟ್ರಿ ಕೊಡಿಸಲು ಕಥೆಯ ಹುಡುಕಾಟದಲ್ಲಿದ್ದಾಗ ನೆನಪಾದದ್ದು ವಿಷ್ಣು ಒಂದು ಕಾಲದಲ್ಲಿ ಹೇಳಿದ್ದ ಕಥೆ!
ಆ ಎಳೆಯನ್ನು ಮಂಜು ಅವರಿಂದ ತಿಳಿದುಕೊಂಡ ನಿರ್ದೇಶಕ ಗುರುದೇಶಪಾಂಡೆ ಅದನ್ನು ಅದ್ಭುತವಾಗಿ ವಿಸ್ತರಿಸಿದ್ದಾರಂತೆ. ಬಹುಶಃ ಬದುಕಿದ್ದಿದ್ದರೆ ವಿಷ್ಣುವರ್ಧನ್ ಕೂಡಾ ಈ ಸಿನಿಮಾ ನೋಡಿ ಥ್ರಿಲ್ ಆಗುತ್ತಿದ್ದರೆಂಬುದು ಚಿತ್ರತಂಡದ ಅಭಿಪ್ರಾಯ.