ಕೋಸ್ಟಲ್‌ವುಡ್ ಹಿರಿಮೆಗೆ ಮತ್ತೊಂದು ಗರಿ ಮೂಡಿದೆ. ತುಳುವಿನ ‘ಪಡ್ಡಾಯಿ’ ಈಗ ರಾಜ್ಯ ಮಟ್ಟದ ಪ್ರಶಸ್ತಿ ಪಡೆದುಕೊಂಡಿದೆ. 2017ನೇ ಸಾಲಿನ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪಟ್ಟಿಯಲ್ಲಿ ನಿತ್ಯಾನಂದ ಪೈ ನಿರ್ಮಾಣದ, ಅಭಯಸಿಂಹ ನಿರ್ದೇಶನದ ‘ಪಡ್ಡಾಯಿ’ ತುಳು ಸಿನೆಮಾ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.
ಅಂದಹಾಗೆ, ತುಳುವಿನ ನಾಲ್ಕನೇ ಸಿನೆಮಾ ‘ಬಿಸತ್ತಿ ಬಾಬು’ ರಾಜ್ಯದ 3ನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಮೊದಲ ತುಳು ಚಿತ್ರವಾಗಿತ್ತು. ಬಳಿಕ 6ನೇ ಕಪ್ಪು ಬಿಳುಪುವಿನ ಸಿನೆಮಾ ‘ಕೋಟಿ ಚೆನ್ನಯ’ವು ನಾಲ್ಕನೇ ಅತ್ಯುತ್ತಮ ಸಿನೆಮಾ ಎಂಬ ಗೌರವಕ್ಕೆ ಪಾತ್ರವಾಗಿತ್ತು. ಆ ಬಳಿಕ ಪ್ರಾದೇಶಿಕ ನೆಲೆಯಲ್ಲಿ ತುಳುವಿನ ಕೆಲವು ಸಿನೆಮಾಗಳಿಗೆ ಪ್ರಶಸ್ತಿ ಬಂದಿದ್ದರೂ, ಒಟ್ಟು ಸಿನೆಮಾದ ಪಟ್ಟಿಯಲ್ಲಿ ತುಳು ಸಿನೆಮಾಕ್ಕೆ ಸ್ಥಾನ ಸಿಕ್ಕಿರಲಿಲ್ಲ. ಹೀಗಾಗಿ ಪಡ್ಡಾಯಿಗೆ ಮೂರನೇ ಗೌರವ ದೊರೆತಂತಾಗಿದೆ.
ವಿಶೇಷವೆಂದರೆ ರಾಷ್ಟ್ರೀಯ ಅಂತಾರಾಷ್ಟ್ರೀಯ ಗೌರವ ಪಡೆದ ಪಡ್ಡಾಯಿಗೆ ರಾಜ್ಯದ ಗೌರವ ಘೋಷಣೆಯಾದ ಬಳಿಕ ಮತ್ತೊಂದು ಗುಡ್‌ನ್ಯೂಸ್ ಬಂದಿದೆ. ಅಂತಾರಾಷ್ಟ್ರೀಯವಾಗಿ ನಡೆಯುವ ಭಾರತೀಯ ಪನೋರಮಾ ಚಿತ್ರ ವಿಭಾಗದಲ್ಲಿ ಪಡ್ಡಾಯಿ ಆಯ್ಕೆಯಾಗಿದೆ.
ಇದಕ್ಕೂ ಮೊದಲು ‘ಪಡ್ಡಾಯಿ’ 65ನೇ ರಾಷ್ಟ್ರೀಯ ಪ್ರಾದೇಶಿಕ ಭಾಷಾ ವಿಭಾಗದಲ್ಲಿ ಅತ್ಯುತ್ತಮ ತುಳು ಸಿನೆಮಾ ಪ್ರಶಸ್ತಿ ಪಡೆದಿದೆ. ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ನಲ್ಲೂ ಪ್ರದರ್ಶನಗೊಂಡಿತ್ತು. ಡಾಕ್ ಸ್ಕೂಲ್ ಕ್ಲಿನಿಕ್ ಕಠ್ಮಂಡು ಬರವಣಿಗೆ ಕಾರ್ಯಾಗಾರ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ನ್ಯೂಯಾರ್ಕ್ ಭಾರತೀಯ ಚಲನಚಿತ್ರೋತ್ಸವ, ಇನ್ನೋವೇಟಿವ್ ಚಲನಚಿತ್ರೋತ್ಸವ, ಮೆಲ್ಬರ್ನ್ ಆಸ್ಟ್ರೇಲಿಯಾ ಚಲನಚಿತ್ರೋತ್ಸವ, ವಿಯನ್ನಾ ಆಸ್ಟ್ರಿಯಾ ಚಲನಚಿತ್ರೋತ್ಸವ, ಹ್ಯಾಬಿಟಾಟ್ ಚಲನಚಿತ್ರೋತ್ಸವ, ಜಾಗರಣ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿತ್ತು.
ಷೇಕ್ಸ್‌ಪಿಯರ್‌ನ ಮ್ಯಾಕ್‌ಬೆತ್ ನಾಟಕದಿಂದ ಸ್ಫೂರ್ತಿ ಪಡೆದ ಚಿತ್ರ ಇದಾಗಿದ್ದು, ಕಥೆಯನ್ನು ಕರಾವಳಿಯ ಮೊಗವೀರರ ಜೀವನಕ್ಕೆ ಒಗ್ಗಿಸಿ, ವಿಶಿಷ್ಟ ನಿರೂಪಣೆಯೊಂದಿಗೆ ನಿರ್ಮಿಸಲಾಗಿದೆ. ಉಜ್ವಲ ಬದುಕಿನ ಕನಸುಗಳನ್ನು, ಶ್ರೀಮಂತಿಕೆಯ ಕನವರಿಕೆ ಕಾಣುತ್ತಿರುವ ಗಂಡ- ಹೆಂಡತಿ ಸಂಬಂಧದೊಳಗೆ ಆಸೆಯ ಭಾವ ಮೂಡಿ, ಮನಸು ತಲ್ಲಣಗೊಂಡು ಕ್ರೂರತನದೊಂದಿಗೆ ಪರ್ಯವಸನಗೊಳ್ಳುವುದೇ ‘ಪಡ್ಡಾಯಿ’. ಇಲ್ಲಿ ಯಕ್ಷಗಾನ, ಹಳ್ಳಿಯ ಸೊಗಡು, ಮೀನುಗಾರಿಕಾ ಕುಟುಂಬ, ದೈವ ದೇವರ ನಂಬಿಕೆ ಹೀಗೆ ಕರಾವಳಿಯ ನಾಡಿಮಿಡಿತವಿದೆ.
19712ರಲ್ಲಿ ತೆರೆಕಂಡ ಆರೂರು ಪಟ್ಟಾಭಿನಿರ್ದೇಶನದ “ಬಿಸತ್ತಿ ಬಾಬು’ ನೆಮಾವು ಮೊದಲ ಬಾರಿಗೆ ಕರ್ನಾಟಕ ರಾಜ್ಯ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಕೂಡ ಲಭಿಸಿದೆ. ಸೋಮಶೇಖರ್ ಪುತ್ರನ್, ಕೆ.ಎನ್. ಟೇಲರ್, ಬಾಲಕೃಷ್ಣ ಕದ್ರಿ, ರಾಮಚಂದ್ರ ಕೂಳೂರು, ಲೀಲಾವತಿ, ಹೇಮಲತಾ, ಶಶಿಕಲಾ, ಸೀತಾ ಟೀಚರ್ ಮುಖ್ಯ ತಾರಾಗಣದ ಈ ಸಿನೆಮಾ ಬಾಡಿಗೆ ಗಂಡನಿಂದ ಸಂಸಾರದ ಗೊಂದಲ ನಿವಾರಣೆಯ ಕಥೆಯಾಧಾರಿತವಾಗಿತ್ತು. ಇನ್ನು 1973ರಲ್ಲಿ ವಿಶುಕುಮಾರ್ ನಿರ್ದೇಶನದ ‘ಕೋಟಿ ಚೆನ್ನಯ’ ಸಿನೆಮಾ 1973-74ನೇ ವರ್ಷದ ರಾಜ್ಯದ ನಾಲ್ಕನೇ ಅತ್ಯುತ್ತಮ ಚಲನಚಿತ್ರ ಪುರಸ್ಕಾರ ಪಡೆದಿತ್ತು. ಸುಭಾಷ್, ವಾಮನ್‌ರಾಜ್, ಭೋಜರಾಜ್, ಫೈಟರ್ ಶೆಟ್ಟಿ, ಆನಂದ ಗಾಣಿಗ, ಚೆನ್ನಪ್ಪ ಸುವರ್ಣ, ಮಂಜುನಾಥ, ಕಲ್ಪನಾ ಮುಂತಾದವರ ತಾರಾಗಣದ ಈ ಸಿನೆಮಾವು ಅಮರ ವೀರರ ಜೀವನ ಇತಿಹಾಸವನ್ನು ಬಣ್ಣಿಸಿತ್ತು. ಎಕ್ಕಸಕ ಎಕ್ಕಸಕ ಹಾಡು ಈ ಸಿನೆಮಾದ ಮೂಲಕವೇ ಪ್ರಸಿದ್ಧಿಯನ್ನು ಪಡೆದಿತ್ತು. ಈಗ ಮೂರನೇ ಗೌರವವನ್ನು ಪಡ್ಡಾಯಿ ಪಡೆದುಕೊಂಡಿದೆ ಎಂದು ನೆನಪಿಸಿಕೊಳ್ಳುತ್ತಾರೆ ತಮ್ಮ ಲಕ್ಷ್ಮಣ.
ದಿನೇಶ್ ಇರಾ