Advertisement
ಈ ಪಾದಯಾತ್ರೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇರವಾಗಿ ಅಡ್ಡಗಾಲು ಹಾಕಿದರೆ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನಡೆಯನ್ನು ಒಪ್ಪದ ಬಿಜೆಪಿ ನಾಯಕರು ಆಂತರಿಕವಾಗಿ ತಡೆಯೊಡ್ಡಿದ್ದಾರೆನ್ನಲಾಗಿದೆ. ಪಾದಯಾತ್ರೆ ನಡೆಸಬೇಕೋ, ಬೇಡವೋ ಎಂಬುದನ್ನು ಅಂತಿಮವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ನಿರ್ಧರಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಈ ಸಂಬಂಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ 2 ದಿನಗಳಿಂದ ದಿಲ್ಲಿಯಲ್ಲೇ ಬೀಡುಬಿಟ್ಟಿದ್ದು, ವರಿಷ್ಠರ ಒಪ್ಪಿಗೆ ಪಡೆಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ.
ಬಿಜೆಪಿ ಹಾಗೂ ಜೆಡಿಎಸ್ ಮೂಲಗಳ ಪ್ರಕಾರ ಪ್ರೀತಮ್ ಗೌಡ ಅವರನ್ನು ಗುರಿಯಾಗಿಸಿಕೊಂಡು ಕೇಂದ್ರ ಸಚಿವ ಕುಮಾರಸ್ವಾಮಿ ಕಿಡಿಕಾರಿದರೂ ಪಾದಯಾತ್ರೆ ವಿಚಾರದಲ್ಲಿ ತಮ್ಮನ್ನು ಬಿಜೆಪಿ ನಾಯಕರು ನಿರ್ಲಕ್ಷಿಸಿದ್ದಾರೆ ಎಂದು ರಾಷ್ಟ್ರೀಯ ನಾಯಕರ ಬಳಿ ಅತೃಪ್ತಿ ತೋಡಿಕೊಂಡಿದ್ದಾರೆ. ಬೆಂಗಳೂರಿನಿಂದ ಮೈಸೂರಿನವರೆಗೆ ಬಿಜೆಪಿಗಿಂತ ಜೆಡಿಎಸ್ ಪ್ರಭಾವ ಹೆಚ್ಚಿದೆ. ಆದರೆ, ಈ ಭಾಗದಲ್ಲಿ ಪಾದಯಾತ್ರೆ ನಡೆಸುವುದಕ್ಕೆ ಮುನ್ನ ತಮ್ಮನ್ನು ನೆಪ ಮಾತ್ರಕ್ಕೂ ಸಂಪರ್ಕಿಸದೇ ನಿರ್ಣಯ ತೆಗೆದುಕೊಂಡಿದ್ದಾರೆ. ನಿರ್ಧಾರ ತೆಗೆದುಕೊಂಡ ಬಳಿಕ ಸಮನ್ವಯ ಸಭೆಗೆ ಆಹ್ವಾನ ನೀಡಿದ್ದು, ಅಲ್ಲಿಯೂ ಸರಿಯಾಗಿ ನಡೆಸಿಕೊಂಡಿಲ್ಲ. ಸ್ವಾಗತ ಭಾಷಣ ಕೋರುವಾಗಲೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬಳಿಕ ವಿಜಯೇಂದ್ರ ಹೆಸರನ್ನು ಪ್ರಸ್ತಾವಿಸಿ ಕುಮಾರಸ್ವಾಮಿಯವರ ಹಿರಿತನವನ್ನು ನಿರ್ಲಕ್ಷಿಸಲಾಗಿದೆ ಎಂಬುದು ಅಸಮಾಧಾನಕ್ಕೆ ಕಾರಣವಾಗಿದೆ.
Related Articles
Advertisement
ಬಿಜೆಪಿ ಬಣ ರಾಜಕೀಯ ಪ್ರಭಾವ?:ಇನ್ನೊಂದೆಡೆ ಬಿಜೆಪಿಯ ಬಣ ರಾಜಕಾರಣವೂ ಇಲ್ಲಿ ಕೆಲಸ ಮಾಡಿದೆ. ಒಕ್ಕಲಿಗರ ಪ್ರಾಬಲ್ಯ ಇರುವ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸುವಾಗ ಪಕ್ಷದ ಪ್ರಭಾವಿ ಒಕ್ಕಲಿಗ ಮುಖಂಡರ ಜತೆಗೆ ಸಮಾಲೋಚನೆ ನಡೆಸಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಕುಮಾರಸ್ವಾಮಿಯ ರೀತಿ ಬಿಜೆಪಿ ನಾಯಕರಿಂದಲೂ ವಿಜಯೇಂದ್ರ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಕೇವಲ ತಮ್ಮೇಶ್ ಗೌಡ, ಪ್ರೀತಮ್ ಗೌಡ ಹಾಗೂ ರುದ್ರೇಶ್ ಅವರ ಸಲಹೆ ಆಧರಿಸಿ ಇಂಥ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್ ಅವರಿಗೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ. ಒಟ್ಟಾರೆಯಾಗಿ ಕಾಂಗ್ರೆಸ್ ವಿರುದ್ಧ ಪ್ರಯೋಗಿಸಿದ ಅಸ್ತ್ರ ಮೈತ್ರಿ ಪಡೆಯಲ್ಲೇ ಅಸಮಾಧಾನದ ಜ್ವಾಲಾಮುಖೀಯನ್ನು ಸ್ಫೋಟಿಸಿದೆ. ದಿಲ್ಲಿಯಲ್ಲೇ ವಿಜಯೇಂದ್ರ
ಇದೆಲ್ಲದರ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಎಲ್ಲ ವಿದ್ಯಮಾನಗಳ ಬಗ್ಗೆ ಅವರು ವಿವರಣೆ ನೀಡಿದ್ದು, ಪಾದಯಾತ್ರೆ ಮುಂದುವರಿಸುವುದಕ್ಕೆ ಹಾಗೂ ಸಮಾರೋಪ ಸಭೆಗೆ ಬರುವಂತೆ ಆಹ್ವಾನವನ್ನು ನೀಡಿದ್ದಾರೆ. ಆದರೆ, ಪಾದಯಾತ್ರೆ ಮುಂದುವರಿಸಬೇಕೋ, ಬೇಡವೋ ಎಂಬ ಬಗ್ಗೆ ವರಿಷ್ಠರು ಇನ್ನೂ ಅನುಮತಿ ನೀಡಿಲ್ಲ. ತಡರಾತ್ರಿ ನಡೆಯುವ ಸಭೆಯಲ್ಲಿ ಈ ವಿಚಾರ ಇತ್ಯರ್ಥವಾಗಬಹುದೆಂದು ಬಿಜೆಪಿ ಮೂಲಗಳು ತಿಳಿಸಿವೆ. ಬಿಜೆಪಿಯಲ್ಲಿನ ಅಪಸ್ವರಕ್ಕೆ ಕಾರಣವೇನು ?
– ಪಾದಯಾತ್ರೆ ಬ್ರಹ್ಮಾಸ್ತ್ರವೇ ವಿನಾ ಆರಂಭದಲ್ಲೇ ಬಳಸುವುದಲ್ಲ.
– ವೈಯಕ್ತಿಕವಾಗಿ ತೀರ್ಮಾನಿಸಿ ಪಕ್ಷದ ಒಪ್ಪಿಗೆ ಪಡೆಯುವ ಪ್ರಯತ್ನ
– ಶಾಸಕಾಂಗ ಪಕ್ಷದ ಸಭೆಯಲ್ಲೂ ಪ್ರಸ್ತಾವಿಸದೇ ಇರುವುದು
– ಇದು ವಿಜಯೇಂದ್ರ ಅವರ ವೈಯಕ್ತಿಕ ತೀರ್ಮಾನ ಎಂಬ ಆಕ್ಷೇಪ
– ವರಿಷ್ಠರ ಜತೆಗೂ ಸಮಾಲೋಚನೆ ಮಾಡಿಲ್ಲ
– ಹಿರಿಯರನ್ನು ಬಿಟ್ಟು ತಮ್ಮೇಶ, ರುದ್ರೇಶ, ಪ್ರೀತಮ್‌ಗೆ ಮಾತ್ರ ಆದ್ಯತೆ
– ಕೋರ್ ಕಮಿಟಿಯ ಸದಸ್ಯರಲ್ಲದವರ ನಿರ್ದೇಶನದ ಮೇರೆಗೆ ತೀರ್ಮಾನ ಜೆಡಿಎಸ್ ಆಕ್ಷೇಪಕ್ಕೆ ಕಾರಣವೇನು ?
– ಪಾದಯಾತ್ರೆ ಪ್ರಚಾರ ಸಾಮಗ್ರಿಯಲ್ಲಿ ಜೆಡಿಎಸ್ ಉಲ್ಲೇಖವೇ ಇಲ್ಲ.
– ಜೆಡಿಎಸ್ ಬೆಲ್ಟ್ ನಲ್ಲಿ ಕುಮಾರಸ್ವಾಮಿ ನಿರ್ಲಕ್ಷ್ಯ
– ದಿನಾಂಕ ಮುಂದೂಡುವಂತೆ ಮಾಡಿದ ಮನವಿಗೆ ಬಾರದ ಸ್ಪಂದನೆ
– ಪ್ರೀತಮ್ ಗೌಡಗೆ ನೀಡುತ್ತಿರುವ ಅತಿ ಆದ್ಯತೆ
– ಜೆಡಿಎಸ್ ಶಾಸಕರ ನೇರ ಸಂಪರ್ಕ
– ದೊಡ್ಡ ಕಾರ್ಯಕ್ರಮಕ್ಕೆ ಸಮನ್ವಯ ಸಮಿತಿಯನ್ನೂ ಮಾಡದೇ ಅವಗಣನೆ
– ಮುಡಾ ಹೋರಾಟ ಬೇಡ ಎಂಬ ಜೆಡಿಎಸ್ ನಾಯಕರ ಒಳ ಒತ್ತಾಯ