Advertisement

ಪದ್ಯಾಣ ಗಣಪತಿ ಭಟ್ಟ  ಅವರಿಗೆ  ದಿ|ಶೀನಪ್ಪ ಭಂಡಾರಿ ಯಕ್ಷ ಪುರಸ್ಕಾರ

06:40 AM Aug 06, 2017 | |

ಪುತ್ತೂರು: ಯಕ್ಷಗಾನವು ಜಾತಿ, ವರ್ಗ, ಅಂತಸ್ತು, ಪ್ರತಿಷ್ಠೆಗಳನ್ನು ಮೀರಿದ ಕಲೆ. ಭಾಷೆಯೊಂದರ ಶುದ್ಧತೆಯಲ್ಲಿ ಯಕ್ಷಗಾನದ ಕೊಡುಗೆ ಅಪಾರ ಎಂದು ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಹೇಳಿದರು.

Advertisement

ದಿ| ಪುತ್ತೂರು ಶೀನಪ್ಪ ಭಂಡಾರಿ ಪ್ರತಿಷ್ಠಾನವು ಶನಿವಾರ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಆಯೋಜಿಸಿದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೀರ್ತಿಶೇಷ ಶೀನಪ್ಪ ಭಂಡಾರಿ ಅವರು ಯಕ್ಷಗಾನವನ್ನು ಹಳ್ಳಿಗಳಿಗೆ ಒಯ್ದ ಸಾಹಸಿ. ಅವರ ಪರಂಪರೆಯನ್ನು ಅವರ ಚಿರಂಜೀವಿ ಶ್ರೀಧರ ಭಂಡಾರಿ ಮುಂದುವರಿಸುತ್ತಿದ್ದಾರೆ. ಅವರದು ಸಮರ್ಪಿತ ಕಲಾ ಬದುಕು ಎಂದು ಹೇಳಿದರು.

ಪ್ರಶಸ್ತಿ ಪ್ರದಾನ
ಹಿರಿಯ ಯಕ್ಷಗಾನ ಭಾಗವತ, ಗಾನಗಂಧರ್ವ ಪದ್ಯಾಣ ಗಣಪತಿ ಭಟ್ಟ ಅವರಿಗೆ ದಿ| ಶೀನಪ್ಪ ಭಂಡಾರಿ ನೆನಪಿನ ಗೌರವವನ್ನು ಪ್ರದಾನ ಮಾಡಲಾಯಿತು. ಶಾಲು, ಹಾರ, ಹಣ್ಣುಹಂಪಲು, ಗುಣಕಥನ ಫಲಕವನ್ನು ನಿಧಿಯೊಂದಿಗೆ ಸಮರ್ಪಿಸಲಾಯಿತು. ಪದ್ಯಾಣ ಶೀಲಾ ಗಣಪತಿ ಭಟ್ಟರನ್ನು ಉಷಾ ಶ್ರೀಧರ ಭಂಡಾರಿ ಗೌರವಿಸಿದರು.

ಸಮ್ಮಾನ
ಈ ಸಂದರ್ಭದಲ್ಲಿ ಡಾ| ಶ್ರೀಧರ ಭಂಡಾರಿ ನೇತೃತ್ವದ ಶ್ರೀ ಮಹಾಲಿಂಗೇಶ್ವರ ಪ್ರವಾಸಿ ಯಕ್ಷಗಾನ ಮಂಡಳಿಯ 27ನೇ ವರ್ಷದ ತಿರುಗಾಟದ ಸಂಭ್ರಮದ ಪ್ರಯುಕ್ತ ಮಂಡಳಿಯಲ್ಲಿ ಬಹುಕಾಲ ಕಲಾವಿದರಾಗಿ ಸಹಕರಿಸಿದವರನ್ನು ಸಮ್ಮಾನಿಸಲಾಯಿತು. ಬಂಟ್ವಾಳ ಜಯರಾಮ ಆಚಾರ್ಯ, ಜಗನ್ನಾಥ ಶೆಟ್ಟಿ ಪೆರ್ಲ, ಚಂದ್ರಶೇಖರ ಧರ್ಮಸ್ಥಳ, ಕೆ. ದಿವಾಕರ ರೈ ಸಂಪಾಜೆ, ವಾಮನ ಕುಮಾರ್‌ ವೇಣೂರು, ಪ್ರಜ್ವಲ ಕುಮಾರ್‌ ಗುರುವಾಯನಕೆರೆ, ವಸಂತಕುಮಾರ್‌ ವಾಮದಪದವು ಅವರನ್ನು ಗಣ್ಯರು ಸಮ್ಮಾನಿಸಿದರು.

Advertisement

ವೇದಿಕೆಯಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ, ಕರುಣಾಕರ ರೈ, ನಾರಾಯಣ ಭಟ್‌ ಕೋಳ್ಯೂರು, ರಮಾನಂದ ನೆಲ್ಲಿತ್ತಾಯ, ಗೋಪಾಲಕೃಷ್ಣ ಭಟ್‌, ಶೇಖರ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

ಡಾ| ಶ್ರೀಧರ ಭಂಡಾರಿ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ರಮಾನಂದ ನೆಲ್ಲಿತ್ತಾಯ ಶಿಶಿಲ ವಂದಿಸಿದರು. ಕಲಾವಿದ, ಅಂಕಣಕಾರ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next