Advertisement

ಆರ್ಥಿಕತೆ ಹಳಿಗೆ ತರಲು ಕೇಂದ್ರದಿಂದ ಪ್ಯಾಕೇಜ್‌ ಕಸರತ್ತು

02:02 AM Jun 30, 2021 | Team Udayavani |

ದೇಶದಲ್ಲಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿರುವ ಸಂದರ್ಭದಲ್ಲಿ ಮತ್ತು ಕೊರೊನಾ ನಿರೋಧಕ ಲಸಿಕೆ ನೀಡಿಕೆ ಪ್ರಕ್ರಿಯೆ ತೀವ್ರಗತಿಯಲ್ಲಿ ಸಾಗಿರುವಂತೆಯೇ ಕೇಂದ್ರ ಸರಕಾರ ದೇಶದ ಒಟ್ಟಾರೆ ಆರ್ಥಿಕ ವ್ಯವಸ್ಥೆಯನ್ನು ಮರಳಿ ಹಳಿಗೆ ತರುವ ಪ್ರಯತ್ನಕ್ಕೆ ಮುಂದಾಗಿದೆ. ಕೊರೊನಾ ಹೊಡೆತದಿಂದ ಸಂಕಷ್ಟಕ್ಕೀಡಾಗಿರುವ ವಿವಿಧ ವಲಯಗಳ ಪುನಶ್ಚೇತನದ ನಿಟ್ಟಿನಲ್ಲಿ ಕೇಂದ್ರ ಸರಕಾರ ಮತ್ತೂಂದು ಸುತ್ತಿನ ಆರ್ಥಿಕ ಪ್ಯಾಕೇಜ್‌ ಘೋಷಿಸಿದೆ. ಕಳೆದ ಬಾರಿಯ ಪ್ಯಾಕೇಜ್‌ನಿಂದ ಹೊರಗುಳಿದಿದ್ದ ಕೆಲವೊಂದು ಮಹತ್ವದ ಕ್ಷೇತ್ರಗಳಿಗೆ ಈ ಬಾರಿಯ ಪ್ಯಾಕೇಜ್‌ನಲ್ಲಿ ಹಣಕಾಸು ಸಚಿವರು ಆದ್ಯತೆ ನೀಡಿದ್ದು ಹಣಕಾಸು ನೆರವು ಒದಗಿಸಿದ್ದಾರೆ.

Advertisement

ಕೊರೊನಾ ಎರಡನೇ ಅಲೆ ವೈದ್ಯಕೀಯ ತಜ್ಞರು ಮತ್ತು ಸರಕಾರದ ನಿರೀಕ್ಷೆಗೂ ಮೀರಿ ಹಾನಿ ಉಂಟು ಮಾಡಿದ್ದರ ಪರಿಣಾಮ ದೇಶದ ಇಡೀ ಅರ್ಥ ವ್ಯವಸ್ಥೆ ಕಂಗೆಟ್ಟಿದೆ. ಕಳೆದ ಬಾರಿಯಂತೆ ಈ ಬಾರಿ ಕೇಂದ್ರ ಸರಕಾರ ದೇಶಾದ್ಯಂತ ಲಾಕ್‌ಡೌನ್‌ ಘೋಷಿಸದಿದ್ದರೂ ಪರಿಸ್ಥಿತಿಗನುಗುಣವಾಗಿ ನಿರ್ಬಂಧ, ಲಾಕ್‌ಡೌನ್‌ ಹೇರುವ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಆಯಾಯ ರಾಜ್ಯ ಸರಕಾರಗಳಿಗೆ ವಹಿಸಿತ್ತು. ಆದರೆ ಕೊರೊನಾ ಎರಡನೇ ಅಲೆ ದೇಶದ ಬಹುತೇಕ ರಾಜ್ಯಗಳನ್ನು ಇನ್ನಿಲ್ಲದಂತೆ ಕಾಡಿದ ಪರಿಣಾಮ ರಾಜ್ಯಗಳು ಲಾಕ್‌ಡೌನ್‌, ಕಠಿನ ನಿರ್ಬಂಧಗಳಿಗೆ ಶರಣಾದವು. ಇದರಿಂದಾಗಿ ಎಲ್ಲ ವಾಣಿಜ್ಯ ಚಟುವಟಿಕೆಗಳು ಸ್ತಬ್ಧಗೊಂಡವಲ್ಲದೆ ಜನಜೀವನ ಸ್ಥಗಿತಗೊಂಡಿತು. ಇದರ ಪರಿಣಾಮ ಬಹುತೇಕ ವಲಯಗಳು ಭಾರೀ ನಷ್ಟ ಅನುಭವಿಸು ವಂತಾಯಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಇದೀಗ ಮತ್ತೆ 6.28ಲಕ್ಷ ಕೋಟಿ ರೂ.ಗಳ ಪ್ಯಾಕೇಜ್‌ ಘೋಷಿಸಿದ್ದು ವೈದ್ಯಕೀಯ ಮೂಲಸೌಕರ್ಯ, ಪ್ರವಾಸೋದ್ಯಮ, ಸಣ್ಣ ಸಾಲಗಾರರಿಗೆ ಹಣಕಾಸಿನ ನೆರವು ನೀಡುವ ಭರವಸೆ ನೀಡಿದೆ.

ಆತ್ಮನಿರ್ಭರ ಭಾರತ್‌ ಪ್ಯಾಕೇಜ್‌ನಡಿಯಲ್ಲಿ ಘೋಷಿಸಲಾಗಿರುವ ತುರ್ತು ಸಾಲ ಖಾತ್ರಿ ಯೋಜನೆಯ ಮೊತ್ತದಲ್ಲಿ ಹೆಚ್ಚಳ, ಎಲ್ಲ ಹಳ್ಳಿಗಳಿಗೂ ಬ್ರಾಡ್‌ಬ್ಯಾಂಡ್‌ ಸಂಪರ್ಕ ಕಲ್ಪಿಸಲು ಹಣಕಾಸು ನೆರವು, ಉಚಿತ ಆಹಾರಧಾನ್ಯ ವಿತರಣೆಗಾಗಿ 93,869 ಕೋ. ರೂ. ಮೀಸಲು, ರೋಜ್‌ಗಾರ್‌ ಯೋಜನೆ, ವೇತನ ಸಬ್ಸಿಡಿ ಸೌಲಭ್ಯವನ್ನು ವಿಸ್ತರಿಸಲು ನಿರ್ಧರಿಸಿದೆ.

ಈ ಆರ್ಥಿಕ ಪ್ಯಾಕೇಜ್‌ ನಷ್ಟದಲ್ಲಿರುವ ವಲಯಗಳ ಚೇತರಿಕೆಗೆ ಅವಕಾಶ ಕಲ್ಪಿಸಿಕೊಡಲಿದೆ ಎಂಬ ನಿರೀಕ್ಷೆ ಸರಕಾರದ್ದಾಗಿದೆ. ಆರೋಗ್ಯ ಕ್ಷೇತ್ರ ಎದುರಿಸುತ್ತಿರುವ ಮೂಲ ಸೌಕರ್ಯಗಳ ಕೊರತೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ಇತ್ತ ಹೆಚ್ಚಿನ ಪ್ರಮಾಣದಲ್ಲಿ ಹಣಕಾಸು ನೆರವನ್ನು ನೀಡುತ್ತಲೇ ಬಂದಿದೆ. ಇದರ ಜತೆಯಲ್ಲಿ ದೇಶದ ಒಟ್ಟಾರೆ ಆರ್ಥಿಕ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನವಾಗಿ ಕೊರೊನಾದಿಂದ ಸಂಕಷ್ಟಕ್ಕೀಡಾಗಿರುವ ವಲಯ ಗಳನ್ನು ಗುರುತಿಸಿ ಅವುಗಳಿಗೆ ವಿವಿಧ ತೆರನಾದ ಹಣಕಾಸು ನೆರವನ್ನು ಒದಗಿಸಿದೆ. ಇದು ಕೇವಲ ಆಯಾಯ ವಲಯಗಳನ್ನು ನಷ್ಟದಿಂದ ಪಾರು ಮಾಡಿ ಅವುಗಳನ್ನು ಮತ್ತೆ ಸಹಜ ಸ್ಥಿತಿಗೆ ತರುವುದಕ್ಕೆ ಸೀಮಿತ ವಾಗಿರದೇ ಒಂದರ್ಥದಲ್ಲಿ ಸರಕಾರ ತನ್ನ ಬೊಕ್ಕಸವನ್ನು ತುಂಬಿಕೊಳ್ಳಲು ಮಾಡುತ್ತಿರುವ ಹೂಡಿಕೆ ಎಂದೇ ಪರಿಗಣಿಸಲಾಗಿದೆ. ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಕೇಂದ್ರ ಸರಕಾರ ಈ ಪ್ಯಾಕೇಜ್‌ಗಳ ಮೂಲಕ ನಷ್ಟದಲ್ಲಿರುವ ವಲಯಗಳಿಗೆ ಉತ್ತೇಜನ ನೀಡಿ ಅವುಗಳನ್ನು ಪುನಶ್ಚೇತ ನಗೊಳಿಸಿ ತನ್ನ ಆದಾಯವನ್ನು ವೃದ್ಧಿಸಿಕೊಳ್ಳಲು ಮಾಡುತ್ತಿರುವ ಆರ್ಥಿಕ ಕಸರತ್ತು ಅಲ್ಲದೆ ಮತ್ತೇನಲ್ಲ. ಈ ಎಲ್ಲ ಆರ್ಥಿಕ ನೆರವು ಅರ್ಹ ಫ‌ಲಾನುಭವಿಗಳಿಗೆ ಲಭಿಸಿ, ಆಯಾಯ ವಲಯಗಳು ಚೇತರಿಕೆ ಕಂಡಲ್ಲಿ ಸರಕಾರದ ನಿರೀಕ್ಷೆಯೂ ಈಡೇರುವುದರಲ್ಲಿ ಸಂಶಯವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next