ಶಿರಸಿ: ಕಾಶ್ಮೀರದಿಂದ ಕರ್ನಾಟಕದಿಂದ, ನರೇಂದ್ರ ಮೋದಿಯಿಂದ ಬೊಮ್ಮಾಯಿ ತನಕ ಪ್ಯಾಕೇಜ್ ಘೋಷಿಸುತ್ತಾರೆ. ಅವರಿಗೆ ಇದೊಂದು ಫ್ಯಾಷನ್ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿ ಪ್ರಸಾದ್ ವಾಗ್ದಾಳಿ ನಡೆಸಿದರು.
ಅವರು ಸೋಮವಾರ ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ನೆರೆ ಹಾವಳಿಗೆ 20 ಲಕ್ಷ ಕೋಟಿ ಪಿಎಂ ಕೇರ್ ಹಣ ಇದೆ. ಆದರೆ, ಅದರ ಲೆಕ್ಕಕೊಟ್ಟಿಲ್ಲ. ಎಷ್ಟು ಎಲ್ಲಿಗೆ ಕೊಟ್ಟಿದ್ದಾರೆ ಎಂದು ಹೇಳಬೇಕು. ಪಿಎಂಕೇರ್ ಎಂದರೆ ಹಬ್ಬಕ್ಕೆ ಕುಸುಂಬರಿ ಹಂಚಲು ಪಡೆಯುವ ದೇಣಿಗೆಯಲ್ಲ ಎಂದ ಅವರು, ಕರ್ನಾಟಕದಲ್ಲಿ ಭೂಕುಸಿತ ಆಗಿದೆ. ಮನೆ ಬಿದ್ದಿದೆ. ರಸ್ತೆ ಎಂದರೆ ಹೊಂಡಾಗುಂಡಿ. ಅದನ್ನೂ ಸರಿಮಾಡಿಲ್ಲ. ನೆರವು ಕೊಟ್ಟಿಲ್ಲ ಎಂದರು.
ರೈತರ, ಸಾಮಾನ್ಯ ವರ್ಗದ ಜನರ ಕಾಳಜಿ ಇಲ್ಲ. ರೈತ ಹೋರಾಟದಲ್ಲಿ 200 ಜನ ಸತ್ತರೂ ದಾಖಲೆ ಇಲ್ಲ ಎನ್ನುತ್ತಾರೆ. ರಾಷ್ಟ್ರೀಯ ಸಂಪತ್ತು ಮಾರಾಟ ಮಾಡುವ ಬಿಜೆಪಿಯು ದೇಶ ದ್ರೋಹಿಗಳಾ, ದೇಶ ಪ್ರೇಮಿಗಳಾ? ಎಂದು ಕೇಳಿದ ಅವರು, ಕಾಂಗ್ರೆಸ್ ಕಾರ್ಯಕ್ರಮ ಕೆಟ್ಟ ಕಾರ್ಯಕ್ರಮ ಎಂದು ಲೇವಡಿ ಮಾಡಿದವರು ಬಿಜೆಪಿಗರು. ಆದರೆ ಇಂದು ಉಳಿದ ಕ್ಷೇತ್ರದಲ್ಲಿ ತೀವ್ರ ಕಡಿತ ಆಗುತ್ತಿದ್ದಾಗ ಉದ್ಯೋಗ ಕೊಟ್ಟಿದ್ದು ನರೇಗಾ. 25 ಸಂಸದರು ಒಬ್ಬರೂ ಮೋದಿ ಭೇಟಿ ಮಾಡಿಲ್ಲ. ರಾಜ್ಯದ ಸಮಸ್ಯೆ ಹೇಳಿಲ್ಲ. ಇವೆಲ್ಲ ಗ್ರಾ.ಪಂ ಸದಸ್ಯರಿಗೆ ಗೊತ್ತಿದೆ. 13ಕ್ಕೆ 13 ಕಾಂಗ್ರೆಸ್ ಗೆಲ್ಲಲಿದೆ ಎಂದೂ ಹೇಳಿದರು.
ಇದನ್ನೂ ಓದಿ:ಸಿದ್ದೇಶ್ವರ ಶ್ರೀಗಳು ನಡೆದಾಡುವ ದೇವರು – ಬೊಮ್ಮಾಯಿ
ಯಡಿಯೂರಪ್ಪ ಅವರು ಐಸಿಯುದಲ್ಲಿ ಇದ್ದಾರೆ. ಕಾಂಗ್ರೆಸ್ ಬಗ್ಗೆ ಮಾತಾಡಿದರೆ ಬಿಎಸ್ ವೈಗೆ ಆಕ್ಸಿಜನ್ ಸಿಗುತ್ತದೆ. ಐಸಿಯುದಿಂದ ಹೊರಗೆ ಬಂದಾಗ ಅವರಿಗೆ ಕಾಂಗ್ರೆಸ್ ಸಾಮರ್ಥ್ಯಯ ಅರಿವಾಗುತ್ತದೆ ಎಂದರು.
ಯಲ್ಲಾಪುರ ಕಳಚೆ ಭೂ ಕುಸಿತ ಪ್ರದೇಶಕ್ಕೆ ಸಿಎಂ ಬಂದು ಪ್ಯಾಕೇಜ್ ಘೋಷಣೆ ಮಾಡಿದರೂ ಬಂದಿಲ್ಲ ಎಂದ ಅವರು, ಬಿಜೆಪಿ ಜನತಾ ದಳದ ಮೈತ್ರಿ ಹೇಗೆ ಅಂತ ಜನರೇ ನೋಡಿದಾರೆ. ಜೆಡಿಎಸ್ ಸೈದ್ದಾಂತಿಕ ಜಾತ್ಯಾತೀತ ಎನ್ನುವವರು ಈಗ ಅವರ ನಿಲುವು ಸ್ಪಷ್ಟಪಡಿಸಲಿ ಎಂದೂ ಹೇಳಿದರು.
ಆಪರೇಶನ್ ಕಮಲದ ಭೀಷ್ಮಾಚಾರ್ಯ ಯಡಿಯೂರಪ್ಪ ಅವರು ಪ್ರಪಂಚಕ್ಕೆ ದೊಡ್ಡ ಕೊಡುಗೆ ಕೊಟ್ಡಿದ್ದಾರೆ ಎಂದರು.
ಈ ವೇಳೆ ಪ್ರಮುಖರಾದ ಎಸ್.ಕೆ.ಭಾಗವತ್, ರವೀಂದ್ರ ನಾಯ್ಕ, ದೀಪಕ ದೊಡ್ಡೂರು, ಜಗದೀಶ ಗೌಡ ಇತರರಿದ್ದರು.