ಶ್ರೀರಂಗಪಟ್ಟಣ: ಅಸ್ಥಿ ವಿಸರ್ಜನೆಯ ಪ್ರಸಿದ್ಧ ಸ್ಥಳ ಪಶ್ಚಿಮವಾಹಿನಿ ಅಭಿವೃದ್ಧಿ ಕಾಮಗಾರಿ ಕಳೆದ 2013-14 ಸಾಲಿನಲ್ಲಿ ಪ್ರಾರಂಭಿಸಿ ಇಲ್ಲಿವರೆಗೆ ಕಾಮಗಾರಿ ಪೂರ್ಣಗೊಳ್ಳದೆ ಅರ್ಧಕ್ಕೆ ಮೊಟಕು ಗೊಂಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2013-14 ಸಾಲಿನಲ್ಲಿ ಪಶ್ಚಿಮವಾಹಿನಿ ಅಭಿವೃದ್ಧಿಗೆ ಆಗಿನ ಜಿಲ್ಲಾಧಿಕಾರಿ ಕೃಷ್ಣಯ್ಯ ಅವರು ಜಿಲ್ಲಾಧಿಕಾರಿಗಳ ಅನುದಾನದಲ್ಲಿ ಪ್ರವಾಸೋಧ್ಯಮ ಇಲಾಖೆಗೆ ನೇರವಾಗಿ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಈ ಸ್ಥಳ ಪುರಸಭಾ ವ್ಯಾಪ್ತಿಯಲ್ಲಿರುವುದರಿಂದ ಪುರಸಭೆ ಅಧಿಕಾರಿಗಳ ನೇತೃತ್ವದಲ್ಲಿ ಕಾಮಗಾರಿ ನಡೆಸಲು ಸೂಚಿಸಲಾಗಿತ್ತು. ಪಶ್ಚಿಮ ದಿಕ್ಕಿಗೆ ಹರಿಯುವ ಕಾವೇರಿ ನದಿ ಇದೊಂದು ವಿಶೇಷತೆ ಹೊಂದಿದ್ದು, ಯಾರೇ ದೇಶದ ಅತ್ಯುನ್ನತ ವ್ಯಕ್ತಿ ಮೃತಪಟ್ಟರು ಅವರ ಅಸ್ಥಿ ವಿಸರ್ಜನೆ ಇದೇ ಸ್ಥಳದಸಲ್ಲಿ ವಿಸರ್ಜನೆ ಮಾಡಲಾಗುತ್ತದೆ.
ಸ್ಮಾರಕ ಯಾವಾಗ?: ಈಗೆ ಮಹಾತ್ಮಗಾಂಧಿ, ಮಾಜಿ ಪ್ರಧಾನಿಗಳಾದ ಜವಹರ್‌ಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್‌ಗಾಂಧಿ, ವಾಜಪೇಯಿ, ಮೃತಪಟ್ಟಿರುವ ಹಲವಾರು ಮುಖ್ಯ ಮಂತ್ರಿಗಳ ಅಸ್ಥಿಗಳನ್ನು ನಾನಾ ಭಾಗದಿಂದ ಬಂದು ವಿಸರ್ಜನೆ ಮಾಡಲಾಗಿದೆ. ಮುಖ್ಯವಾಗಿ ಮಹಾತ್ಮಗಾಂಧಿ ಅಸ್ಥಿ ಬಿಟ್ಟ ಸ್ಥಳವಾಗಿರುವುದರಿಂದ ಗಾಂಧಿ ಸ್ಮಾರಕ ಮಾಡಲು ಹಿಂದಿನ ಸರ್ಕಾರ ಮುಂದಾಗಿತ್ತು.
ಅಭಿವೃದ್ಧಿ ಮರೀಚಿಕೆ: ಗಾಂಧಿ ಚಿತಾಭಸ್ಮ ಬಿಟ್ಟಿರುವು ದರಿಂದ ಈಗ ಕಾವೇರಿ ನದಿ ಪಕ್ಕದಲ್ಲೇ ಕಲ್ಲಿನಿಂದ ಕೆತ್ತಿರುವ ಒಂದು ಸ್ಮಾರಕವನ್ನು ನೆಡಲಾಗಿದೆ. ಅದಕ್ಕೆ ಈಗಲೂ ಪೂಜಾ ಕಾರ್ಯಗಳು ನಡೆಯುತ್ತಿದೆ. ಪ್ರಸ್ತುತ ಗಾಂಧಿ ಸ್ಮಾರಕ ನಿರ್ಮಾಣದ ಜೊತೆಗೆ ಪಶ್ಚಿಮ ವಾಹಿನಿ ಅಭಿವೃದ್ಧಿಗೆ ಬಿಡುಗಡೆಯಾದ ಹಣದಲ್ಲಿ ಸ್ಮಾರಕದ ಪಕ್ಕದಲ್ಲಿ ಮಕ್ಕಳ ಪಾರ್ಕ್, ಮಕ್ಕಳು ಆಟ ವಾಡಲು ಆಟದ ಉಪಕರಣ ನಿರ್ಮಾಣ, ಗಾಂಧಿ ಸ್ಮಾರಕ, ಸುತ್ತಲೂ ಸಮತಟ್ಟು ಮಾಡಿ ಬಂದ ಪ್ರವಾಸಿ ಗರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ನದಿಯ ದಡದಲ್ಲಿ ಸಣ್ಣ ಸಣ್ಣ ಸೇತುವೆ ನಿರ್ಮಾಣ, ರಸ್ತೆ ಅಭಿವೃದ್ಧಿ ಹೀಗೆ ಈ ಸ್ಥಳವನ್ನು ವಿವಿಧ ಆಯಾಮದಲ್ಲಿ ಅಭಿವೃದ್ಧಿ ಪಡಿಸಲು ಒಂದು ಕೋಟಿ ರೂ. ಅನುದಾನ ಬಳಕೆ ಮಾಡಲು ಸ್ವತಃ ಜಿಲ್ಲಾಧಿಕಾರಿ ಕಾಮಗಾರಿಗೆ ಚಾಲನೆ ನೀಡಿದ್ದರು.
ನಿರ್ಲಕ್ಷ್ಯ; ಗುತ್ತಿಗೆ ತೆಗೆದುಕೊಂಡ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಕಾಮಗಾರಿ ಅರ್ಧಕ್ಕೆ ಮೊಟಕುಗೊಂಡಿದೆ. ಅಲ್ಲದೆ ಯಾವುದೇ ಅಭಿವೃದ್ಧಿ ಇಲ್ಲದೆ ಗಿಡ ಗಂಟಿಗಳು ಬೆಳೆದು, ತ್ಯಾಜ್ಯವೆಲ್ಲಾ ತುಂಬಿಕೊಂಡು ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತು ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.