ಬಂಟ್ವಾಳ : ಪಶ್ಚಿಮ ವಾಹಿನಿ ಯೋಜನೆಯಲ್ಲಿ ಪುಚ್ಚೇರಿ ಮತ್ತು ಮೂಲರಪಟ್ನ ನಡುವೆ ಫಲ್ಗುಣಿ ನದಿಗೆ ಒಂದು ಡ್ಯಾಂ ಹಾಗೂ ಜಕ್ರಿಬೆಟ್ಟಿನಲ್ಲಿ ನೇತ್ರಾವತಿ ನದಿಗೆ ಇನ್ನೊಂದು ಡ್ಯಾಂ ರಚನೆ ಆಗಲಿದ್ದು ಅದರಲ್ಲಿ ಜನ ಸಂಚಾರ, ಲಘು ವಾಹನಗಳ ಸಂಚಾರಕ್ಕೂ ಅವಕಾಶ ಮಾಡಿಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ಅವರು ಜು. 18ರಂದು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬಿಜೆಪಿ ಕಾಯಕರ್ತರನ್ನು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹುಗ್ರಾಮ ಕುಡಿಯುವ ನೀರಿನ ಐದು ಯೋಜನೆಗಳಲ್ಲಿ ನರಿಕೊಂಬು ಗ್ರಾಮದ ಯೋಜನೆಗೆ ಮಂಜೂರಾತಿ ದೊರೆತಿದ್ದು ಶೀಘ್ರ ಶಿಲಾನ್ಯಾಸ ನಡೆಯಲಿದೆ. ಮಾಣಿ ಯೋಜನೆಗೆ ಈಗಾಗಲೆ ಚಾಲನೆ ದೊರೆತಿದೆ ಎಂದು ಸಚಿವರು ತಿಳಿಸಿದರು.
ಸೌಹಾರ್ದ ಸೇತುವೆ
ಕಡೇಶ್ವಾಲ್ಯದಲ್ಲಿ ನಿರ್ಮಿಸುವ ಎರಡು ಧಾರ್ಮಿಕ ಕೇಂದ್ರಗಳ ಸಂಪರ್ಕದ ಸೌಹಾರ್ದ ಸೇತುವೆಗೆ ಈಗಾಗಲೇ ಸಾಯಿಲ್ ಟೆಸ್ಟ್ ಆಗಿದೆ. ಬಂಟ್ವಾಳ ಪುರಸಭೆಯ 52 ಕೋ.ರೂ. ವೆಚ್ಚದ ಕುಡಿಯುವ ನೀರಿನ ಯೋಜನೆ ಅಂತಿಮ ಹಂತದಲ್ಲಿದೆ ಎಂದು ರಮಾನಾಥ ರೈ ತಿಳಿಸಿದರು.