Advertisement

ಮಂದಾರ ವ್ಯಾಪ್ತಿಯ ಬಾವಿ, ಬೋರ್‌ವೆಲ್ ಕಲುಷಿತಗೊಳಿಸಿದ ತ್ಯಾಜ್ಯ ನೀರು

12:47 AM Aug 17, 2019 | mahesh |

ಮಹಾನಗರ: ಪಚ್ಚನಾಡಿ ತ್ಯಾಜ್ಯರಾಶಿಯ ಗುಡ್ಡ ಜರಿದು ಮಂದಾರ ವ್ಯಾಪ್ತಿಯಲ್ಲಿ ಮನೆ-ಮರಗಳನ್ನು ಆಹುತಿ ಪಡೆದ ಘಟನೆ ಜೀವಂತವಾಗಿರುವಾಗಲೇ, ಇದೀಗ ಆ ಪರಿಸರದ ಬಾವಿ-ತೋಡುಗಳೆಲ್ಲ ಕೊಳಚೆ ನೀರಿನಿಂದ ಗಬ್ಬೆದ್ದು ಹೋಗಿದ್ದು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡಿದಂತಾಗಿದೆ.

Advertisement

ತ್ಯಾಜ್ಯರಾಶಿಯಿಂದ ಮೊದಲೇ ಸಂತ್ರಸ್ತ ರಾಗಿರುವ ಇಲ್ಲಿನ ಮನೆಮಂದಿ, ಮುಂದೆ ಗಲೀಜು ನೀರಿನಿಂದ ಇನ್ನೊಂದು ಸಮಸ್ಯೆ ಎದುರಿಸುವ ಆತಂಕ ಎದುರಾಗಿದೆ.

ಸದ್ಯ ಇಲ್ಲಿನ ಮನೆಮಂದಿಯನ್ನು ಕುಲಶೇಖರದ ಬೈತುರ್ಲಿಗೆ ಸ್ಥಳಾಂತರಿ ಸಲಾಗಿದ್ದರೂ ಈ ವ್ಯಾಪ್ತಿಯಲ್ಲಿ ಜನಸಂಚಾರ ಮಾತ್ರ ಪೂರ್ಣಮಟ್ಟದಲ್ಲಿ ನಿಂತಿಲ್ಲ. ತ್ಯಾಜ್ಯ ರಾಶಿಯನ್ನು ನೋಡಲು ಹಲವು ಜನರು ಕುತೂಹಲದಿಂದ ಬರುತ್ತಿದ್ದರೆ, ಜತೆಗೆ ಅಕ್ಕಪಕ್ಕದ ವಾರ್ಡ್‌ನವರು ಕೂಡ ಇದೇ ಪರಿಸರ ವ್ಯಾಪ್ತಿಯಿಂದ ಓಡಾಡುತ್ತಿರುವ ಪರಿಣಾಮ ಅವರ ಆರೋಗ್ಯದ ಮೇಲೆ ಪರಿಣಾಮ ಬೀಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕೊಳಚೆ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಸಾಧ್ಯತೆ ನಿಚ್ಚಳವಾಗಿದೆ.

ನೀರು ಕುಡಿಯುವಾಗ ಎಚ್ಚರ
ಇಲ್ಲಿಂದ ಹರಿಯುವ ತ್ಯಾಜ್ಯ ನೀರು ಮಂದಾರದ ಸುತ್ತಮುತ್ತಲಿನ ಹಲವು ಬಾವಿಗಳಿಗೆ ಸೇರುತ್ತಿದೆ. ಕೆಲವು ಬಾವಿಗಳಿಗೆ ನೇರವಾಗಿ ತ್ಯಾಜ್ಯನೀರು ಹರಿಯುತ್ತಿದ್ದರೆ, ಇನ್ನೂ ಕೆಲವು ಬಾವಿಗಳ ಸ್ವಚ್ಛ ನೀರು ಕೂಡ ಕಲುಷಿತವಾಗುವ ಭೀತಿಯಲ್ಲಿದೆ.

ತ್ಯಾಜ್ಯ ನೀರು ಭೂಮಿಯೊಳಗೆ ಹೋದರೆ ಅದು ಮಂದಾರ ಸಮೀಪದ ಬೋರ್‌ವೆಲ್ಗಳ ನೀರಿಗೂ ಕುತ್ತು ತರಲಿದೆ. ಹೀಗಾಗಿ ಮಂದಾರ ಮಾತ್ರ ವಲ್ಲದೆ ಸಮೀಪದ ಕಂಜಿರಾಡಿ, ಕುಂಜಿರಿಬಿತ್ತಿಲ್, ಕಂಬ, ಆಯರಮನೆ, ಸರಕೋಡಿ ಸಹಿತ ಹಲವು ಪ್ರದೇಶಗಳ ಮನೆಮಂದಿ ಬಾವಿ, ಬೋರ್‌ವೆಲ್ ನೀರು ಕುಡಿಯುವಾಗ ಎಚ್ಚರ ವಹಿಸುವುದು ಅತ್ಯಗತ್ಯ. ಸದ್ಯ ಮಂದಾರ ವ್ಯಾಪ್ತಿಗೆ ಮಹಾನಗರ ಪಾಲಿಕೆಯಿಂದ ವಿಶೇಷ ಪೈಪ್‌ಲೈನ್‌ ಮೂಲಕ ಕುಡಿಯುವ ನೀರಿನ ವ್ಯವಸ್ಥೆಯನ್ನು ಆಯುಕ್ತ ಮೊಹಮ್ಮದ್‌ ನಝೀರ್‌, ಮಾಜಿ ಮೇಯರ್‌ ಭಾಸ್ಕರ್‌ ಮಾಡಿಕೊಟ್ಟಿದ್ದಾರೆ.

Advertisement

ತಡೆಗೋಡೆ ಆಗಲ್ಲ; ಮಣ್ಣಿನ ರಾಶಿ ಮಾತ್ರ!
ಶುಕ್ರವಾರ ತ್ಯಾಜ್ಯ ಹರಿಯುವುದು ನಿಂತಿದೆಯಾದರೂ ಯಾವುದೇ ಕ್ಷಣದಲ್ಲಿ ಇಲ್ಲಿ ತ್ಯಾಜ್ಯರಾಶಿ ಮತ್ತಷ್ಟು ಮುಂದೆ ಹೋಗುವ ಅಪಾಯವೂ ಇದೆ. ಆದರೂ ತಾತ್ಕಾಲಿಕವಾಗಿ ತ್ಯಾಜ್ಯ ಮುಂದೆ ಹೋಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಇಲ್ಲಿನ ಗದ್ದೆಯಲ್ಲಿ ತಡೆಗೋಡೆ ನಿರ್ಮಿಸಲು ಪಾಲಿಕೆ ನಿರ್ಧರಿಸಿತ್ತು. ಆದರೆ ಸದ್ಯ ಗದ್ದೆಯಲ್ಲಿ ಬಂಡೆಕಲ್ಲುಗಳು ಇರುವ ಕಾರಣದಿಂದ ಪಾಲಿಕೆಯ ತಡೆಗೋಡೆ ಯೋಜನೆಗೆ ಸಮಸ್ಯೆ ಎದುರಾಗಿದೆ. ಹೀಗಾಗಿ ಗೋಡೆಯ ಬದಲು ಗದ್ದೆಯಲ್ಲಿ ಎತ್ತರವಾಗಿ ಮಣ್ಣುಹಾಕಲು ಈಗ ನಿರ್ಧರಿಸಲಾಗಿದೆ. ಈ ಮೂಲಕ ತ್ಯಾಜ್ಯ ಮುನ್ನುಗ್ಗದಂತೆ ಕ್ರಮ ಕೈಗೊಳ್ಳುವುದು ಇದರ ಉದ್ದೇಶ. ಆದರೆ ಹಲಸು-ಮಾವಿನ ಮರವನ್ನೇ ಬುಡಮೇಲು ಮಾಡಿದ ತ್ಯಾಜ್ಯರಾಶಿಗೆ ಮಣ್ಣಿನ ತಡೆಗೋಡೆ ತಡೆ ನೀಡಲು ಸಾಧ್ಯವೇ?ಎಂಬ ಪ್ರಶ್ನೆ ಎದುರಾಗಿದೆ.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಭೇಟಿ
ದ.ಕ. ಜಿಲ್ಲಾಡಳಿತದ ಮನವಿಯ ಮೇರೆಗೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಂಗಳೂರಿನ ಅಧಿಕಾರಿಗಳ ತಂಡ ಪಚ್ಚನಾಡಿಯ ಮಂದಾರ ಪರಿಸರಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದೆ. ತ್ಯಾಜ್ಯರಾಶಿ ಹರಡಿರುವ ಮಂದಾರದ ಸುತ್ತಮುತ್ತಲಿನ ಪ್ರದೇಶಕ್ಕೆ ಭೇಟಿ ನೀಡಿ ತ್ಯಾಜ್ಯದಿಂದ ಪರಿಸರದ ಮೇಲೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದರು. ಬಳಿಕ ದ.ಕ. ಜಿಲ್ಲಾಧಿಕಾರಿಗಳ ಜತೆಗೆ ಸಭೆ ನಡೆಸಿದ ಅವರು ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಅಂಶಗಳ ಬಗ್ಗೆ ಮಂಗಳೂರು ಪಾಲಿಕೆಗೆ ಸೂಚನೆಗಳನ್ನು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next