Advertisement

ಮಂಗಳೂರಿನ ಭೂಪಟದಿಂದ ಕಣ್ಮರೆ ಭೀತಿಯಲ್ಲಿ “ಮಂದಾರ’ಊರು!

08:23 PM Aug 12, 2019 | mahesh |

ಮಹಾನಗರ: ಒಂದೆಡೆ ಭಾರೀ ಮಳೆಯಿಂದ ಜಿಲ್ಲೆಯ ವಿವಿಧೆಡೆ ಅನಾಹುತಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ತೆಂಗು-ಕಂಗುಗಳ ಹಸುರ ಸಿರಿಯಿಂದ ಕಂಗೊಳಿಸುತ್ತಿದ್ದ ನಗರದ ಕುಡುಪು ಸಮೀಪದ “ಮಂದಾರ’ ಎಂಬ ಸುಂದರ ಪ್ರದೇಶ “ತ್ಯಾಜ್ಯ’ವೆಂಬ ಮಾನವ ಪ್ರಹಾರದಿಂದ ನಗರದ ಭೂಪಟದಿಂದಲೇ ಕಣ್ಮರೆಯಾಗುವುದೇ ಎಂಬ ಭೀತಿ ಕಾಡಿದೆ.

Advertisement

ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಿಂದ ತ್ಯಾಜ್ಯದ ರಾಶಿಯು ಸರಿಸುಮಾರು ಎರಡು ಕಿ.ಮೀ. ನಷ್ಟು ಉದ್ದಕ್ಕೆ ಜಾರಿಬಂದ ಕಾರಣದಿಂದ ಮಂದಾರ ವ್ಯಾಪ್ತಿಯ ಮನೆಗಳ ನಿವಾಸಿಗಳ ಬದುಕು ಬೀದಿಗೆ ಬಿದ್ದಿದ್ದು-ಸುದೀರ್ಘ‌ ವರ್ಷದಿಂದ ನೆಲೆಸಿದ್ದ ಮನೆಯನ್ನೇ ಖಾಲಿ ಮಾಡಿದ್ದಾರೆ. ಮೂರು ಮನೆಗಳು ತ್ಯಾಜ್ಯ ರಾಶಿಯೊಳಗೆ ಮರೆಯಾಗಿದ್ದು, ಸುಮಾರು 5,000ಕ್ಕೂ ಅಧಿಕ ಅಡಿಕೆ-ತೆಂಗಿನ ಮರಗಳು ತ್ಯಾಜ್ಯ ರಾಶಿಗೆ ಆಹುತಿಯಾಗಿದೆ. ವಾರದ ಹಿಂದೆ ಶುರುವಾದ ಅನಾಹುತ ಮಾತ್ರ ಇನ್ನೂ ಇಲ್ಲಿ ನಿಂತಿಲ್ಲ. ಕಸದ ರೌದ್ರಾವತಾರಕ್ಕೆ ಮಂದಾರವೆಂಬ ಸುಂದರ ಊರು ಬೆಚ್ಚಿ ಬಿದ್ದು ಅಲ್ಲಿ ಅಕ್ಷರಶಃ ನರಕವೇ ಸೃಷ್ಟಿಯಾಗಿದೆ.

ಮನೆಬಿಟ್ಟ ಸುಮಾರು 23 ಮನೆಯವರಿಗೆ ಸದ್ಯ ಕುಲಶೇಖರದ ಬೈತುರ್ಲಿಯಲ್ಲಿರುವ ಗೃಹಮಂಡಳಿಯ ಫ್ಲ್ಯಾಟ್‌ನಲ್ಲಿ ಆಶ್ರಯ ನೀಡಲಾಗಿದೆ. ನಿರ್ವಸಿತರಿಗೆ ಎಲ್ಲ ವ್ಯವಸ್ಥೆಗಳನ್ನು ಸಮರ್ಪಕವಾಗಿ ನೀಡುವ ನೆಲೆಯಲ್ಲಿ ಮಾಜಿ ಮೇಯರ್‌ ಭಾಸ್ಕರ್‌ ಅವರು ಪ್ರತಿದಿನ ಹಗಲಿರುಳು ಸ್ಥಳದಲ್ಲಿದ್ದು ನಿರ್ವಸಿತರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಶ್ರೀ ಕ್ಷೇತ್ರ ಕುಡುಪುವಿನಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿದ್ದು, ಇಲ್ಲಿನ ಬಾವಿಗಳೆಲ್ಲ ಹಾಳಾದ ಕಾರಣದಿಂದ ತಾತ್ಕಾಲಿಕವಾಗಿ ಪಾಲಿಕೆ ಪೈಪ್‌ಲೈನ್‌ ವ್ಯವಸ್ಥೆ ಕಲ್ಪಿಸಲಾಗಿದೆ. ತಾತ್ಕಾಲಿಕವಾಗಿ ಹೊಸ ಕಚ್ಚಾ ರಸ್ತೆ ಕೂಡ ಮಾಡಲಾಗಿದೆ.

ಮನೆ ಬಿಟ್ಟು ಹೋಗಲ್ಲ!
ಗೋಪಾಲ ಮೊಲಿ, ಆನಂದ್‌ ಬೆಳ್ಚಾಡ, ಹರೀಶ್ಚಂದ್ರ ಅವರ ಮನೆಯವರು ಇನ್ನೂ ಕೂಡ ತಾವಿರುವ ಮನೆ ಬಿಟ್ಟು ಎಲ್ಲೂ ಹೋಗಲ್ಲ ಎಂದು ಹಠ ಹಿಡಿದಿದ್ದಾರೆ. ಇಲ್ಲಿಂದ ಬಿಟ್ಟು ಹೋಗುವುದಾದರೂ ಎಲ್ಲಿಗೆ? ಅಲ್ಲಿ ಮಾಡುವುದಾದರು ಏನು? ಎಂದು ಮನೆಯ ಮಹಿಳೆಯರು ನೊಂದು ಪ್ರಶ್ನಿಸುತ್ತಾರೆ. ಸಾಯುವುದಾದರೆ ಇಲ್ಲೇ ಎಂದು ಅವರು ಹಠ ಹಿಡಿದಿದ್ದಾರೆ. ನಮ್ಮ ನೆಮ್ಮದಿಯ ಬದುಕಿಗೆ ತ್ಯಾಜ್ಯ ರಾಶಿಯಿಂದ ಬೆಂಕಿ ಬಿದ್ದಿದೆ. ಇನ್ನು ಜೀವನ ಇದ್ದರೇನು ಫಲ; ಇರುವ ಎಲ್ಲ ಭೂಮಿಯೂ ಹೋಗಿದೆ; ನಾವೂ ಇದರಲ್ಲೇ ಹೋಗುತ್ತೇವೆ’ ಎನ್ನುತ್ತಾರೆ ಅವರು.

ಕಳೆದ ವರ್ಷ ಕೊಳೆರೋಗ; ಈ ಬಾರಿ ತೋಟವೇ ಇಲ್ಲ!
ಕಳೆದ ವರ್ಷ ಕೊಳೆರೋಗದಿಂದ ಅಡಿಕೆ ತೋಟ ಹೋಗಿತ್ತು. ಎಲ್ಲಾ ತೋಟದವರು ಅಡಿಕೆ ಈ ಬಾರಿ ಏನೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಆದರೆ, ಈಗ ಅಂತಹ ಅಡಿಕೆ ತೋಟವೇ ಇಲ್ಲ. ಮೊನ್ನೆ ಮೊನ್ನೆ ಇದ್ದ ಅಡಿಕೆ ಮರ ಎಲ್ಲಿದೆ ಎಂಬ ಸಣ್ಣ ಕುರುಹೂ ಕೂಡ ಈಗ ಉಳಿದಿಲ್ಲ ಎನ್ನುತ್ತಾರೆ ಸ್ಥಳೀಯರಾದ ಉದಯ್‌ ಕುಮಾರ್‌.

Advertisement

ತೋಡು-ತೋಟ-ಮನೆಯಲ್ಲಿ ಗಲೀಜು ನೀರು
ಮಂದಾರದಲ್ಲಿ ತ್ಯಾಜ್ಯ ವ್ಯಾಪಿಸಿದ ಪರಿಣಾಮ ಗಲೀಜು ನೀರು ಇಲ್ಲಿನ ಮುಖ್ಯ ತೋಡುಗಳಲ್ಲಿ ಆವರಿಸಿಕೊಂಡಿದೆ. ಇಲ್ಲಿದ್ದ 3-4 ಬಾವಿ ತ್ಯಾಜ್ಯ ರಾಶಿಯಿಂದ ಮುಚ್ಚಿಹೋಗಿದ್ದರೆ, ಸದ್ಯ ಇರುವ 203 ಬಾವಿಗಳಿಗೆ ತ್ಯಾಜ್ಯ ನೀರು ಹರಿದು ಸಂಪೂರ್ಣ ಹಾಳಾಗಿವೆ. ರವೀಂದ್ರ ಭಟ್‌ ಸಹಿತ ಹಲವರ ಮನೆಯ ಸುತ್ತಲೂ ತ್ಯಾಜ್ಯದ ಜತೆಗೆ ಕಲುಷಿತ ನೀರು ಆವರಿಸಿದೆ. ಹೀಗಾಗಿ ವಾಸನೆಯಿಂದ ಇಲ್ಲಿ ಕಾಲಿಡಲೂ ಆಗುತ್ತಿಲ್ಲ.

ಎಲ್ಲವನ್ನು ಕಳೆದ ನಾವೇನು ಮಾಡಲಿ ?
ಭೋಜ ಮೊಲಿ ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರು. ತೋಟದಲ್ಲಿ ಬರುವ ಅಡಿಕೆ-ತೆಂಗು ಮಾರಿ ಜೀವನ ನಿರ್ವ ಹಿಸುತ್ತಿದ್ದರು. ಆದರೆ ತ್ಯಾಜ್ಯ ರಾಶಿ ಇವರ ಮನೆಯ ಮುಂದೆ ಧಾಂಗುಡಿ ಇಟ್ಟ ದೃಶ್ಯ ನೋಡಿದ ಭೋಜ ಅವರು ಈಗ ಆಘಾತಕ್ಕೆ ಒಳಗಾಗಿದ್ದಾರೆ. ಸದ್ಯ ಈ ಕುಟುಂಬ ಗೃಹಮಂಡಳಿಯಲ್ಲಿ ಆಶ್ರಯ ಪಡೆಯುತ್ತಿದೆ. “ಸುದಿನ’ ಜತೆಗೆ ಮಾತನಾಡಿದ ಅವರ ಪತ್ನಿ, “ನಮ್ಮ ಬಂಗಾರದಂತಹ ಭೂಮಿ-ಮನೆ-ತೋಟ ಬಿಟ್ಟು ನಾವು ಇಲ್ಲಿ ಬಂದಿದ್ದೇವೆ. ತೋಟವನ್ನೇ ನಂಬಿದ್ದ ನಮಗೆ ಈಗ ತೋಟವೇ ಇಲ್ಲ. ಈಗ ಫ್ಲ್ಯಾಟ್‌ಗೆ ಬಂದರೂ ಇಲ್ಲಿ ನಾವೇನು ಮಾಡಲು ಸಾಧ್ಯ. ನಾನು-ಗಂಡ ಪ್ರಾಯದವರು. ಅವರಿಗೆ ಪ್ರತೀ ವಾರ ಔಷಧಕ್ಕೆ 1,000 ರೂ. ಬೇಕು. ಕೆಲಸ ಮಾಡಲು ಆಗಲ್ಲ. ಮಗಳಿಬ್ಬರಿಗೂ ಆರೋಗ್ಯ ಸರಿ ಇಲ್ಲ. ಹೀಗಾಗಿ ದಿನದ ಖರ್ಚಿಗೆ ನಾವೇನು ಮಾಡಲಿ? ಎಂದು ಕಣ್ಣೀರಿಟ್ಟರು.

 ಈ ವಾರದಲ್ಲಿ ವಿಶೇಷ ಸಭೆ
ಮಂದಾರದಲ್ಲಿ ನಿರ್ವಸಿತರಾದವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಮುಂದಿನ ಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಈ ವಾರ ವಿಶೇಷ ಸಭೆ ನಡೆದು, ಪರ್ಯಾಯ ವ್ಯವಸ್ಥೆಗಳ ಬಗ್ಗೆ ನಿರ್ಧರಿಸಲಾಗುವುದು. ಮಳೆ ನಿಂತ ಕೂಡಲೇ ತ್ಯಾಜ್ಯವನ್ನು ವಿಲೇವಾರಿ ಮಾಡುವ ನೆಲೆಯಲ್ಲಿ ನುರಿತರಿಂದ ಸಲಹೆ ಪಡೆದು ಕ್ರಮ ವಹಿಸಲಾಗುವುದು.
 - ಮೊಹಮ್ಮದ್‌ ನಝೀರ್‌, ಮನಪಾ ಆಯುಕ್ತರು

Advertisement

Udayavani is now on Telegram. Click here to join our channel and stay updated with the latest news.

Next