ಮಹಾನಗರ : ನಿರಂತರವಾಗಿ ಸುರಿದ ಭಾರೀ ಮಳೆಯ ಪರಿಣಾಮ ನಗರದ ಪಚ್ಚನಾಡಿಯಲ್ಲಿರುವ ಪ್ರಮುಖ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಹಾಕಿರುವ ತ್ಯಾಜ್ಯ ಗುಡ್ಡೆಯು ಮಳೆ ನೀರಿನೊಂದಿಗೆ ಕೆಳಗೆ ಸರಿದಿದ್ದು, ಸ್ಥಳೀಯವಾಗಿ ಆತಂಕ ಸೃಷ್ಟಿಯಾಗಿದೆ.
ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಮಣ್ಣಿನ ಮೇಲೆ ಮಳೆ ನೀರು ನಿಂತು ತ್ಯಾಜ್ಯ ರಾಶಿ ಸರಿಯಲು ಆರಂಭಿಸಿದೆ.
ಮಂಗಳವಾರ ಕಸದ ರಾಶಿಯ ಅರ್ಧ ಭಾಗ ಮಳೆ ನೀರಿನೊಂದಿಗೆ ಸರಿದು ಹತ್ತಿರದ ನಿವಾಸಿಯೊಬ್ಬರ ತೋಟದವರೆಗೆ ಬಂದಿದೆ. ಕಸದ ರಾಶಿ, ತ್ಯಾಜ್ಯ ಹಾಗೂ ಮಳೆ ನೀರು ಜತೆಯಾಗಿ ಹರಿದ ಪರಿಣಾಮ ಇಲ್ಲಿ ವಾಸನೆ ತುಂಬಿಕೊಂಡಿದೆ.
ಕುಡಿಯುವ ನೀರು ಡೇಂಜರ್ ಈಗಾಗಲೇ ತ್ಯಾಜ್ಯ ವ್ಯಾಪಿಸಿದ ಈ ಪ್ರದೇಶದಲ್ಲಿ ಕುಡಿಯುವ ನೀರು ಬಹಳಷ್ಟು ಅಪಾಯಕಾರಿ ಎಂಬ ಬಗ್ಗೆ ದೂರುಗಳಿತ್ತು. ಈ ಮಳೆ ನೀರಿನೊಂದಿಗೆ ತ್ಯಾಜ್ಯವೂ ಹರಿದು ಹೋಗಿರುವುದರಿಂದ ಸ್ಥಳೀಯ ಬಾವಿ ನೀರು ಇನ್ನಷ್ಟು ಕಲುಷಿತವಾಗುವ ಅಪಾಯವಿದೆ.
10 ವರ್ಷಗಳ ಕಸ!
ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಲ್ಲಿ ಸುಮಾರು 77.93 ಎಕರೆ ಜಾಗವಿದೆ.
ಇದರಲ್ಲಿ 10 ಎಕರೆ ವ್ಯಾಪ್ತಿಯಲ್ಲಿ ಕಸ ತುಂಬಿಸಿ ಅದನ್ನು ಮಣ್ಣು ಹಾಕಿ ಸಮತಟ್ಟು ಮಾಡಲಾಗಿದೆ. ಅದರ ಬಳಿಯಲ್ಲಿಯೇ ಈ ಸುಮಾರು 12 ಎಕರೆ ಜಾಗದಲ್ಲಿ ಕಳೆದ 8-10 ವರ್ಷಗಳಿಂದ ತ್ಯಾಜ್ಯವನ್ನು ಸುರಿಯಲಾಗುತ್ತಿದೆ.