Advertisement

ಮಂದಾರ ತ್ಯಾಜ್ಯ ಕುಸಿತ: ಜಿಲ್ಲಾ ಕಾಂಗ್ರೆಸ್‌ ನಿಯೋಗ ಭೇಟಿ

08:42 PM Aug 21, 2019 | mahesh |

ಮಹಾನಗರ: ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಿಂದ ತ್ಯಾಜ್ಯ ರಾಶಿಯು ಜರಿದು ಮಂದಾರ ಪರಿಸರದಲ್ಲಿ ವ್ಯಾಪಿಸಿರುವ ಪ್ರದೇಶಕ್ಕೆ ದ.ಕ. ಜಿಲ್ಲಾ ಕಾಂಗ್ರೆಸ್‌ನ ನಿಯೋಗ ಬುಧವಾರ ಭೇಟಿ ನೀಡಿ ಪರಾಮರ್ಶಿಸಿದೆ.

Advertisement

ಮಂದಾರದಲ್ಲಿ ಸಂಭವಿಸಿದ ಘಟನೆ, ಅದರಿಂದ ನಿರಾಶ್ರಿತರಾಗುವವರಿಗೆ ಪುನರ್ವಸತಿ, ತ್ಯಾಜ್ಯವನ್ನು ತೆಗೆಯುವ ಸಂಬಂಧ ಸೂಕ್ತ ಕ್ರಮಗಳನ್ನು ಕೈಗೊ ಳ್ಳುವಂತೆ ನಿಯೋಗವು ವರದಿಯನ್ನು ರಾಜ್ಯ, ಕೇಂದ್ರ ಸರಕಾರಕ್ಕೆ ನೀಡಲಿವೆ.

ಮಾಜಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯ ನಿಯೋಗದಲ್ಲಿ ಮಾಜಿ ಸಚಿವ ಮತ್ತು ಶಾಸಕ ಯು.ಟಿ ಖಾದರ್‌, ವಿ.ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ನೇತೃತ್ವ ವಹಿಸಿದ್ದರು.

ಸುದ್ದಿಗಾರರ ಜತೆಗೆ ಮಾತನಾಡಿದ ಶಾಸಕ ಯು.ಟಿ. ಖಾದರ್‌, ಪಚ್ಚನಾಡಿ ಯಲ್ಲಿ ತ್ಯಾಜ್ಯರಾಶಿಯು ಕುಸಿದು ಮಂದಾರ ವ್ಯಾಪ್ತಿಯಲ್ಲಿ ಹರಡಿರುವ ಕಾರಣದಿಂದ ಸ್ಥಳೀಯ ಜನರು ಸಂಕಷ್ಟ ಎದುರಿಸುವಂತಾಗಿದೆ. ಇಲ್ಲಿನವರು ಮನೆಬಿಟ್ಟು ಹೋಗುವ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿಯೇ ವಿಶೇಷ ಮಾದರಿಯ ಪ್ರಕೃತಿ ವಿಕೋಪ ಇಲ್ಲಿ ಸಂಭವಿಸಿದ್ದು, ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಮುಖ್ಯಮಂತ್ರಿಗಳು ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಬೇಕಿತ್ತು ಎಂದರು.

ಮಳೆ ನಿಂತ ಬಳಿಕದ ಕೆಲವೇ ದಿನಗಳಲ್ಲಿ ಇಲ್ಲಿನ ತ್ಯಾಜ್ಯದಿಂದ ಇನ್ನೊಂದು ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಇದು ನಗರಕ್ಕೂ ಸಮಸ್ಯೆಯಾಗಲಿದೆ. ಹೀಗಾಗಿ ಮಂದಾರಕ್ಕೆ ಮಾತ್ರ ಎದುರಾದ ಸಮಸ್ಯೆ ಎಂದು ಇಲ್ಲಿ ಪರಿಗಣಿಸಬಾರದು. ಆಡಳಿತ ವ್ಯವಸ್ಥೆ ತುರ್ತು ನೆಲೆಯಲ್ಲಿ ಇದಕ್ಕೆ ಸ್ಪಂದಿಸಬೇಕಿದೆ ಎಂದರು.

Advertisement

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಮಂದಾರದಲ್ಲಿ ಉಂಟಾ ಗಿರುವ ತ್ಯಾಜ್ಯ ಸಮಸ್ಯೆಯನ್ನು ರಾಜ್ಯ ಸರಕಾರ ತುರ್ತು ನೆಲೆಯಲ್ಲಿ ವಿಲೇವಾರಿ ಮಾಡಿ ಇಲ್ಲಿನ ಸ್ಥಳೀಯರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡಬೇಕು ಎಂದರು. ಮಾಜಿ ಶಾಸಕ ಮೊದಿನ್‌ ಬಾವ, ಮಾಜಿ ಮೇಯರ್‌ಗಳಾದ ಎಂ. ಶಶಿಧರ ಹೆಗ್ಡೆ, ಕೆ. ಭಾಸ್ಕರ್‌, ಕವಿತಾ ಸನಿಲ್‌ ಉಪಸ್ಥಿತರಿದ್ದರು.

ಮಳೆ ಬಂದರೂ/ಬಾರದಿದ್ದರೂ ಅಪಾಯ!
ಸದ್ಯ ಮಂದಾರದಲ್ಲಿ ತ್ಯಾಜ್ಯರಾಶಿಯು ಜರಿಯುತ್ತಿರುವುದು ನಿಂತಿದೆಯಾದರೂ ಮಳೆ ಬಂದರೆ ಇನ್ನಷ್ಟು ಅಪಾಯ ಎದುರಾಗುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ತ್ಯಾಜ್ಯರಾಶಿ ಮುಂದೆ ಹೋಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಗದ್ದೆಗೆ ಮಣ್ಣುಹಾಕುವ ಕಾರ್ಯಕ್ಕೆ ಉದ್ದೇಶಿಸಲಾಯಿತಾದರೂ ಸದ್ಯ ಇಲ್ಲಿಗೆ ವಾಹನಗಳು ತೆರಳಲು ರಸ್ತೆ ವ್ಯವಸ್ಥೆ ಇರಲಿಲ್ಲ. ಮೂರು ದಿನಗಳಿಂದ ಇದಕ್ಕಾಗಿ ಪರ್ಯಾಯ ರಸ್ತೆ ನಿರ್ಮಾಣದ ಕೆಲಸ ನಡೆಯುತ್ತಿದೆ.

ಹೀಗಾಗಿ ಮಣ್ಣುಹಾಕಿ ತಡೆಗೋಡೆ ನಿರ್ಮಿಸುವುದು ಇನ್ನಷ್ಟೇ ನಡೆಯಬೇಕಿದೆ. ಒಂದು ವೇಳೆ ಈ ಕಾಮಗಾರಿ ನಡೆಯುವ ಮೊದಲು ಮಳೆ ಬಂದರೆ ತ್ಯಾಜ್ಯ ಇನ್ನಷ್ಟು ಜರಿಯುವ ಸಾಧ್ಯತೆಯಿದೆ. ಈ ಮಧ್ಯೆ ಮಳೆ ಬಾರದಿದ್ದರೆ ತ್ಯಾಜ್ಯರಾಶಿ ಅಲ್ಲೇ ಕೊಳೆತು ಜನರಿಗೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಅಪಾಯವೂ ಇಲ್ಲಿ ಇದೆ.

Advertisement

Udayavani is now on Telegram. Click here to join our channel and stay updated with the latest news.

Next