Advertisement

ಪಚ್ಚನಾಡಿ ಮೇಲ್ಸೇತುವೆ; ವಾರದೊಳಗೆ ಸಂಚಾರಕ್ಕೆ ಲಭ್ಯ

08:45 PM Nov 12, 2021 | Team Udayavani |

ಪಚ್ಚನಾಡಿ: ಇಲ್ಲಿಯ ರೈಲ್ವೇ ಮೇಲ್ಸೇತುವೆ ವಾರದೊಳಗೆ ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆ ಇದೆ.

Advertisement

ಬೋಂದೆಲ್‌- ಪಚ್ಚನಾಡಿ ನಡುವಣ ಹೊಸ ಮೇಲ್ಸೇ ತುವೆ ಕಾಮಗಾರಿಯ ಕಾರಣ, ವಾಹನ ಸಂಚಾರಕ್ಕೆ ಪರ್ಯಾಯವಾಗಿ ಕಾಂಕ್ರೀಟ್‌ ರಸ್ತೆ ನಿರ್ಮಿಸಿ, ರೈಲ್ವೇ ಲೆವೆಲ್‌ ಕ್ರಾಸಿಂಗ್‌ ಗೇಟ್‌ ನಿರ್ಮಿಸಲಾಯಿತು. ಮೇಲ್ಸೇತುವೆಯ ಇಕ್ಕೆಲಗಳಲ್ಲಿ ಕಾಂಕ್ರೀಟ್‌ ಹಾಕಲು ಅ. 10ರಿಂದ ಈ ಪರ್ಯಾಯ ರಸ್ತೆಯನ್ನು ಮುಚ್ಚಲಾಗಿತ್ತು. ಇದೀಗ ಸೇತುವೆ ಕಾಮಗಾರಿ ಪೂರ್ಣಗೊಳ್ಳುತ್ತಿದ್ದು, ವಾರದೊಳಗೆ ಸಾರ್ವಜನಿಕರ ಲಘು ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ.

ಮೊದಲ ಹಂತದಲ್ಲಿ ದ್ವಿಚಕ್ರ ವಾಹನಗಳು, ನಾಲ್ಕು ಚಕ್ರದ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ. ಎರಡು ವಾರದೊಳಗೆ ಬಸ್‌ ಸಂಚಾರಕ್ಕೂ ಅನುವು ಮಾಡಿಕೊಡುವ ಸಾಧ್ಯತೆ ಇದೆ.

ರೈಲ್ವೇ ಮೇಲ್ಸೇತುವೆಯ ಎರಡೂ ಬದಿಯ ತಡೆಗೋಡೆ ನಿರ್ಮಾಣವಾಗಿದೆ. ಕಾಂಕ್ರೀಟ್‌ ಹಾಕಿದ್ದು, ಕೆಲವು ಭಾಗದಲ್ಲಿ ಕ್ಯೂರಿಂಗ್‌ ಬಾಕಿ ಇದೆ. ಮೇಲ್ಸೇತುವೆ ಮತ್ತು ಸಂಪರ್ಕ ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲಾಗುತ್ತಿದೆ. ಮೇಲ್ಸೇತುವೆ ಮತ್ತು ರಸ್ತೆಯ ತಡೆಗೋಡೆಯ ಎರಡೂ ಬದಿಗೆ ಬಣ್ಣ ಹಚ್ಚಲಾಗುತ್ತಿದೆ.

ಅಪಾಯಕಾರಿ ತಿರುವು; ಧರೆಗೆ ಕತ್ತರಿ:

Advertisement

ಮೇಲ್ಸೇತುವೆ ಪೂರ್ಣಗೊಂಡರೆ ಸುತ್ತಮುತ್ತಲ ಹಲವು ಜನವಸತಿ ಪ್ರದೇಶಗಳಿಗೆ ಪ್ರಯೋಜನ. ನಂತೂರು, ಬಿಕರ್ನಕಟ್ಟೆ, ಕುಲಶೇಖರ ಸೇರಿದಂತೆ ಟ್ರಾಫಿಕ್‌ ಸಮಸ್ಯೆಗೆ ತುಸು ಪರಿಹಾರ ಸಿಗಲಿದೆ. ಬಜ್ಪೆಯ ವಿಮಾನ ನಿಲ್ದಾಣದಿಂದ ಆಗಮಿಸುವವರು ಬೋಂದೆಲ್‌ ಬಳಿ ತಿರುವು ಪಡೆದು ಮಂಗಳಾಜ್ಯೋತಿ ಜಂಕ್ಷನ್‌ ಮುಖೇನ ಪಿಲಿಕುಳ, ಕಟೀಲು, ಮೂಡುಬಿದಿರೆ, ಮಂಗಳೂರು ನಗರದ ಸಂಪರ್ಕ ಪಡೆಯಬಹುದು.

ವೈದ್ಯನಾಥ ನಗರ ಬಸ್‌ ತಂಗುದಾಣ ಬಳಿಯ ತಿರುವು ಅಪಘಾತ ವಲಯವಾಗುವ ಅಪಾಯವಿದೆ. ಇದೇ ಕಾರಣಕ್ಕೆ ಸದ್ಯ ಅಲ್ಲೇ ಪಕ್ಕದ ಧರೆ ಅಗೆಯುತ್ತಿದ್ದು, ಸ್ಪೀಡ್‌ ಬ್ರೇಕರ್‌ ಅಳವಡಿಸಲು ಯೋಜನೆ ರೂಪಿಸಲಾಗುತ್ತಿದೆ.

ಉಚಿತ ವಾಹನ ವ್ಯವಸ್ಥೆ:

ಈ ಕಾಮಗಾರಿ ಹಿನ್ನೆಲೆಯಲ್ಲಿ ಸ್ಥಳೀಯರ ಓಡಾಟಕ್ಕೆ ಅವಕಾಶ ಕಲ್ಪಿಸಲು ಮನಪಾ ಸದಸ್ಯೆ ಸಂಗೀತ ನಾಯಕ್‌ ಮತ್ತು ಊರ ದಾನಿಗಳ ನೇತೃತ್ವದಲ್ಲಿ ಉಚಿತ ವಾಹನ ಸೇವೆ ನೀಡುತ್ತಿದ್ದಾರೆ. ಬೋಂದೆಲ್‌ ಮತ್ತು ವಾಮಂಜೂರಿಗೆ ತೆರಳಲು ಸುಮಾರು 1 ಕಿ.ಮೀ.ಗೂ ಹೆಚ್ಚು ನಡೆದೇ ಸಾಗಬೇಕು. ಈ ಉದ್ದೇಶಕ್ಕೆ ಜನರನ್ನು ಕರೆದೊಯ್ಯಲು ಕಾರು, ಟೆಂಪೋ ಟ್ರಾವೆಲರ್‌ ವ್ಯವಸ್ಥೆ ಮಾಡಲಾಗಿದೆ.

ಐದು ವರ್ಷದ ಬಳಿಕ:

ಈ ರೈಲ್ವೆ ಮೇಲ್ಸೇತುವೆ ಆರಂಭಗೊಂಡು ಈ ಡಿಸೆಂಬರ್‌ ಗೆ ಐದು ವರ್ಷ ಪೂರ್ಣಗೊಳ್ಳಲಿದೆ. ಮೂರು ವರ್ಷಗಳ ಕಾಲ ಕಾಮಗಾರಿ ಕುಂಟುತ್ತಿತ್ತು. ಇದರ ಬಳಿಯೇ ಕಾಂಕ್ರೀಟ್‌ ರಸ್ತೆ ನಿರ್ಮಿಸಿ, ತಾತ್ಕಾಲಿಕ ಲೆವೆಲ್‌ ಕ್ರಾಸಿಂಗ್‌ ವ್ಯವಸ್ಥೆ ಮಾಡಿದರೂ ಸ್ಥಳೀಯರಿಗೆ ಸಮಸ್ಯೆ ಉಂಟಾಗುತ್ತಿತ್ತು. ಒಂದು ಬಾರಿ ಗೇಟ್‌ ಹಾಕಿದರೆ ಸಾಲುಗಟ್ಟಲೆ ವಾಹನಗಳು ನಿಲ್ಲುತ್ತಿದ್ದವು. ಈ ವರ್ಷಾರಂಭದಲ್ಲಿ ಮೇಲ್ಸೇ ತುವೆಗೆ ಪ್ರೀ ಫ್ಯಾಬ್ರಿಕ್‌ ಕಾಂಕ್ರೀಟ್‌ ವ್ಯವಸ್ಥೆ ಅಳವಡಿಸಲು ರೈಲ್ವೇ ಇಲಾಖೆ ಮುಂದಾಗಿತ್ತು. ಬಳಿಕ ಕಾಮಗಾರಿಗೆ ವೇಗ ದೊರಕಿತು.

Advertisement

Udayavani is now on Telegram. Click here to join our channel and stay updated with the latest news.

Next