ವಾಡಿ: ಯುವಕರು ಗುಂಪು ಕಟ್ಟಿಕೊಂಡು ರೌಡೀಸಂ ಅಪ್ಪಿಕೊಂಡರೆ ಜೈಲುವಾಸವೇ ಅವರ ಬದುಕಾಗುತ್ತದೆ. ಒಮ್ಮೆಪೊಲೀಸ್ ಇಲಾಖೆಯಲ್ಲಿ ರೌಡಿ ಶೀಟರ್ ಎಂದು ಹೆಸರು ದಾಖಲಾದರೆ ಅಂತಹವರ ಭವಿಷ್ಯ ಸರ್ವನಾಶವಾಗುತ್ತದೆ ಎಂದು ಶಹಾಬಾದ ಡಿವೈಎಸ್‌ಪಿ ವೆಂಕನಗೌಡ ಪಾಟೀಲ ಹೇಳಿದರು.
ಕ್ಷುಲ್ಲಕ ಕಾರಣಕ್ಕೆ ಗುಂಪು ದಾಳಿಯಿಂದ ನಡೆದ ಜ್ಯೋತಿಷಿ ಸುರೇಶ ವಾಸ್ಟರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವಿವಾರ ಹಳಕರ್ಟಿ ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಏರ್ಪಡಿಸಲಾಗಿದ್ದ ಶಾಂತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಕೋಮು ಸೌಹಾರ್ದತೆ ಕಾಪಾಡಿಕೊಂಡು ಹೋಗುತ್ತಿರುವ ಗ್ರಾಮದಲ್ಲಿ ಬಿಸಿರಕ್ತದ ಯುವಕರು ಪುಂಡಾಟಿಕೆ ಮೆರೆದರೆ ಶಾಂತಿಗೆ ಭಂಗ ಉಂಟಾಗುತ್ತದೆ. ಯಾವುದೇ ಸಮಸ್ಯೆಗೆ ಹೊಡೆದಾಟ ಪರಿಹಾರವಲ್ಲ. ನ್ಯಾಯ ದೊರಕಿಸಿಕೊಡಲು ಪೊಲೀಸ್ ಇಲಾಖೆಯಿದೆ. ಪ್ರಾಣ ತೆಗೆಯುವುದು ಕಾನೂನುಬಾಹಿರ ಕೃತ್ಯ. ರೌಡಿಸಂ ಪ್ರವೃತ್ತಿ ಬೆಳೆಸಿಕೊಂಡ ಯುವಕರಿಗೆ ಪೋಷಕರು ಬುದ್ಧಿವಾದ ಹೇಳಬೇಕು. ಆನಂತರ ಆ ಸಮುದಾಯಗಳ ಮುಖಂಡರು ಎಚ್ಚರಿಕೆ ನೀಡಿ, ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು. ಮೀರಿದರೆ ಕೊನೆಗೆ ಕಾನೂನು ಸರಿಯಾದ ಪಾಠ ಹೇಳಿಕೊಡುತ್ತದೆ. ಎಂಥಹದ್ದೇ ಪ್ರಭಾವಿ ವ್ಯಕ್ತಿಯಿದ್ದರೂ ಕಾನೂನಿನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಚಿತ್ತಾಪುರ ಸಿಪಿಐ ಕೃಷ್ಣಪ್ಪ ಕಲ್ಲದೇವರು ಮಾತನಾಡಿ, ರೌಡಿಸಂ ಮತ್ತು ದಾದಾಗಿರಿ ನಿಮ್ಮ ಮನೆಯಲ್ಲಿರಲಿ. ಅದೇನಾದರೂ ಬೀದಿಗೆ ತಂದರೆ ಪಾತಾಳದಲ್ಲಿ ಅಡಗಿ ಕುಳಿತರೂ ಕಾನೂನು ಅವರನ್ನು ಬಿಡುವುದಿಲ್ಲ. ಗ್ರಾಮದ ಸ್ವಾಸ್ಥ್ಯ ಹಾಳುಮಾಡುವಂತ ಯುವಕರನ್ನು ಆಯಾ ಸಮಾಜದ ಮುಖಂಡರೇ ಹಿಡಿತದಲ್ಲಿಟ್ಟುಕೊಳ್ಳಬೇಕು. ಹಳಕರ್ಟಿ ಗ್ರಾಮದಲ್ಲಿ ಒಟ್ಟು ಎರಡು ಕೊಲೆಗಳ ಪ್ರಕರಣ ಘಟಿಸಿವೆ. ಜ್ಯೋತಿಷಿಯನ್ನು ಕೊಂದ ಘಟನೆಯಲ್ಲಿ ಏಳು ಜನ ಆರೋಪಿಗಳನ್ನು ಬಂಧಿ ಸಿ ಜೈಲಿಗೆ ಕಳುಹಿಸಲಾಗಿದೆ. ಸಾಕ್ಷಿಗಳು ಸಹಕಾರ ನೀಡಿದರೆ ತಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಆದರೆ ಇಂಥಹ ಪ್ರಕರಣಗಳು ಇನ್ಮುಂದೆ ನಡೆಯಬಾರದು. ಗ್ರಾಮದಲ್ಲಿ ಶಾಂತಿ, ಸಹಬಾಳ್ವೆಯಿಂದ ಬಾಳಬೇಕು ಎಂದರು.
ಕಟ್ಟಿಮನಿ ಹಿರೇಮಠದ ಶ್ರೀ ಮುನೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗ್ರಾಮದ ಹಿರಿಯ ಮುಖಂಡರಾದ ಮಲ್ಲಣ್ಣಸಾಹು ಸಂಗಶೆಟ್ಟಿ, ಈರಣ್ಣ ರಾವೂರಕರ, ಇಬ್ರಾಹಿಂ ಪಟೇಲ, ಅಜೀಜಪಾಷಾ ಪಟೇಲ, ಜಗದೀಶ ಸಿಂಧೆ, ರಾಘವೇಂದ್ರ ಅಲ್ಲಿಪುರಕರ ಮಾತನಾಡಿ, ಗ್ರಾಮದಲ್ಲಿ ಹಿಂದು-ಮುಸ್ಲಿಂ ಕೋಮು ಸೌಹಾರ್ದತೆ ಹದಗೆಡುತ್ತಿರುವ ಕುರಿತು ತಿಳಿಸಿದರು. ರಾಜುಗೌಡ ಪೊಲೀಸ್ ಪಾಟೀಲ, ಚಂದ್ರಕಾಂತ ಕೋಲಕುಂದಿ ಸೇರಿದಂತೆ ಗ್ರಾಮದ ವಿವಿಧ ಸಮುದಾಯಗಳ ಮುಖಂಡರು ಪಾಲ್ಗೊಂಡಿದ್ದರು. ಪಿಎಸ್‌ಐ ವಿಜಯಕುಮಾರ ಭಾವಗಿ ನಿರೂಪಿಸಿ, ವಂದಿಸಿದರು.