Advertisement

ಪಚ್ಚನಾಡಿ ಘಟಕದ ಕಲುಷಿತ ನೀರು ಫ‌ಲ್ಗುಣಿಗೆ: ಹೈಕೋರ್ಟ್‌ಗೆ ವರದಿ

01:18 AM Jul 09, 2021 | Team Udayavani |

ಬೆಂಗಳೂರು/ಮಂಗಳೂರು: ಪಚ್ಚನಾಡಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಬಿಡುಗಡೆಯಾದ ಕಲುಷಿತ ನೀರು ಫ‌ಲ್ಗುಣಿ ನದಿ ಹಾಗೂ ಮರವೂರು ಡ್ಯಾಂಗೆ ಸೇರುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹೈಕೋರ್ಟ್‌ಗೆ ವರದಿ ಸಲ್ಲಿಸಿದೆ.

Advertisement

ಈ ವಿಚಾರವಾಗಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾ| ಎ.ಎಸ್‌. ಓಕ್‌ ಹಾಗೂ ನ್ಯಾ| ಅಶೋಕ್‌ ನಿಜಗಣ್ಣನವರ್‌  ನೇತೃತ್ವ ದ ವಿಭಾಗೀಯ ನ್ಯಾಯಪೀಠಕ್ಕೆ ಗುರುವಾರ ಈ ವರದಿ ಸಲ್ಲಿಸಲಾಗಿದೆ.

ವಿಚಾರಣೆ ವೇಳೆ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರು ಜೂನ್‌ 24ಕ್ಕೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಿರುವ ವರದಿಯನ್ನು ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲ ಶ್ರೀಧರ ಪ್ರಭು ನ್ಯಾಯಪೀಠಕ್ಕೆ ಸಲ್ಲಿಸಿದರು. ಈ ವರದಿಯನ್ನು ಪರಿಶೀಲಿಸಿದ ನ್ಯಾಯಪೀಠ, ಸಂಬಂಧಪಟ್ಟ ಪರಿಸರ ಅಧಿಕಾರಿಯನ್ನು ತತ್‌ಕ್ಷಣ ಸ್ಥಳಕ್ಕೆ ಕಳುಹಿಸಿ ವಾಸ್ತವ ಸ್ಥಿತಿಯನ್ನು ಪರಿಶೀಲಿಸಿ ಅವರಿಂದ ಒಂದು ವಾರದಲ್ಲಿ ವರದಿ ಪಡೆದುಕೊಂಡು ನ್ಯಾಯಾಲಯಕ್ಕೆ ಸಲ್ಲಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಜು.16ಕ್ಕೆ ಮುಂದೂಡಿತು.

ವರದಿಯಲ್ಲಿ ಏನಿದೆ?:

“ಸಾರ್ವಜನಿಕರ ದೂರು ಆಧರಿಸಿ ವಾಸ್ತವ ಸ್ಥಿತಿ ತಿಳಿಯಲು ಜೂ.23ರಂದು ಪಚ್ಚನಾಡಿ ಹಾಗೂ ಮಂದಾರ ಗ್ರಾಮಗಳಿಗೆ ಭೇಟಿ ನೀಡಲಾಯಿತು. ಈ ವೇಳೆ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದರು. ಪಚ್ಚನಾಡಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಕಪ್ಪು ಬಣ್ಣದ ಕಲುಷಿತ ನೀರು ಫ‌ಲ್ಗುಣಿ ನದಿಯನ್ನು ಸೇರುತ್ತಿದೆ. ಇದೇ  ನದಿಗೆ  ಮರವೂರು ಡ್ಯಾಂ ಕಟ್ಟಲಾಗಿದೆ. ಈ ಡ್ಯಾಂ ಮೂಲಕ ಮಂಗಳೂರು ನಗರ ಹಾಗೂ  ಸುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತದೆ’ ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

ಶ್ರೀಮಂತ ರಾಜಗುಳಿಗ ದೈವಸ್ಥಾನದವರೆಗೆ  2ರಿಂದ 3 ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿ ಪರಿಸ್ಥಿತಿ ಅವಲೋಕಿಸಲಾಯಿತು. ಅಲ್ಲಿ ಎರಡು ಕಡೆ ಶುದ್ಧ ನೀರಿನಲ್ಲಿ ಕಪ್ಪು ಬಣ್ಣದ ನೀರು ಸೇರುತ್ತಿರುವುದು ಕಂಡು ಬಂದಿದೆ. ಈ ಭಾಗದ ಪ್ರತಿ ಹಳ್ಳ ಹಾಗೂ ಉಪ ನದಿ ಫ‌ಲ್ಗುಣಿ ನದಿ ಸೇರುತ್ತದೆ. ಇದೇ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಹಾಗಾಗಿ, ಸ್ಥಳೀಯರು ಆತಂಕದಲ್ಲಿದ್ದಾರೆ. ಕಲುಷಿತ ನೀರಿನಿಂದ ಮಲೇರಿಯಾ ಮತ್ತಿತರ ಕಾಯಿಲೆಗಳು ಹರಡುವ ಸಾಧ್ಯತೆಯಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಘನತ್ಯಾಜ್ಯ ಭೂಭರ್ತಿ ಘಟಕದಿಂದ ಕಲುಷಿತ ನೀರು ನದಿಗೆ ಸೇರುವುದರಿಂದ ಮಾನವ ನಿರ್ಮಿತ ವಿಪತ್ತು ನಿರ್ಮಾಣವಾಗಲಿದೆ. ಇದು ಜನಜೀವನವನ್ನು ಅಪಾಯಕ್ಕೆ ದೂಡಲಿದೆ. ಇದರಿಂದ ಫ‌ಲ್ಗುಣಿ ನದಿ ಕಲುಷಿತಗೊಳ್ಳುವುದರ ಜತೆಗೆ ಪರಿಸರಕ್ಕೆ ದೊಡ್ಡ ಹಾನಿ ಆಗಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next