ಬೆಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ, ಕುಡುಪು ಹಾಗೂ ಮಂದಾರ ಪ್ರದೇಶದಲ್ಲಿ ಘನತ್ಯಾಜ್ಯ ಘಟಕದಿಂದ ಉಂಟಾಗಿರುವ ಅನಾಹುತಗಳ ವಿಚಾರವಾಗಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮುಖ್ಯ ನ್ಯಾ| ಎ.ಎಸ್. ಓಕ್ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.
ಕೆಲ ಕಾಲ ವಾದ ಆಲಿಸಿದ ನ್ಯಾಯ ಪೀಠ ಅರ್ಜಿ ಸಂಬಂಧ, ರಾಜ್ಯ ಸರಕಾರ, ಕೇಂದ್ರ ಪರಿಸರ ಸಚಿವಾಲಯ, ಕೇಂದ್ರ ವಸತಿ ಮತ್ತು ನಗರ ವ್ಯವಹಾರ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಂಗಳೂರು ಜಿಲ್ಲಾಧಿಕಾರಿ ಹಾಗೂ ಮಹಾನಗರ ಪಾಲಿಕೆಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪ ಸಲ್ಲಿಸಲು ನಿರ್ದೇಶನ ನೀಡಿ ವಿಚಾರಣೆಯನ್ನು ಸೆ. 16ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಕೀಲ ಶ್ರೀಧರ ಪ್ರಭು ವಾದ ಮಂಡಿಸಿ, ಪಚ್ಚನಾಡಿ, ಕುಡುಪು ಹಾಗೂ ಮಂದಾರ ಪ್ರದೇಶದಲ್ಲಿ ಕಸ ಸುರಿದು ಸುತ್ತಲಿನ ಐದಾರು ಕಿ. ಮೀ. ವ್ಯಾಪ್ತಿಯಲ್ಲಿ ಜನ ವಾಸ ಮಾಡಲು ಸಾಧ್ಯವಿಲ್ಲ. ಮಳೆಗೆ 10 ಲಕ್ಷ ಮೆಟ್ರಿಕ್ ಟನ್ ಕಸ ಕೆಳಗೆ ಕುಸಿದು ಹಲವು ಕುಟುಂಬಗಳು ನೆಲೆ ಕಳೆದುಕೊಂಡಿವೆ. ಸದ್ಯ ಅಲ್ಲಿ 50 ಮೀಟರ್‌ನಷ್ಟು ಕಸ ನಿಂತಿದೆ. ಕಲುಷಿತ ನೀರು ಪಕ್ಕದ ನದಿಗೆ ಹರಿದು ಹೋಗುತ್ತಿದೆ. ಸಂತ್ರಸ್ತ ಕುಟುಂಬಗಳಿಗೆ ಘೋಷಿಸಿದ್ದ 22 ಕೋ. ರೂ. ಪರಿಹಾರ ಇನ್ನೂ ಸಿಕ್ಕಿಲ್ಲ. ತುಳು ಭಾಷೆಯಲ್ಲಿ ರಾಮಾಯಣ ಬರೆದ ಮಂದಾರ ಕೇಶವ ಭಟ್ಟ ಅವರ ಮನೆಯೂ ಕಸದಿಂದ ತುಂಬಿದೆ. ಈ ಅನಾಹುತದ ಬಗ್ಗೆ ಯಾವ ಆಡಳಿತ ಸಂಸ್ಥೆಯೂ ಕಾಳಜಿ ವಹಿಸುತ್ತಿಲ್ಲ. ಎಲ್ಲಾ ಯೋಜನೆಗಳು ಕಾಗದದಲ್ಲಿ ಮಾತ್ರ ಉಳಿದಿವೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.